ಕೃತಕ ಬುದ್ಧಿಮತ್ತೆಯ ನಿನ್ನೆ ಇಂದು ಮತ್ತು ನಾಳೆ ; ಇಲ್ಲಿ ಎಲ್ಲವೂ ಸರಿಯಿಲ್ಲ : ಧ್ರುವಾಂಕ್ !

| N/A | Published : Feb 01 2025, 09:58 AM IST

Artificial Intelligence

ಸಾರಾಂಶ

‘ನಮ್ಮ ಖಾಸಗಿ ಅನುಭವಗಳನ್ನು ಬಳಸಿಕೊಂಡು ನಮಗೆ ಬೇಕಿದ್ದನ್ನು ಕೊಡುವ ಜಾಣ್ಮೆಯಲ್ಲಿ ಕೃತಕ ಬುದ್ಧಿಮತ್ತೆ ಬಹಳ ಮುಂದಿದೆ. ಅದು ನಮ್ಮ ಆಯ್ಕೆಗಳನ್ನು ನಿರ್ಧರಿಸುವ ಹಂತಕ್ಕೆ ಬಂದಿದೆ.

ಜೋಗಿ

 ಜೈಪುರ : ‘ನಮ್ಮ ಖಾಸಗಿ ಅನುಭವಗಳನ್ನು ಬಳಸಿಕೊಂಡು ನಮಗೆ ಬೇಕಿದ್ದನ್ನು ಕೊಡುವ ಜಾಣ್ಮೆಯಲ್ಲಿ ಕೃತಕ ಬುದ್ಧಿಮತ್ತೆ ಬಹಳ ಮುಂದಿದೆ. ಅದು ನಮ್ಮ ಆಯ್ಕೆಗಳನ್ನು ನಿರ್ಧರಿಸುವ ಹಂತಕ್ಕೆ ಬಂದಿದೆ. ನಾವು ನೋಡುವ ವಿಡಿಯೋಗಳಿಂದ ಹಿಡಿದು ನಮ್ಮ ಪ್ರತಿಕ್ರಿಯೆಗಳ ತನಕ ಎಲ್ಲವನ್ನೂ ನಮಗೆ ಗೊತ್ತಿಲ್ಲದಂತೆ ಕೃತಕ ಬುದ್ಧಿಮತ್ತೆಯೇ ತೀರ್ಮಾನಿಸುತ್ತದೆ’ ಎಂದು ಮನರಂಜನಾ ತಜ್ಞ ಧ್ರುವಾಂಕ್ ವೈದ್ಯ ಅಭಿಪ್ರಾಯಪಟ್ಟರು.

ಜೈಪುರ ಸಾಹಿತ್ಯೋತ್ಸವದ ಎರಡನೇ ದಿನ ನಡೆದ ‘ಎಐ ಮತ್ತು ಸೃಜನಶೀಲತೆ- ಭವಿಷ್ಯದ ಚಿತ್ರ’ ಗೋಷ್ಠಿಯಲ್ಲಿ ಮಾತನಾಡಿದರು.

‘ನಮ್ಮ ಅಭಿರುಚಿ ನೆನಪಿಟ್ಟುಕೊಂಡು ನಮಗೆ ಬೇಕಾದ್ದನ್ನು ನೀಡುವುದೇ ಎಐ ಈಗ ಮಾಡುತ್ತಿರುವ ಕೆಲಸ. ಒಂದೇ ಸಿನಿಮಾದ ಬೇರೆ ಬೇರೆ ಥಂಬ್‌ನೇಲ್ ಚಿತ್ರಗಳನ್ನು ಬೇರೆ ಬೇರೆಯವರಿಗೆ ಕಾಣಿಸುವ ಮೂಲಕ ಪ್ರೇಕ್ಷಕರನ್ನು ಆಕರ್ಷಿಸುವ ಕೆಲಸವನ್ನು ಎಐ ಮಾಡುತ್ತಿದೆ. ಇವತ್ತು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಕಣ್ಣಿಗೆ ಕಾಣಿಸುವುದೆಲ್ಲ ಆಕಸ್ಮಿಕ ಅಲ್ಲ, ಅದರ ಹಿಂದೆ ಎಐ ತಂತ್ರಜ್ಞಾನದ ಲೆಕ್ಕಾಚಾರ ಇದೆ’ ಎಂದು ಧ್ರುವಾಂಕ್ ಪ್ರತಿಪಾದಿಸಿದರು.

