ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮೇಲಿನ ಜಾರಿ ನಿರ್ದೇಶನಾಲಯದ (ಇ.ಡಿ.) ಚಾರ್ಜ್‌ಶೀಟ್ ಅನ್ನು ದೆಹಲಿ ಕೋರ್ಟ್‌ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

- ಸೋನಿಯಾ, ರಾಗಾ ಮೇಲಿನ ಇ.ಡಿ. ಚಾರ್ಜ್‌ಶೀಟ್ ರದ್ದು- ಈ ಆದೇಶ ಮೋದಿಗೆ ಮಾಡಿದ ಕಪಾಳಮೋಕ್ಷ: ಖರ್ಗೆ

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮೇಲಿನ ಜಾರಿ ನಿರ್ದೇಶನಾಲಯದ (ಇ.ಡಿ.) ಚಾರ್ಜ್‌ಶೀಟ್ ಅನ್ನು ದೆಹಲಿ ಕೋರ್ಟ್‌ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಮೋದಿ, ಶಾ ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಇದನ್ನು ಪಕ್ಷ ಬಯಲು ಮಾಡಲಿದೆ. ತನಿಖಾ ಸಂಸ್ಥೆಗಳ ದುರುಪಯೋಗ ವಿರುದ್ಧ ಪಕ್ಷದ ಕಾರ್ಯಕರ್ತರು ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಸಂಸತ್ತಿನ ಒಳಗೆ ಮತ್ತು ಹೊರಗೆ ಇದರ ವಿರುದ್ಧ ಹೋರಾಟ ನಡೆಸಲಿದ್ದೇವೆ’ ಎಂದರು.‘ದೆಹಲಿ ಕೋರ್ಟ್‌ ಆದೇಶದ ಕಾರಣ ಮೋದಿ ಮತ್ತು ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಯಾಕೆಂದರೆ ಈ ಆದೇಶ ಅವರಿಗೆ ಮಾಡಿದ ಕಪಾಳಮೋಕ್ಷವಾಗಿದೆ. ಅವರು ಜನರಿಗೆ ಈ ರೀತಿ ಕಿರುಕುಳ ನೀಡಬಾರದು. ಇಂಥ ವರ್ತನೆಯನ್ನು ಜನ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂಬುದು ಅವರಿಗೆ ಗೊತ್ತಿರಬೇಕು’ ಎಂದು ಖರ್ಗೆ ಹೇಳಿದರು,‘ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ಇ.ಡಿ.ನೋಟಿಸ್‌ ನೀಡಿದಾಗ ಪಕ್ಷವು ಪ್ರತಿಭಟನೆ, ರ್‍ಯಾಲಿಗಳನ್ನು ನಡೆಸುವ ಮೂಲಕ ರಾಜಕೀಯವಾಗಿ ಹೋರಾಟ ನಡೆಸಿದೆ. ನಮ್ಮ ಈ ಹೋರಾಟವನ್ನು ಮುಂದುವರಿಸಲಿದ್ದು, ಮೋದಿ, ಶಾ ಅವರಿಗೆ ತಕ್ಕ ಪಾಠ ಕಲಿಸಲಿದ್ದೇವೆ’ ಎಂದರು.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ಈಗಾಗಲೇ ಚಾರ್ಜ್‌ಶೀಟ್‌ ಸಲ್ಲಿಸಿ ತನಿಖೆ ನಡೆಸುತ್ತಿರುವಾಗ, ಇ.ಡಿ.ಯು ಖಾಸಗಿ ವ್ಯಕ್ತಿಯ ದೂರು ಆಧರಿಸಿ ಸಲ್ಲಿಸಿರುವ ಚಾರ್ಜ್‌ಶೀಟ್‌ ಅನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ದೆಹಲಿ ಕೋರ್ಟ್‌ ಮಂಗಳವಾರ ಹೇಳಿತ್ತು.

ಬಿಜೆಪಿ ತಿರುಗೇಟು:

‘ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಪಕ್ಷ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಕೋರ್ಟು ಇ.ಡಿ. ಚಾರ್ಜ್‌ಶೀಟನ್ನು ನಿರಾಕರಿಸಿದೆ. ಆದರೆ ದಿಲ್ಲಿ ಆರ್ಥಿಕ ಅಪರಾಧ ವಿಭಾಗದ ಪೊಲೀಸರ ತನಿಖೆಗೆ ಅದು ಯಾವುದೇ ತಡೆ ನೀಡಿಲ್ಲ. ಈ ಮೂಲಕ ಇಡೀ ಪ್ರಕರಣ ರದ್ದು ಮಾಡಿಲ್ಲ’ ಎಂದಿದೆ.