‘ಡಿಜಿಟಲ್‌ ಅರೆಸ್ಟ್‌’ ದಂಧೆಯ ಬಗ್ಗೆ ಜನಕ್ಕೆ ಪ್ರಧಾನಿ ನರೇಂದ್ರ ಮೋದಿ ಎಚ್ಚೆತ್ತುಕೊಳ್ಳುವಂತೆ ಸಲಹೆ

| Published : Oct 28 2024, 12:48 AM IST / Updated: Oct 28 2024, 04:50 AM IST

Prime Minister Narendra Modi on a visit to Varanasi his Lok Sabha constituency bsm
‘ಡಿಜಿಟಲ್‌ ಅರೆಸ್ಟ್‌’ ದಂಧೆಯ ಬಗ್ಗೆ ಜನಕ್ಕೆ ಪ್ರಧಾನಿ ನರೇಂದ್ರ ಮೋದಿ ಎಚ್ಚೆತ್ತುಕೊಳ್ಳುವಂತೆ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ದೂರವಾಣಿ ಕರೆ ಮಾಡಿ ‘ನಿಮ್ಮನ್ನು ಡಿಜಿಟಲ್‌ ಅರೆಸ್ಟ್‌ ಮಾಡಲಾಗಿದೆ’ ಎಂದು ಹೆದರಿಸಿ ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ಲಪಟಾಯಿಸುವ ದಂಧೆ ದೇಶಾದ್ಯಂತ ವ್ಯಾಪಿಸಿರುವಾಗಲೇ, ಅದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜನಸಾಮಾನ್ಯರು ಎಚ್ಚೆತ್ತುಕೊಳ್ಳುವಂತೆ ಸಲಹೆ ನೀಡಿದ್ದಾರೆ.

 ನವದೆಹಲಿ : ದೂರವಾಣಿ ಕರೆ ಮಾಡಿ ‘ನಿಮ್ಮನ್ನು ಡಿಜಿಟಲ್‌ ಅರೆಸ್ಟ್‌ ಮಾಡಲಾಗಿದೆ’ ಎಂದು ಹೆದರಿಸಿ ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ಲಪಟಾಯಿಸುವ ದಂಧೆ ದೇಶಾದ್ಯಂತ ವ್ಯಾಪಿಸಿರುವಾಗಲೇ, ಅದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜನಸಾಮಾನ್ಯರು ಎಚ್ಚೆತ್ತುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಇಂತಹ ಕ್ರಿಮಿನಲ್‌ಗಳಿಂದ ಪಾರಾಗಲು ಅವರು ದೇಶವಾಸಿಗಳಿಗೆ ಮೂರು ಸಲಹೆಗಳನ್ನು ನೀಡಿದ್ದಾರೆ. ವಿಶೇಷವೆಂದರೆ ಈ ಟಿಪ್ಸ್‌ ನೀಡಲು ಮೋದಿ ಅವರು ವಿಜಯಪುರದ ಸಂತೋಷ್‌ ಪಾಟೀಲ್‌ ಪ್ರಕರಣವನ್ನು ಉದಾಹರಣೆಯಾಗಿ ನೀಡಿದ್ದಾರೆ. ಕೆಲ ತಿಂಗಳ ಹಿಂದೆ ಸೈಬರ್‌ ವಂಚಕರು ವಿಜಯಪುರ ಸಂತೋಷ್‌ ಪಾಟೀಲ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು. ಆದರೆ ಅದನ್ನು ಅತ್ಯಂತ ಜಾಣತನದಿಂದಲೇ ನಿರ್ವಹಿಸಿದ್ದ ಪಾಟೀಲ್‌ ಆ ಜಾಲದಿಂದ ಪಾರಾಗಿದ್ದರು. 