‘ನಮ್ಮ ಜ್ಞಾನ ಹೆಚ್ಚಿಸುವ ಆಸೆ ತಂತ್ರಜ್ಞಾನಕ್ಕಿಲ್ಲ. ಅದರ ಉದ್ದೇಶ ನೋಡುಗರನ್ನು ಹೆಚ್ಚಿಸುವ ಮೂಲಕ ತಂತ್ರಜ್ಞಾನವನ್ನು ಕಂಡು ಹಿಡಿದವರ ಬೊಕ್ಕಸ ತುಂಬುವುದೇ ಆಗಿದೆ. ಹೀಗಾಗಿ ಅದು ನಮ್ಮನ್ನು ಇಂಥದ್ದನ್ನೇ ನೋಡು ಎಂದು ಪ್ರೇರೇಪಿಸುತ್ತದೆ. ನಮ್ಮ ಆಶೆಗಳನ್ನು ಅರ್ಥಮಾಡಿಕೊಳ್ಳುತ್ತದೆ. ನಾವು ಯಾವುದರ ಮೇಲೆ ಹೆಚ್ಚು ಸಮಯ ಕಳೆಯುತ್ತೇವೋ ಅದನ್ನೇ ನಮಗೆ ಕೊಡುತ್ತಾ ನಮ್ಮನ್ನು ಚಟಕ್ಕೆ ದೂಡುತ್ತದೆ’ ಎಂದು ಧ್ರುವಾಂಕ್ ಎಐ ಹಿಂದಿನ ಸತ್ಯಗಳನ್ನು ತೆರೆದಿಟ್ಟರು.

‘ಎಐ ತಂತ್ರಜ್ಞಾನ ನಮ್ಮ ದಕ್ಷತೆ ಹೆಚ್ಚಿಸುತ್ತದೆ ಎನ್ನುತ್ತಾರೆ. ಹಾಗೆ ಮಾಡದೇ ಅದು ನಮ್ಮನ್ನು ನಾವಿರುವ ಕೋಣೆಯಲ್ಲೇ ಬಂದಿಯಾಗಿಸುತ್ತದೆ. ನಾವು ನೋಡುತ್ತಿರುವುದೇ ಪರಮಸತ್ಯ ಎಂಬಂತೆ ಅದಕ್ಕೆ ಪೂರಕವಾದ ಮಾಹಿತಿಗಳನ್ನೇ ಕೊಡುತ್ತಾ ಹೋಗುತ್ತದೆ. ಬಹುಮುಖಿ ಸತ್ಯಗಳಿಗೆ ನಾವು ತೆರೆದುಕೊಳ್ಳದಂತೆ ಮಾಡುತ್ತದೆ’ ಎಂದು ಧ್ರುವಾಂಕ್ ಆರೋಪಿಸಿದರು.

ಬ್ರಿಟಿಷ್ ಉಪನ್ಯಾಸಕ ಪೀಟರ್ ಕೊವೇನಿ ವಿಜ್ಞಾನ ಮತ್ತು ತಂತ್ರಜ್ಞಾನದ ನಡುವಿನ ವ್ಯತ್ಯಾಸವನ್ನು ವಿವರಿಸಿದರು. ‘ವೈಜ್ಞಾನಿಕ ಅನ್ವೇಷಣೆಗಳಿಂದ ಲಾಭವಾಗಿದೆ. ವೈದ್ಯಕೀಯ ರಂಗಕ್ಕೆ ಅನುಕೂಲಗಳಾಗಿವೆ. ಅವೆಲ್ಲವೂ ಪ್ರಯೋಗದ ತಳಹದಿಯಲ್ಲಿ ಬಂದಂಥವು. ಆದರೆ ಎಐ, ಕೇವಲ ಉಹಾಪೋಹಗಳ ಮೂಲಕ ಅಂತಿಮ ಅಭಿಪ್ರಾಯಕ್ಕೆ ಬರುತ್ತದೆ. ಹೀಗಾಗಿಯೇ ಅಲ್ಲಿ ವಿರೋಧಾಭಾಸಗಳನ್ನು ಕಾಣುತ್ತೇವೆ. ಕೇವಲ ಗ್ರಹಿಕೆ ಮತ್ತು ಊಹೆಗಳನ್ನು ಆಧಾರವಾಗಿಟ್ಟುಕೊಂಡು ಕೃತಕ ಬುದ್ಧಿಮತ್ತೆ ಕೆಲಸ ಮಾಡುತ್ತದೆ’ ಎಂದು ಅವರು ಹೇಳಿದರು.

‘ಎಐ ಅಗಾಧ ಮಾಹಿತಿಯನ್ನು ಕಲೆಹಾಕುತ್ತದೆ. ಬಳಸಿಕೊಳ್ಳುತ್ತದೆ. ಆದರೆ ಆ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಿಲ್ಲ. ಹೀಗಾಗಿ ಅದು ಕೈಗೊಳ್ಳುವ ತೀರ್ಮಾನವನ್ನು ನಂಬುವುದು ಕಷ್ಟ. ಅದರ ವೇಗ ನೋಡಿ ಅಚ್ಚರಿಗೊಳ್ಳುವ ಬದಲು, ಅದರ ಸತ್ಯಸಂಧತೆಯ ಬಗ್ಗೆ ಅನುಮಾನ ಇಟ್ಟುಕೊಳ್ಳುವುದು ಸೂಕ್ತ’ ಎಂದು ಪೀಟರ್ ಎಚ್ಚರಿಸಿದರು.

