ಈ ಸಲವೂ 7 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ

| Published : Feb 02 2024, 01:03 AM IST / Updated: Feb 02 2024, 12:29 PM IST

Budget
ಈ ಸಲವೂ 7 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ನೇರ ತೆರಿಗೆ, ಪರೋಕ್ಷ ತೆರಿಗೆ ಎರಡರಲ್ಲೂ ನೋ ಚೇಂಜ್‌ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಲೋಕಸಭೆ ಚುನಾವಣೆಗೆ ಹೋಗುವುದಕ್ಕೂ ಮುನ್ನ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ತೆರಿಗೆದಾರರ ಮೇಲೆ ಯಾವುದೇ ಹೊಸ ಹೊರೆ ಹೇರಿಲ್ಲ. 

ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಯೆರಡರಲ್ಲೂ ಯಾವುದೇ ಬದಲಾವಣೆ ಮಾಡದೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸಿದ್ದಾರೆ. ಹೀಗಾಗಿ 2024-2025ನೇ ಸಾಲಿಗೆ ಈ ಹಿಂದಿನ 2023-2024ನೇ ಸಾಲಿನ ಆದಾಯ ತೆರಿಗೆ ಹಾಗೂ ಸರಕು ಮತ್ತು ಸೇವಾ ತೆರಿಗೆ ದರಗಳೇ ಅನ್ವಯಿಸುತ್ತವೆ.

‘ಬಜೆಟ್‌ನಲ್ಲಿ ನೇರ ಮತ್ತು ಪರೋಕ್ಷ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆಮದು ಸುಂಕಗಳಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ’ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಕಳೆದ ವರ್ಷದ ಬಜೆಟ್‌ನಲ್ಲಿ, ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ರಿಟರ್ನ್ಸ್‌ ಸಲ್ಲಿಸಿದರೆ 7 ಲಕ್ಷ ರು.ವರೆಗೆ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸುವ ಅಗತ್ಯವಿರಲಿಲ್ಲ. 

ಆ ಲಾಭ ಈ ವರ್ಷವೂ ಮುಂದುವರೆಯಲಿದೆ. ಹಳೆ ತೆರಿಗೆ ಪದ್ಧತಿಯಲ್ಲಿ ವಾರ್ಷಿಕ ಆದಾಯ 2.5 ಲಕ್ಷ ರು.ವರೆಗಿದ್ದರೆ ತೆರಿಗೆ ಪಾವತಿಸುವ ಅಗತ್ಯವಿಲ್ಲ. ತೆರಿಗೆದಾರರ ಆದಾಯ 2.5 ಲಕ್ಷ ರು.ಗಿಂತ ಹೆಚ್ಚಿದ್ದು, 5 ಲಕ್ಷ ರು. ಮೀರದಿದ್ದರೆ ಅವರಿಗೆ ತೆರಿಗೆ ವಿನಾಯ್ತಿಗಳು ಲಭಿಸುತ್ತವೆ. 

ಅಂದರೆ 5 ಲಕ್ಷ ರು.ವರೆಗೂ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಆದಾಯವು 5 ಲಕ್ಷ ರು. ಮೀರಿದರೆ 2.5 ಲಕ್ಷ ರು.ಗಿಂತ ಮೇಲ್ಪಟ್ಟ ಆದಾಯಕ್ಕೆ ತೆರಿಗೆ ಪಾವತಿಸಬೇಕಿದೆ.

ಹಾಗೆಯೇ, ಹೊಸ ತೆರಿಗೆ ಪದ್ಧತಿಯಲ್ಲಿ 3 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ರಿಟರ್ನ್ಸ್‌ ಅನ್ನೇ ಸಲ್ಲಿಸುವ ಅಗತ್ಯವಿಲ್ಲ. ಆದರೆ ತೆರಿಗೆದಾರನ ವಾರ್ಷಿಕ ಆದಾಯ 3 ಲಕ್ಷ ರು.ನಿಂದ 7 ಲಕ್ಷ ರು. ನಡುವೆ ಇದ್ದರೆ ರಿಟರ್ನ್ಸ್‌ ಸಲ್ಲಿಸಬೇಕು, ಆದರೆ ತೆರಿಗೆ ಪಾವತಿಸುವ ಅಗತ್ಯವಿಲ್ಲ. 

