ಕರ್ನಾಟಕದಿಂದ ಈವರೆಗೂ ಒಬ್ಬರೇ ಒಬ್ಬ ಮುಸ್ಲಿಂ ಮಹಿಳೆ ಲೋಕಸಭೆಗಿಲ್ಲ

| N/A | Published : Jul 21 2025, 12:00 AM IST / Updated: Jul 21 2025, 05:47 AM IST

Loksabha All Party Meeting
ಕರ್ನಾಟಕದಿಂದ ಈವರೆಗೂ ಒಬ್ಬರೇ ಒಬ್ಬ ಮುಸ್ಲಿಂ ಮಹಿಳೆ ಲೋಕಸಭೆಗಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಸ್ವಾತಂತ್ರ್ಯಗೊಂಡ ಬಳಿಕ ಈವರೆಗೆ ನಡೆದ 18 ಲೋಕಸಭಾ ಚುನಾವಣೆಗಳಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದು ಕೇವಲ ಹದಿನೆಂಟು ಮುಸ್ಲಿಂ ಮಹಿಳೆಯರು. ಅದರಲ್ಲೂ ಕರ್ನಾಟಕ ಸೇರಿ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಈವರೆಗೆ ಒಬ್ಬರೇ ಒಬ್ಬ ಮುಸ್ಲಿಂ ಮಹಿಳೆ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿಯೇ ಇಲ್ಲ!

ನವದೆಹಲಿ: ಭಾರತ ಸ್ವಾತಂತ್ರ್ಯಗೊಂಡ ಬಳಿಕ ಈವರೆಗೆ ನಡೆದ 18 ಲೋಕಸಭಾ ಚುನಾವಣೆಗಳಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದು ಕೇವಲ ಹದಿನೆಂಟು ಮುಸ್ಲಿಂ ಮಹಿಳೆಯರು. ಅದರಲ್ಲೂ ಕರ್ನಾಟಕ ಸೇರಿ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಈವರೆಗೆ ಒಬ್ಬರೇ ಒಬ್ಬ ಮುಸ್ಲಿಂ ಮಹಿಳೆ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿಯೇ ಇಲ್ಲ!

ಸದ್ಯದಲ್ಲೇ ಬಿಡುಗಡೆಯಾಗಲಿರುವ ರಶೀದ್‌ ಕಿದ್ವಾಯಿ ಮತ್ತು ಅಂಬಾರ್‌ ಕುಮಾರ್‌ ಘೋಷ್‌ ಅವರ ‘ಮಿಸ್ಸಿಂ ಫ್ರಂ ಹೌಸ್‌-ಮುಸ್ಲಿಂ ವುಮೆನ್‌ ಇನ್‌ ಲೋಕಸಭಾ’ ಕೃತಿಯಲ್ಲಿ ಇಂಥದ್ದೊಂದು ಅಚ್ಚರಿಯ ಮಾಹಿತಿ ಉಲ್ಲೇಖವಾಗಿದೆ.

ಲೋಕಸಭೆಯಲ್ಲಿ ಮಹಿಳೆಯರ ಪ್ರಾಬಲ್ಯದ ಕುರಿತು ಮೊದಲಿನಿಂದಲೂ ಆಕ್ಷೇಪ ಇದ್ದೇ ಇದೆ. ಆದರೆ, ಇವರಲ್ಲಿ ಮುಸ್ಲಿಂ ಮಹಿಳೆಯರ ಸಂಖ್ಯೆ ತೀರಾ ಕಡಿಮೆ. ವಿಶೇಷವೆಂದರೆ ವಂಶಪಾರಂಪರ್ಯ ರಾಜಕೀಯವನ್ನು ಪ್ರಜಾಪ್ರಭುತ್ವ ವಿರೋಧಿ ಎಂದೇ ಪರಿಗಣಿಸಿಕೊಂಡು ಬರಲಾಗಿದೆ. ಆದರೆ, ಮುಸ್ಲಿಂ ಮಹಿಳೆಯರ ರಾಜಕೀಯ ಪಯಣದಲ್ಲಿ ಇದು ಅವರ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಯಾಕೆಂದರೆ ಈವರೆಗೆ ದೇಶ ಕಂಡ 18 ಮುಸ್ಲಿಂ ಮಹಿಳಾ ಸಂಸದರಲ್ಲಿ 13 ಮಂದಿ ವಂಶಪಾರಂಪರ್ಯ ಹಿನ್ನೆಲೆಯಿಂದಲೇ ಬಂದವರು!

