ಬೆಂಗಳೂರು : ವಿದ್ಯಾರ್ಥಿಗಳಿಗೆ ಚೆರಸ್ ಚಾಕೊಲೇಟ್ ಮತ್ತು ಗಾಂಜಾ ಮಾರಾಟ : 6 ಮಂದಿ ಬಂಧನ

| Published : Nov 15 2024, 01:35 AM IST / Updated: Nov 15 2024, 04:30 AM IST

ಸಾರಾಂಶ

ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಚೆರಸ್ ಚಾಕೊಲೇಟ್ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಜಿಗಣಿ ಪೊಲೀಸರು ಬಂಧಿಸಿ 60 ಕೆ.ಜಿ ತೂಕದ ₹1.10 ಕೋಟಿ ಮೌಲ್ಯ ಬೆಲೆಬಾಳುವ ಚೆರಸ್ ಚಾಕೊಲೇಟ್ ಮತ್ತು ಅರ್ಧ ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

 ಬೆಂಗಳೂರು ದಕ್ಷಿಣ : ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಚೆರಸ್ ಚಾಕೊಲೇಟ್ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಜಿಗಣಿ ಪೊಲೀಸರು ಬಂಧಿಸಿ 60 ಕೆ.ಜಿ ತೂಕದ ₹1.10 ಕೋಟಿ ಮೌಲ್ಯ ಬೆಲೆಬಾಳುವ ಚೆರಸ್ ಚಾಕೊಲೇಟ್ ಮತ್ತು ಅರ್ಧ ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. 

ಉತ್ತರಪ್ರದೇಶ ಮೂಲದ ಜೀತು ಸಿಂಗ್, ಅಭಯ್ ಗೋಸ್ವಾಮಿ, ಸೋಮುಸಿಂಗ್, ಸೂರಜ್ ಸಿಂಗ್, ಅಂಕುರ್‌ಸಿಂಗ್‌ ಹಾಗೂ ಜಾರ್ಖಂಡ್‌ನ ಆನಂದ್ ಕುಮಾರ್ ಸಿಂಗ್ ಬಂಧಿತ ಆರೋಪಿಗಳು. ಜಿಗಣಿ ಕೆರೆ ಬಳಿ ಮೂರು ಮಂದಿ ಸರಕು ಸಾಗಾಣಿಜೆ ವಾಹನದಲ್ಲಿ ಗಾಂಜ ಮತ್ತು ಚೆರಸ್‌ ಚಾಕೋಲೇಟ್‌ ಮಾರಾಟ ಮಾಡುತ್ತಿದ್ದ ಮಾಹಿತಿ ಪಡೆದ ಜಿಗಣಿ ಪೊಲೀಸರು ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿ ಮೂರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. 

ಬಳಿಕ ಆರೋಪಿಗಳು ಮತ್ತೆ ಮೂವರ ವಿಚಾರವನ್ನು ತಿಳಿಸಿದ್ದಾರೆ. ಈ ಸಂಬಂಧ ಇನ್ನು ಮೂವರನ್ನು ಬಂಧಿಸಲಾಗಿದೆ. ಒಟ್ಟು ಆರು ಮಂದಿಯನ್ನು ಬಂಧಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳು ರಾಜಧಾನಿಯ ರಾಜಾಜಿನಗರದಲ್ಲಿ ವಾಸವಾಗಿದ್ದರು. ಆರೋಪಿಗಳಲ್ಲಿ ನಾಲ್ಕು ಮಂದಿ ಕೊರಿಯರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇನ್ನಿಬ್ಬರು ಸೂರಜ್‌ಸಿಂಗ್ ಮತ್ತು ಅಂಕು‌ ಸಿಂಗ್‌ ಪಾನ್‌ಪರಾಗ್ ಡಿಲವರಿ ಕೆಲಸ ಮಾಡಿಕೊಂಡಿದ್ದರು.ಆರೋಪಿಗಳು ಉತ್ತರಪ್ರದೇಶದ ಖಾನ್‌ಪುರದ ಮಹಾಲಕ್ಷ್ಮಿ ಫಾರ್ಮಾ ಕಂಪನಿಯಿಂದ ಚಾಕೊಲೇಟ್‌ಗಳನ್ನು ರೈಲಿನ ಮೂಲಕ ತರಿಸಿಕೊಂಡು ರೈಲ್ವೆ ಕೂಲಿ ಕಾರ್ಮಿಕರು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.