- ಬಿಹಾರದ ಸಿವಾನ್‌ನಲ್ಲಿ ಘಟನೆ । ಪೇದೆ ಸಸ್ಪೆಂಡ್‌

- ಗಾಳಿಯಲ್ಲಿ ಗುಂಡು, ಯಾರೂ ಸತ್ತಿಲ್ಲ: ಬಿಹಾರ ಪೊಲೀಸ್

- ಎಕೆ 47 ಬಳಕೆಗೆ ವಿಪಕ್ಷಗಳ ತೀವ್ರ ಆಕ್ರೋಶಪಿಟಿಐ ಪಟನಾ

ನೀಟ್‌ ಸೋರಿಕೆ ಖಂಡಿಸಿ ಜು.25ರಂದು ಸಿವಾನ್‌ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದ ವೇಳೆ ಎಕೆ-47 ರೈಫಲ್‌ನಿಂದ ಒಬ್ಬ ಕಾನ್‌ಸ್ಟೆಬಲ್‌ ಗುಂಡು ಹಾರಿಸುತ್ತಿದ ವಿಷಯ ಬೆಳಕಿಗೆ ಬಂದಿದೆ. ಇದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದ್ದು, ದಿಲ್ಲಿಯಲ್ಲೂ ಪ್ರತಿಧ್ವನಿಸಿದೆ. ಇದರ ಬೆನ್ನಲ್ಲೇ ಆ ಪೇದೆ ಅಭಿಷೇಕ್ ಕುಮಾರ್‌ ಅವರನ್ನು ಅಮಾನತು ಮಾಡಲಾಗಿದೆ.

ಜತೆಗೆ, ‘ಪ್ರತಿಭಟನೆ ವೇಳೆ ಗುಂಡು ಹಾರಿಸುವಂತಿಲ್ಲ ಎಂದು ಪೊಲೀಸರಿಗೆ ಸ್ಪಷ್ಟ ಆದೇಶ ನೀಡಲಾಗಿತ್ತು. ಆದರೂ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ. ಆತನನ್ನು ಸಸ್ಪೆಂಡ್‌ ಮಾಡಿ ತನಿಖೆ ಆರಂಭಿಸಲಾಗಿದೆ’ ಎಂದು ಪೊಲೀಸ್ ಅಧೀಕ್ಷಕರು ಹೇಳಿದ್ದಾರೆ.


ಈ ನಡುವೆ ಬಿಹಾರ ಪೊಲೀಸ್‌ ಪ್ರಧಾನ ಕಚೇರಿ ಹೇಳಿಕೆ ನೀಡಿದ್ದು, ‘ಜು.25ರ ಸಿವಾನ್‌ನಲ್ಲಿ ನಡೆದ ಬಂದ್ ವೇಳೆ ಪ್ರತಿಭಟನಾಕಾರರು ಹಿಂಸೆಗೆ ಇಳಿದಿದ್ದರು. ಆಗ ಪೇದೆ ಕುಮಾರ್ ಅವರು ಜೀವ, ಆಸ್ತಿ ಮತ್ತು ಸರ್ಕಾರಿ ಆಸ್ತಿಗಳನ್ನು ರಕ್ಷಿಸಲು ಎಕೆ-47 ನಿಂದ ಬ್ಯಾರೆಲ್ ಅನ್ನು ಮೇಲಕ್ಕೆತ್ತಿ ಗಾಳಿಯಲ್ಲಿ 4 ಸುತ್ತು ಗುಂಡು ಹಾರಿಸಿದ್ದಾರೆ. ಆಗ ಯಾರೂ ಗಾಯಗೊಂಡಿಲ್ಲ, ಸಾವನ್ನಪ್ಪಿಲ್ಲ’ ಎಂದಿದೆ.

ಘಟನೆಗೆ ವಿಧಾನಸಭೆ ವಿಪಕ್ಷ ನಾಯಕ ತೇಜಸ್ವಿ ಯಾದವ್‌ ಪ್ರತಿಕ್ರಿಯಿಸಿದ್ದು, ‘7 ಕೊಲೆ ಆರೋಪಗಳಿರುವವರೇ ಮುಖ್ಯಮಂತ್ರಿ ಆಗಿರುವಾಗ ಪೊಲೀಸರು ಕೂಡ ಅಮಾಯಕ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುತ್ತಾರೆ’ ಎಂದು ಸಿಎಂ ಸಾಮ್ರಾಟ್‌ ಚೌಧರಿ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.