ಸಂತೋಷ್‌ ಪಾಟೀಲ್‌ ಮತ್ತು ವಂಚಕರ ನಡುವಿನ ಆಡಿಯೋ ಸಂಭಾಷಣೆಯನ್ನೂ ಮನ್‌ ಕೀ ಬಾತ್‌ನಲ್ಲಿ ಪ್ರಸಾರ ಮಾಡಿದ ಪ್ರಧಾನಿ, ಇದೇ ರೀತಿ ನೀವು ಕೂಡಾ ನಡೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಜೊತೆಗೆ ಡಿಜಿಟಲ್‌ ಅರೆಸ್ಟ್‌ ಎಂಬ ಕರೆ ಬಂದಾಗ ‘ಕಾಯಿರಿ, ಯೋಚಿಸಿ ಹಾಗೂ ಕ್ರಮ ಜರುಗಿಸಿ’ ಎಂಬ ಮೂರು ಮಂತ್ರವನ್ನು ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನಲ್ಲಿ ಭಾನುವಾರ ಮಾತನಾಡಿದ ಅವರು, ಕಾನೂನಿನಲ್ಲಿ ಡಿಜಿಟಲ್‌ ಅರೆಸ್ಟ್‌ ಎಂಬ ವ್ಯವಸ್ಥೆಯೇ ಇಲ್ಲ. ಇದೊಂದು ಮೋಸ, ಸುಳ್ಳು ಅಷ್ಟೆ. ಈ ಕೃತ್ಯದಲ್ಲಿ ತೊಡಗಿರುವ ಕ್ರಿಮಿನಲ್‌ ಗ್ಯಾಂಗ್‌ ಸಮಾಜದ ವಿರೋಧಿ ಎಂದು ಹರಿಹಾಯ್ದಿದ್ದಾರೆ. ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಯುವ ಸಲುವಾಗಿ ದೇಶದ ಎಲ್ಲ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರಗಳ ಜತೆಗೂಡಿ ಕಾರ್ಯೋನ್ಮುಖವಾಗಿವೆ ಎಂದೂ ತಿಳಿಸಿದ್ದಾರೆ.

ವಂಚನೆ ಹೇಗೆ- ಮೋದಿ ವಿವರಣೆ?:

ಡಿಜಿಟಲ್‌ ಅರೆಸ್ಟ್‌ ದಂಧೆಯಲ್ಲಿ ನಿರತರಾಗಿರುವ ವಂಚಕರು ಜನರ ಖಾಸಗಿ ಮಾಹಿತಿಯನ್ನು ಮೊದಲು ಪಡೆದುಕೊಳ್ಳುತ್ತಾರೆ. ಎರಡನೇ ಹಂತದಲ್ಲಿ ಸರ್ಕಾರಿ ಕಚೇರಿ, ಕಾನೂನಿನ ಸೆಕ್ಷನ್‌ಗಳನ್ನು ಹೇಳಿ ಭಯದ ವಾತಾವರಣ ಸೃಷ್ಟಿಸುತ್ತಾರೆ. ಫೋನ್‌ನಲ್ಲೇ ಹೆದರಿಸುತ್ತಾರೆ. ಅವರ ಜತೆಗಿನ ಸಂಭಾಷಣೆ ವೇಳೆ ನಿಮಗೆ ಯೋಚನೆ ಮಾಡಲಿಕ್ಕೂ ಸಮಯವಾಗುವುದಿಲ್ಲ. ಮೂರನೇ ಹಂತದಲ್ಲಿ ಸಮಯದ ಒತ್ತಡವನ್ನು ಬಳಸಿ ಮೋಸ ಮಾಡುತ್ತಾರೆ ಎಂದು ಪ್ರಧಾನಿ ವಿವರಿಸಿದರು.

3 ಹಂತಗಳು:

ಕರೆ ಬರುತ್ತಿದ್ದಂತೆ ಗಾಬರಿಯಾಗಬೇಡಿ. ಆರಾಮವಾಗಿರಿ, ಆತುರದ ಕ್ರಮಗಳನ್ನು ತೆಗೆದುಕೊಳ್ಳಬೇಡಿ. ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿಗಳನ್ನು ನೀಡಲು ಹೋಗಬೇಡಿ. ಸಾಧ್ಯವಾದರೆ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಿ. ರೆಕಾರ್ಡ್‌ ಮಾಡಿಕೊಳ್ಳಿ. ಇದು ಕಾಯಿರಿ ಎಂಬ ಮೊದಲ ಹಂತ. 2ನೇ ಹಂತ- ಯೋಚಿಸಿ. ಯಾವುದೇ ತನಿಖಾ ಸಂಸ್ಥೆ ಕೂಡ ಈ ರೀತಿ ಫೋನ್‌ ಮಾಡಿ ವಿಚಾರಣೆ ನಡೆಸುವುದಿಲ್ಲ ಅಥವಾ ವಿಡಿಯೋ ಕಾಲ್‌ ಮೂಲಕ ಹಣಕ್ಕೂ ಬೇಡಿಕೆ ಇಡುವುದಿಲ್ಲ. ಮೂರನೇ ಹಂತ- ಕ್ರಮ ಜರುಗಿಸಿ. ರಾಷ್ಟ್ರೀಯ ಸೈಬರ್‌ ಹೆಲ್ಪ್‌ಲೈನ್‌ 1930ಗೆ ಕರೆ ಮಾಡಿ, ಇಂತಹ ಘಟನೆಗಳ ಕುರಿತು ವರದಿ ಮಾಡಿ. ಕುಟುಂಬ ಸದಸ್ಯರು ಹಾಗೂ ಪೊಲೀಸರಿಗೆ ತಿಳಿಸಿ ಎಂದು ಮೋದಿ ತಿಳಿಸಿದ್ದಾರೆ.