ಲೇಖಕ, ವಿಜ್ಞಾನ ಪತ್ರಕರ್ತ ರೋಜರ್ ಹೈಫೀಲ್ಡ್ , ‘ಎಐ ಸಾಧನೆಗಳ ಬಗ್ಗೆ ಗುಮಾನಿ ಇಟ್ಟುಕೊಳ್ಳಬೇಕು. ಚಾಟ್‌ ಜಿಪಿಟಿಯಂಥ ಭಾಷಾ ಮಾದರಿಗಳು ಕುತೂಹಲ ಕೆರಳಿಸಿವೆ ಮತ್ತು ಕಳವಳಕ್ಕೂ ಕಾರಣವಾಗಿವೆ. ಸಾಹಿತ್ಯದಿಂದ ವಿಜ್ಞಾನದ ತನಕ ಎಲ್ಲದರ ಕುರಿತೂ ಮಾತಾಡಬಲ್ಲ ಎಐ, ದೈನಂದಿನ ಕೆಲಸಗಳಾದ ಪತ್ರವ್ಯವಹಾರ, ಪಟ್ಟಿ ಮಾಡುವುದು, ಮಾಹಿತಿ ಸಂಗ್ರಹಣೆ ಸುಲಭವಾಗುವಂತೆ ಮಾಡಿವೆ. ಅದೇ ಹೊತ್ತಿಗೆ ನೈತಿಕ ಮತ್ತು ಬೌದ್ಧಿಕ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ತಂತ್ರಜ್ಞಾನದ ದೈತ್ಯ ಸಂಸ್ಥೆಗಳು ಎಲ್ಲೆಲ್ಲಿಂದಲೋ ಮಾಹಿತಿಗೆ ಕನ್ನ ಕೊರೆಯುತ್ತಿವೆ. ಹೀಗಾಗಿ ಲೇಖಕರು ಮತ್ತು ಸೃಜನಶೀಲರಿಗೆ ತಮ್ಮ ಪುಸ್ತಕ, ಲೇಖನ, ಸಂಶೋಧನಾ ಪ್ರಬಂಧಗಳನ್ನು ಎಲ್ಲಿ ಎಐ ತಂತ್ರಜ್ಞಾನ ಕದಿಯುತ್ತದೆಯೋ ಎಂಬ ಆತಂಕವಿದೆ. ಬೌದ್ಧಿಕ ಆಸ್ತಿ ಹಕ್ಕು ಮತ್ತು ನೈತಿಕ ಗೆರೆಗಳನ್ನು ಎಐ ಉಲ್ಲಂಘಿಸದೇ ತಡೆಯುವುದು ಬಹುದೊಡ್ಡ ಸವಾಲಾಗಿದೆ’ ಎಂದು ಆತಂಕಪಟ್ಟರು.

ಪ್ರಕಾಶಕ, ಬರಹ, ಸಿನಿಮಾ ಮತ್ತು ಜಾಗತಿಕ ವ್ಯಾಪಾರೋದ್ಯಮಗಳನ್ನೂ ಎಐ ಬದಲಾಯಿಸುತ್ತಿದೆ. ಬಹುಭಾಷಾ ಸಂವಹನ ಸುಲಭವಾಗುವಂತೆ ಮಾಡಿದೆ. ಮಾರುಕಟ್ಟೆ ವಿಸ್ತರಣೆಗೆ ಕಾರಣವಾಗಿದೆ. ಅನುವಾದದಂಥ ಕೆಲಸಗಳನ್ನು ಸುಲಭವಾಗಿಸಿದೆ. ಭಾಷೆಯ ಗಡಿಗಳನ್ನು ವಿಸ್ತರಿಸಿದೆ. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತಿದೆ. ಚಿತ್ರಕತೆ, ಸಬ್‌ಟೈಟಲ್, ವಿಡಿಯೋ ಎಡಿಟಿಂಗ್, ಡಬ್ಬಿಂಗ್, ಧ್ವನಿ ಸೃಷ್ಟಿ ಮುಂತಾದ ಕೆಲಸಗಳಲ್ಲೂ ನೆರವಾಗುತ್ತಿದೆ ಎಂಬ ಅಭಿಪ್ರಾಯವೂ ಗೋಷ್ಠಿಯಲ್ಲಿ ಕೇಳಿಬಂತು.

ಎಐ ಈಗಿನ್ನೂ ಆರಂಭಿಕ ಹಂತದಲ್ಲಿದೆ. ಚೀನಾ ಹೊರತಂದಿರುವ ಡೀಪ್‌ ಸೀಕ್‌ ಎಲ್ಲಿಗೆ ಒಯ್ಯುವುದೋ ಎಂಬ ಆತಂಕದ ಜತೆಗೇ, ಎಐ ನಿರ್ಮಿತ ಜಗತ್ತನ್ನು ನಾವು ಆತಂಕದಿಂದಲೇ ನೋಡದೆ ಬೇರೆ ದಾರಿಯಿಲ್ಲ ಅನ್ನುವ ಮಾತಿನೊಂದಿಗೆ ಗೋಷ್ಠಿ ಮುಕ್ತಾಯಗೊಂಡಿತು.