ಸಾರಾಂಶ
ಡೆಡ್‌ಲೈನ್ ಮತ್ತು ವಕ್ಫ್ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಸರ್ಕಾರಕ್ಕೆ ಮೂಗುದಾರ ಹಾಕಿದ ಸುಪ್ರೀಂಕೋರ್ಟ್‌ನ ಆದೇಶವನ್ನು ಬಿಜೆಪಿಯ ಹಿರಿಯ ಸಂಸದ ನಿಶಿಕಾಂತ್ ದುಬೆ ತೀವ್ರವಾಗಿ ಖಂಡಿಸಿದ್ದಾರೆ.
ನವದೆಹಲಿ: ರಾಜ್ಯ ಸರ್ಕಾರಗಳು ಅಂಗೀಕರಿಸಿದ ವಿಧೇಯಕ ಬಗ್ಗೆ ರಾಷ್ಟ್ರಪತಿಗಳು 3 ತಿಂಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂಬ ಡೆಡ್‌ಲೈನ್ ಮತ್ತು ವಕ್ಫ್ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಸರ್ಕಾರಕ್ಕೆ ಮೂಗುದಾರ ಹಾಕಿದ ಸುಪ್ರೀಂಕೋರ್ಟ್‌ನ ಆದೇಶವನ್ನು ಬಿಜೆಪಿಯ ಹಿರಿಯ ಸಂಸದ ನಿಶಿಕಾಂತ್ ದುಬೆ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ನ್ಯಾಯಾಲಯದ ಆದೇಶವು ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುವಂತಿದೆ. ಕಾಯ್ದೆಯನ್ನೂ ನ್ಯಾಯಾಲಯವೇ ಮಾಡುವುದಾದರೆ ವಿಧಾನಸಭೆ ಮತ್ತು ಸಂಸತ್ತಿನ ಅಗತ್ಯವೇ ಇಲ್ಲ. ಅದನ್ನು ಮುಚ್ಚಿಬಿಡುವುದೇ ಒಳಿತು ಎಂದು ನೇರವಾಗಿ ಸುಪ್ರೀಂಕೋರ್ಟ್ ವಿರುದ್ಧ ಹರಿಹಾಯ್ದಿದ್ದಾರೆ. ಇದೇ ವೇಳೆ ತನ್ನ ನಿರ್ಧಾರಗಳ ಬಳಿಕ ಸುಪ್ರೀಂಕೋರ್ಟ್ ದೇಶದಲ್ಲಿ ಧಾರ್ಮಿಕ ಯುದ್ಧವನ್ನು ಪ್ರಚೋದಿಸುತ್ತಿದೆ ಎಂದೂ ಕಿಡಿಕಾರಿದ್ದಾರೆ.
ರಾಷ್ಟ್ರಪತಿಗಳಿಗೆ ಡೆಡ್‌ಲೈನ್ ವಿಧಿಸುವ ಸುಪ್ರೀಂ ರ್ಕೋರ್ಟ್‌ನ ಆದೇಶವನ್ನು ಇತ್ತೀಚೆಗೆ ಸ್ವತಃ ಉಪರಾಷ್ಟ್ರಪತಿ ಜಗದೀಪ್ ಧನಕರ್ ಕಟುವಾಗಿ ಟೀಕಿಸಿದ್ದರು. ಸಂವಿಧಾನದ 142ನೇ ವಿಧಿಯು ಪ್ರಜಾಸತಾತ್ಮಕ ಶಕ್ತಿಗಳ ವಿರುದ್ಧ ಹೊಸ ಪರಮಾಣು ಕ್ಷಿಪಣಿಯಾಗಿದೆ ಎಂದು ಸುಪ್ರೀಂಕೋರ್ಟ್‌ನ ವಿಶೇಷ ಅಧಿಕಾರವನ್ನು ಟೀಕಿಸಿದ್ದರು. ಅದಕ್ಕೆ ಪ್ರತಿಪಕ್ಷಗಳಿಂದ ಖಂಡನೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ದುಬೆ ಕೂಡಾ ಸರ್ವೋಚ್ಚ ನ್ಯಾಯಾಲಯದ ವಿರುದ್ಧ ಗಂಭೀರ ಟೀಕಾಪ್ರಹಾರ ನಡೆಸಿದ್ದಾರೆ.
ಸಂಸತ್ ಮುಚ್ಚಿಬಿಡಿ:
ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿನ ಕೆಲ ಅಂಶಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ದುಬೆ, ‘ಸಂವಿಧಾನದ 368ನೇ ವಿಧಿಯು ಕಾನೂನು ರೂಪಿಸುವುದು ಸಂಸತ್ತಿನ ಕೆಲಸ ಮತ್ತು ಅದರ ವಿಶ್ಲೇಷಣೆ ಸುಪ್ರೀಂಕೋರ್ಟ್‌ನ ಕೆಲಸ ಎಂದು ಸ್ಪಷ್ಟವಾಗಿ ಹೇಳಿದೆ. ನ್ಯಾಯಾಲಯ ಸರ್ಕಾರಕ್ಕೆ ಯಾವುದೇ ಸೂಚನೆ ನೀಡಬಹುದೇ ಹೊರತೂ ಸಂಸತ್ತಿಗೆ ಅಲ್ಲ’ ಎಂದು ಹೇಳಿದರು.
