ಮಹಿಳೆಯೊಬ್ಬಳು ಪತಿ ಆಸ್ಪತ್ರೆಯಲ್ಲಿರುವಾಗ ಪತಿಯ ಬ್ಯಾಂಕ್‌ ಖಾತೆಯಿಂದ ₹42.50 ಲಕ್ಷ ಸಾಲ ಪಡೆದು ವಂಚನೆ

| Published : Nov 15 2024, 01:35 AM IST / Updated: Nov 15 2024, 04:29 AM IST

Money
ಮಹಿಳೆಯೊಬ್ಬಳು ಪತಿ ಆಸ್ಪತ್ರೆಯಲ್ಲಿರುವಾಗ ಪತಿಯ ಬ್ಯಾಂಕ್‌ ಖಾತೆಯಿಂದ ₹42.50 ಲಕ್ಷ ಸಾಲ ಪಡೆದು ವಂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯೊಬ್ಬಳು ತನ್ನ ಪತಿ ಆಸ್ಪತ್ರೆಯಲ್ಲಿರುವಾಗ ಪತಿಯ ಬ್ಯಾಂಕ್‌ ಖಾತೆಯಿಂದ ₹42.50 ಲಕ್ಷ ಸಾಲ ಪಡೆದು ಬಳಿಕ ಆ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಆರೋಪದಡಿ ಜೀವನಭೀಮಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬೆಂಗಳೂರು : ಮಹಿಳೆಯೊಬ್ಬಳು ತನ್ನ ಪತಿ ಆಸ್ಪತ್ರೆಯಲ್ಲಿರುವಾಗ ಪತಿಯ ಬ್ಯಾಂಕ್‌ ಖಾತೆಯಿಂದ ₹42.50 ಲಕ್ಷ ಸಾಲ ಪಡೆದು ಬಳಿಕ ಆ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಆರೋಪದಡಿ ಜೀವನಭೀಮಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುರುಗೇಶ್‌ಪಾಳ್ಯದ ಕಾವೇರಿ ನಗರ ನಿವಾಸಿ ಜೆ.ವಿಕ್ಟರ್‌(54) ಎಂಬುವವರು ನೀಡಿದ ದೂರಿನ ಮೇರೆಗೆ ಅವರ ಪತ್ನಿ ಅನಿತಾ ಪ್ರೇಮ್‌ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?: ದೂರುದಾರ ಜೆ.ವಿಕ್ಟರ್‌ ನೀಡಿದ ದೂರಿನ ಅನ್ವಯ,‘ನನ್ನ ಪತ್ನಿ ಅನಿತಾ ಪ್ರೇಮ್‌ ಆಗಾಗ ನನಗೆ ನಿದ್ದೆ ಮಾತ್ರೆಗಳು ಹಾಗೂ ನಶೆ ಪದಾರ್ಥಗಳನ್ನು ಸೇವನೆ ಮಾಡಿಸಿ ನಾನು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ್ದಾರೆ. ನಾನು ಆಸ್ಪತ್ರೆಯಲ್ಲಿ ಇದ್ದ ವೇಳೆ ನನ್ನ ಪತ್ನಿ ನನ್ನ ಬ್ಯಾಂಕ್‌ ಖಾತೆ ದುರುಪಯೋಗ ಮಾಡಿಕೊಂಡಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ನನ್ನ ಬ್ಯಾಂಕ್ ಖಾತೆಯಿಂದ ವಿವಿಧ ಹಂತಗಳಲ್ಲಿ ಒಟ್ಟು ₹42.50 ಲಕ್ಷ ಸಾಲ ಪಡೆದಿದ್ದಾರೆ. ಬಳಿಕ ಆ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ನಾನು ಅ.27ರಂದು ನನ್ನ ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ ವಿಚಾರ ಗೊತ್ತಾಗಿದೆ. ಈ ಬಗ್ಗೆ ಪತ್ನಿ ಅನಿತಾ ಪ್ರೇಮ್‌ ಅವರನ್ನು ಪ್ರಶ್ನೆ ಮಾಡಿದಾಗ ಯಾವುದೇ ಮಾಹಿತಿ ನೀಡಲಿಲ್ಲ. ಆಕೆ ಅ.28ರಂದು ನನಗೆ ತಿಳಿಸದೆ ಮನೆ ಬಿಟ್ಟು ಹೋಗಿದ್ದಾರೆ. ಹೀಗಾಗಿ ನನ್ನ ಬ್ಯಾಂಕ್‌ ಖಾತೆ ದುರುಪಯೋಗಪಡಿಸಿಕೊಂಡು ಸಾಲ ಪಡೆದು ಬಳಿಕ ಆ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿರುವ ಪತ್ನಿವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ’ ಜೆ.ವಿಕ್ಟರ್‌ ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.