ರಾಜಮನೆತನ. ಮಾಮೂಲಿ ಟೀ ಮಾರಾಟಗಾರ್ತಿ, ಹೆಸರಾಂತ ಬಂಗಾಳಿ ನಟಿ ಸೇರಿ ಹಲವು ಮುಸ್ಲಿಂ ಮಹಿಳೆಯರು ರಾಜಕೀಯ ಚದುರಂಗದಾಟದಲ್ಲಿ ಹೋರಾಡಿ ಲೋಕಸಭೆಯೆಡೆಗಿನ ಸಣ್ಣ ಕಾರಿಡಾರ್‌ನಲ್ಲಿ ಹೆಜ್ಜೆಹಾಕಿದ್ದಾರೆ. ಇವರಲ್ಲಿ ಹೆಚ್ಚಿನವರ ಕತೆ ಕುತೂಹಲ ಮೂಡಿಸುವಂತಿದೆ. ಅಧಿಕಾರದೆಡೆಗಿನ ಅವರ ಹಾದಿ ಸಾಕಷ್ಟು ಹೋರಾಟ ಮತ್ತು ಅಡೆತಡೆಗಳನ್ನು ಮೀರಿ ಸಾಗಿತ್ತು ಎಂದು ಕೃತಿ ಹೇಳಿಕೊಂಡಿದೆ.

ಲೇಖಕಿ ಕಿದ್ವಾಯಿ ಅವರು ಲೋಕಸಭೆಗೆ ಪ್ರವೇಶಿಸಿದ್ದ ಒಟ್ಟು 20 ಮಸ್ಲಿಂ ಮಹಿಳೆಯರ ಚಿತ್ರಣವನ್ನು ಕಟ್ಟಿಕೊಡಲು ಉದ್ದೇಶಿಸಿದ್ದರು. ಆದರೆ, ಇವರಲ್ಲಿ ಶುಭಾಷಿಣಿ ಅಲಿ ಮತ್ತು ಆಫ್ರಿನ್‌ ಆಲಿ ಅವರು ಬಹಿರಂಗವಾಗಿಯೇ ತಾವು ಇಸ್ಲಾಂ ಅನ್ನು ಪಾಲಿಸುತ್ತಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ. ಹೀಗಾಗಿ 18 ಮುಸ್ಲಿಂ ಮಹಿಳೆಯರ ಕುರಿತ ವಿವರಣೆಯನ್ನಷ್ಟೇ ಈ ಕೃತಿಯಲ್ಲಿ ನೀಡಲಾಗಿದೆ.

ಶೇ.7.1ರಷ್ಟು ಮುಸ್ಲಿಂ ಮಹಿಳೆಯರು:

ದೇಶದ 146 ಕೋಟಿ ಜನಸಂಖ್ಯೆಯಲ್ಲಿ ಶೇ.7.1ರಷ್ಟು ಮುಸ್ಲಿಂ ಮಹಿಳೆಯರೇ ಇದ್ದಾರೆ. ಆದರೆ, ಈವರೆಗೆ ದೇಶದಲ್ಲಿ ನಡೆದ ಒಟ್ಟು 18 ಲೋಕಸಭಾ ಚುನಾವಣೆಗಳಲ್ಲಿ 5ರಲ್ಲಿ ಒಬ್ಬರೇ ಒಬ್ಬ ಮುಸ್ಲಿಂ ಮಹಿಳಾ ಸಂಸದರು ಆಯ್ಕೆಯಾಗಿರಲಿಲ್ಲ. ಇನ್ನು ಸಂಸತ್ತಿನ 543 ಸದಸ್ಯರಲ್ಲಿ ಯಾವತ್ತೂ ಮುಸ್ಲಿಂ ಮಹಿಳೆಯರ ಸಂಖ್ಯೆ ನಾಲ್ಕನ್ನು ದಾಟಿಲ್ಲ.

ಮತ್ತೊಂದೆಡೆ ಸಾಕ್ಷರತೆ ಹಾಗೂ ಸಾಮಾಜಿಕ-ಆರ್ಥಿಕ ಸೂಚ್ಯಂಕಗಳಲ್ಲಿ ಉತ್ತರಭಾರತಕ್ಕಿಂತ ಮೇಲಿರುವ ದಕ್ಷಿಣ ಭಾರತದ ಐದು ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಒಬ್ಬರೇ ಒಬ್ಬ ಮುಸ್ಲಿಂ ಮಹಿಳೆ ಲೋಕಸಭೆಗೆ ಆಯ್ಕೆಯಾಗಿಲ್ಲ ಎಂಬ ಕುತೂಹಲಕಾರಿ ವಿಚಾರಗಳೂ ಈ ಕೃತಿಯಲ್ಲಿ ಉಲ್ಲೇಖವಾಗಿದೆ.

Read more Articles on