ಜೊತೆಗೆ, ‘ನಿಮ್ಮನ್ನು ನೇಮಕ ಮಾಡುವವರಿಗೇ ನೀವು ಹೇಗೆ ಸೂಚನೆ ನೀಡಲು ಸಾಧ್ಯ? ರಾಷ್ಟ್ರಪತಿಗಳು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ. ಸಂಸತ್ ಈ ದೇಶದ ಕಾನೂನು ರೂಪಿಸುತ್ತದೆ. ಆ ಸಂಸತ್ತಿಗೇ ನೀವು ನಿರ್ದೇಶನ ಕೊಡಲು ಸಾಧ್ಯವೇ? ಹಾಗಿದ್ದರೆ ಹೊಸ ಕಾನೂನು ರೂಪಿಸುವುದು ಹೇಗೆ? ಯಾವ ಕಾನೂನು ರಾಷ್ಟ್ರಪತಿಗಳು 3 ತಿಂಗಳಲ್ಲಿ ತಮ್ಮ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿದೆ? ಇದರರ್ಥ ನೀವು ಈ ದೇಶವನ್ನು ಅರಾಜತೆಯತ್ತ ಕೊಂಡೊಯ್ಯುತ್ತಿದ್ದೀರಿ’ ಎಂದು ಹೇಳುವ ಮೂಲಕ ನ್ಯಾಯಾಲಯದ ಅಧಿಕಾರದ ವ್ಯಾಪ್ತಿಯನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಜೊತೆಗೆ, ಈ ಹಿಂದೆ ಕೂಡ ಸಲಿಂಗಕಾಮವನ್ನು ಕ್ರಿಮಿನಲ್ ಅಪರಾಧ ಎಂಬ ಸಂಸತ್ತಿನ ನಿಯಮ ರದ್ದು ಮತ್ತು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 66 (ಎ) ರದ್ದು ಮಾಡಿದ್ದ ಸುಪ್ರೀಂಕೋರ್ಟ್ ಆದೇಶವನ್ನೂ ಪ್ರಸ್ತಾಪಿಸಿದ ದುಬೆ, ಇವೆಲ್ಲಾ ನ್ಯಾಯಾಲಯ ತನ್ನ ಅಧಿಕಾರದ ವ್ಯಾಪ್ತಿ ಮೀರಿ ಕೈಗೊಂಡ ನಿರ್ಧಾರ ಎಂದು ಟೀಕಿಸಿದರು.
ಧಾರ್ಮಿಕ ಯುದ್ಧ:
ಇದೇ ವೇಳೆ, ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿನ ವಕ್ಫ್ ಬೈ ಯೂಸರ್ (ಬಳಕೆಯಿಂದ ವಕ್ಫ್ ಆಸ್ತಿ) ನಿಯಮ ದುರ್ಬಲ ಮಾಡದಂತೆ ಸುಪ್ರೀಂಕೋರ್ಟ್ ನೀಡಿದ ತಡೆ ಬಗ್ಗೆಯೂ ಪರೋಕ್ಷವಾಗಿ ಪ್ರಸ್ತಾಪಿಸಿರುವ ದುಬೆ, ‘ಅಯೋಧ್ಯೆ ರಾಮಮಂದಿರದ ವಿಷಯಕ್ಕೆ ದಾಖಲೆಗಳನ್ನು ಕೇಳುವ ಸುಪ್ರೀಂಕೋರ್ಟ್, ಇದೇ ರೀತಿ ಹಾಲಿ ವಿಚಾರಣೆ ನಡೆಯುತ್ತಿರುವ ಪ್ರಕರಣಗಳಲ್ಲಿ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದೇ ವೇಳೆ ತನ್ನ ನಿರ್ಧಾರಗಳ ಬಳಿಕ ಸುಪ್ರೀಂಕೋರ್ಟ್ ದೇಶದಲ್ಲಿ ಧಾರ್ಮಿಕ ಯುದ್ಧವನ್ನು ಪ್ರಚೋದಿಸುತ್ತಿದೆ ಎಂದು ದುಬೆ ಆರೋಪಿಸಿದ್ದಾರೆ. ಆದರೆ ಕೋರ್ಟ್‌ನ ಯಾವ ನಿಲುವಿನ ಬಗ್ಗೆ ತಾವು ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ದುಬೆ ಹೇಳಿದ್ದೇನು?
- ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಅವರಿಗೇ ಜಡ್ಜ್‌ಗಳು ಸೂಚನೆ ನೀಡಲು ಹೇಗೆ ಸಾಧ್ಯ?
- ಸಂಸತ್ತು ದೇಶದ ಕಾನೂನು ರೂಪಿಸುತ್ತದೆ. ಆ ಸಂಸತ್ತಿಗೇ ನ್ಯಾಯಾಲಯಗಳು ನಿರ್ದೇಶನ ಕೊಡಲು ಸಾಧ್ಯವೇ?
- ಹೀಗಾದರೆ ಕಾನೂನು ರೂಪಿಸುವುದು ಹೇಗೆ? ಯಾವ ಕಾನೂನು ರಾಷ್ಟ್ರಪತಿ 3 ತಿಂಗಳಲ್ಲಿ ನಿರ್ಧಾರ ಹೇಳಬೇಕೆಂದಿದೆ?
- ಇದರರ್ಥ ನೀವು ಈ ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿದ್ದೀರಿ, ಅಧಿಕಾರ ಮೀರಿ ನಿರ್ಧಾರ ಕೈಗೊಳ್ಳುತ್ತಿದ್ದೀರಿ
- ಅಯೋಧ್ಯೆ ವಿಷಯಕ್ಕೆ ದಾಖಲೆ ಕೇಳುವ ಕೋರ್ಟ್, ಈಗ ವಿಚಾರಣೆ ನಡೆಸುತ್ತಿರುವ ಪ್ರಕರಣಗಳಲ್ಲೇಕೆ ದಾಖಲೆ ಕೇಳಲ್ಲ?