ಸಾರಾಂಶ
ಪ್ರತಿ ವರ್ಷ ಸುಮಾರು 85 ಸಾವಿರ ಕೋಟಿ ರು. ಮೌಲ್ಯದ ಭಾರತೀಯ ಸರಕುಗಳು ಪರೋಕ್ಷವಾಗಿ ಪಾಕಿಸ್ತಾನವನ್ನು ತಲುಪುತ್ತಿವೆ
ನವದೆಹಲಿ: ಪ್ರತಿ ವರ್ಷ ಸುಮಾರು 85 ಸಾವಿರ ಕೋಟಿ ರು. ಮೌಲ್ಯದ ಭಾರತೀಯ ಸರಕುಗಳು ದುಬೈ, ಸಿಂಗಾಪುರ ಮತ್ತು ಕೋಲಂಬೊದಂತಹ ಬಂದರುಗಳ ಮೂಲಕ ಪರೋಕ್ಷವಾಗಿ ಪಾಕಿಸ್ತಾನವನ್ನು ತಲುಪುತ್ತಿವೆ ಎಂದು ಆರ್ಥಿಕ ಚಿಂತಕರ ಚಾವಡಿ ಜಿಟಿಆರ್‌ಐ ಅಂದಾಜಿಸಿದೆ.
‘ಪಾಕ್ ಜೊತೆಗೆ ಕೆಲವೊಂದು ವಸ್ತುಗಳ ವ್ಯಾಪಾರ ನಡೆಸಲು ಭಾರತ ನಿರ್ಬಂಧಿ ವಿಸಿದೆ. ಹೀಗಾಗಿ ಇಂಥ ವಸ್ತುಗಳನ್ನು ಮೂರನೇ ದೇಶವೊಂದರ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತದೆ. ಇದು ಯಾವಾಗಲೂ ಕಾನೂನುಬಾಹಿರವಲ್ಲದಿದ್ದರೂ, ತೆರೆಮರೆಯಲ್ಲಿ ನಡೆಯುತ್ತದೆ. ವ್ಯಾಪಾರಿಗಳು ವ್ಯಾಪಾರವನ್ನು ಮುಂದುವರಿಸಲು ಸೃಜನಶೀಲ ಮಾರ್ಗಗಳನ್ನು ಹೇಗೆ ಕಂಡುಕೊಳ್ಳುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಜಿಟಿಆರ್‌ಐ ಅಂದಾಜಿನ ಪ್ರಕಾರ ಈ ಮಾರ್ಗದ ಮೂಲಕ ವಾರ್ಷಿಕವಾಗಿ 85 ಸಾವಿರ ಕೋಟಿ ರು.ಗೂ ಅಧಿಕ ಮೌಲ್ಯದ ಭಾರತೀಯ ಸರಕುಗಳು ಪಾಕಿಸ್ತಾನವನ್ನು ತಲುಪುತ್ತವೆ’ ಎಂದು ಜಿಟಿಆರ್‌ಐ ಸ್ಥಾಪಕ ಅಜಯ್ ಶ್ರೀವಾತ್ಸವ ತಿಳಿಸಿದ್ದಾರೆ.
ವ್ಯವಸ್ಥೆ ನಡೆಯುವ ಪರಿ:
ಸರಕುಗಳು ನೇರವಾಗಿ ಭಾರತದಿಂದ ಪಾಕಿಸ್ತಾನಕ್ಕೆ ತೆರಳದೆ, ತೃತೀಯ ದೇಶದ ಮೂಲಕ ಪಾಕಿಸ್ತಾನವನ್ನು ತಲುಪುತ್ತಿದ್ದ ವಿಧಾನವನ್ನು ಜಿಟಿಆರ್‌ಐ ವಿವರಿಸಿದೆ. ಇದರ ಪ್ರಕಾರ, ಭಾರತೀಯ ಸಂಸ್ಥೆಗಳು ಈ ಬಂದರುಗಳಿಗೆ ಸರಕುಗಳನ್ನು ಕಳುಹಿಸುತ್ತವೆ. ಅಲ್ಲಿನ ಸ್ವತಂತ್ರ ಕಂಪನಿಗಳು ಸರಕುಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿಟ್ಟು, ನಂತರ ಅವುಗಳ ಲೇಬಲ್ ಮತ್ತು ದಾಖಲೆಗಳನ್ನು ಬೇರೆ ದೇಶದ ಹೆಸರಿನೊಂದಿಗೆ ಮಾರ್ಪಡಿಸುತ್ತವೆ. ಉದಾಹರಣೆಗೆ, ಭಾರತದಲ್ಲಿ ತಯಾರಿಸಿದ ಸರಕುಗಳನ್ನು ‘ಯುಎಇಯಲ್ಲಿ ತಯಾರಿಸಲಾಗಿದೆ’ ಎಂದು ಮರುಲೇಬಲ್ ಮಾಡಬಹುದು. ಈ ಬದಲಾವಣೆಯ ನಂತರ, ಅವುಗಳನ್ನು ಪಾಕಿಸ್ತಾನದಂತಹ ದೇಶಗಳಿಗೆ ರವಾನಿಸಲಾಗುತ್ತದೆ.