ವಾರ್ಷಿಕ ಆದಾಯ 7 ಲಕ್ಷ ರು. ಮೀರಿದರೆ ಆಗ 3 ಲಕ್ಷ ರು. ಮೇಲ್ಪಟ್ಟ ಆದಾಯಕ್ಕೆ ತೆರಿಗೆ ಬರುತ್ತದೆ. ಹೊಸ ತೆರಿಗೆ ಪದ್ಧತಿಯಲ್ಲಿ ಯಾವುದೇ ಹೂಡಿಕೆಗಳನ್ನು ಮಾಡುವ ಅಗತ್ಯವಿಲ್ಲ. ಏಕೆಂದರೆ ಅಂತಹ ಹೂಡಿಕೆಗೆ ಇಲ್ಲಿ ತೆರಿಗೆ ವಿನಾಯ್ತಿ ಲಭಿಸುವುದಿಲ್ಲ.

ರಿಟರ್ನ್ಸ್‌ ವಿಲೇವಾರಿ 10 ದಿನಕ್ಕಿಳಿಕೆ: 2014ರ ಬಳಿಕ ದೇಶದಲ್ಲಿ ತೆರಿಗೆ ಪಾವತಿಸುವವರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ. ಇದೇ ವೇಳೆಯಲ್ಲಿ ನೇರ ತೆರಿಗೆ ಸಂಗ್ರಹ ಮೂರು ಪಟ್ಟು ಹೆಚ್ಚಾಗಿದೆ. 

2014ರಲ್ಲಿ ತೆರಿಗೆ ರಿಟರ್ನ್ಸ್‌ ವಿಲೇವಾರಿ ಮಾಡಲು 93 ದಿನ ತೆಗೆದುಕೊಳ್ಳಲಾಗುತ್ತಿತ್ತು. ಈಗ ಕೇವಲ 10 ದಿನದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಅದರಿಂದಾಗಿ ಹೆಚ್ಚುವರಿ ತೆರಿಗೆ ಪಾವತಿಸಿದವರಿಗೆ ಬಹಳ ಬೇಗ ಹಣ ಮರಳಿ ಸಿಗುತ್ತದೆ ಎಂದು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಇನ್ನು, 2025-26ನೇ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.5ಕ್ಕೆ ಇಳಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.

ಹಳೆ/ಹೊಸ ತೆರಿಗೆ ಪದ್ಧತಿ ನಡುವಿನ ವ್ಯತ್ಯಾಸ: 2024- 25ನೇ ಸಾಲಿಗೆ ಸಹಜವಾಗಿ ಎಲ್ಲರೂ ಹೊಸ ತೆರಿಗೆ ಪದ್ಧತಿಯಡಿಯಲ್ಲಿಯೇ ಬರುತ್ತಾರೆ. ಅಗತ್ಯವಿದ್ದರು ಮಾತ್ರ ಹಳೆ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. 

ಈ ಹಿಂದೆ ಹೊಸ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತಿತ್ತು.ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ಕಡಿಮೆಯಿರುವುದರ ಜೊತೆ ಹೂಡಿಕೆಗಳನ್ನು ಮಾಡುವ ಅವಶ್ಯಕತೆ ಇಲ್ಲ. 

ಹಾಗಾಗಿ ಜನರ ಬಳಿ ಹಣ ಉಳಿಯುತ್ತದೆ. ಹಳೆ ತೆರಿಗೆ ಪದ್ಧತಿಯಲ್ಲಿ 60 ವರ್ಷ ವಯಸ್ಸಿನ ಕೆಳಗಿನವರು, 60 ರಿಂದ 80 ವರ್ಷದವರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಬೇರೆ ಬೇರೆ ರೀತಿಯ ತೆರಿಗೆ ಸ್ಸ್ಲ್ಯಾಬ್‌ ಇದ್ದವು. ಆದರೆ ಹೊಸ ತೆರಿಗೆ ಪದ್ಧತಿಯಲ್ಲಿ ಎಲ್ಲ ವರ್ಗದವರಿಗೆ ಒಂದೇ ರೀತಿಯ ತೆರಿಗೆ ಸ್ತರಗಳು ಮತ್ತು ದರಗಳು.