ಮನೆ ಮುಂದೆ ಕ್ಯಾಬ್ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಿರಿಯ ವಕೀಲರೊಬ್ಬರಿಗೆ ಚಾಕು ಇರಿದ

| Published : Nov 15 2024, 01:33 AM IST / Updated: Nov 15 2024, 04:32 AM IST

Taxi

ಸಾರಾಂಶ

ಮನೆ ಮುಂದೆ ಕ್ಯಾಬ್ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಜಗಳ ತೆಗೆದು ಹಿರಿಯ ವಕೀಲರೊಬ್ಬರಿಗೆ ಚಾಕು ಇರಿದ ಆರೋಪದ ಮೇರೆಗೆ ಕ್ಯಾಬ್ ಚಾಲಕನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಮನೆ ಮುಂದೆ ಕ್ಯಾಬ್ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಜಗಳ ತೆಗೆದು ಹಿರಿಯ ವಕೀಲರೊಬ್ಬರಿಗೆ ಚಾಕು ಇರಿದ ಆರೋಪದ ಮೇರೆಗೆ ಕ್ಯಾಬ್ ಚಾಲಕನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೊಳಗಾದ ನಾಗರಬಾವಿ 9ನೇ ಹಂತದ ನಿವಾಸಿ ವಿ.ದಳಪತಿ (70) ಅವರು ಖಾಸಗಿ ಆಸ್ಪತ್ಪೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೃತ್ಯ ಎಸಗಿ ಪರಾರಿಯಾಗಿದ್ದ ನಾಗರಬಾವಿ 2ನೇ ಹಂತದ ನಿವಾಸಿ ರಾಘವೇಂದ್ರನನ್ನು ಬಂಧಿಸಿ ಗುರುವಾರ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ಹಿರಿಯ ವಕೀಲ ದಳಪತಿ ಅವರ ಮನೆ ಮುಂದೆ ಬುಧವಾರ ಮಧ್ಯಾಹ್ನ ರಾಘವೇಂದ್ರ ಕ್ಯಾಬ್ ನಿಲ್ಲಿಸಿದ್ದ. ಆಗ ಕ್ಯಾಬ್ ತೆಗೆಯುವಂತೆ ಚಾಲಕನಿಗೆ ದಳಪತಿ ಅವರ ಸೊಸೆ ಹೇಳಿದ್ದಾರೆ. ಇದಕ್ಕೆ ಆಕ್ಷೇಪಿಸಿ ವಕೀಲರ ಕುಟುಂಬದವರ ಜತೆ ಆತ ಮಾತಿನ ಚಕಮಕಿ ನಡೆಸಿದ್ದಾನೆ. ಅದೇ ವೇಳೆ ನ್ಯಾಯಾಲಯದ ಕಲಾಪ ಮುಗಿಸಿಕೊಂಡು ಮಧ್ಯಾಹ್ನ 2 ಗಂಟೆಗೆ ಮನೆಗೆ ಮರಳಿದ ದಳಪತಿ ಅವರು, ತಮ್ಮ ಮನೆ ಮುಂದೆ ಕ್ಯಾಬ್ ಚಾಲಕ ಜತೆ ಕುಟುಂಬದವರು ಜಗಳವಾಡುತ್ತಿದ್ದನ್ನು ನೋಡಿ ಮಧ್ಯ ಪ್ರವೇಶಿಸಿದ್ದಾರೆ. ಈ ಹಂತದಲ್ಲಿ ವಕೀಲರ ವಿರುದ್ಧವೇ ತಿರುಗಿ ಬಿದ್ದ ರಾಘವೇಂದ್ರ, ಏಕಾಏಕಿ ಚಾಕುವಿನಿಂದ ದಳಪತಿ ಅವರಿಗೆ ಇರಿದು ಪರಾರಿಯಾಗಿದ್ದಾನೆ. ಕೂಡಲೇ ವಕೀಲರನ್ನು ಅವರ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಣದ ವಿಚಾರಕ್ಕೆ ಇರಿದೆ: ಆರೋಪಿ ಒಪ್ಪಿಗೆ

ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿ ರಾಘವೇಂದ್ರನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆಯಲ್ಲ. ಬಹಳ ದಿನಗಳಿಂದ ನನಗೆ ವಕೀಲ ದಳಪತಿ ಕುಟುಂಬದವರು ಪರಿಚಯವಿದ್ದು, ಹಣಕಾಸು ವಿಷಯವಾಗಿ ಅವರೊಂದಿಗೆ ಮನಸ್ತಾಪವಾಗಿತ್ತು. ಹಣ ಕೇಳುವ ಸಲುವಾಗಿ ಬುಧವಾರ ಮಧ್ಯಾಹ್ನ ಬಂದಿದ್ದೆ. ಆಗ ನಡೆದ ಜಗಳದಲ್ಲಿ ಕೋಪದಿಂದ ವಕೀಲರ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿ ರಾಘವೇಂದ್ರ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.