ಸಾರಾಂಶ
ನವದೆಹಲಿ: ಭಾರತದ 51ನೇ ಮುಖ್ಯ ನ್ಯಾಯಮೂರ್ತಿಗಳಾಗಿ ನ್ಯಾ.ಸಂಜೀವ್ ಖನ್ನಾ ಸೋಮವಾರ ಪ್ರಮಾಣ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಶಪಥ ಬೋಧಿಸಿದರು.
ಈ ವೇಳೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಿವೃತ್ತ ಸಿಜೆಐ ಚಂದ್ರಚೂಡ್ ಮೊದಲಾದವರು ಉಪಸ್ಥಿತರಿದ್ದರು.
ಭಾನುವಾರವಷ್ಟೇ ನಿವೃತ್ತರಾದ ನ್ಯಾ। ಡಿ.ವೈ. ಚಂದ್ರಚೂಡ್ ಅವರ ಸ್ಥಾನಕ್ಕೆ ನ್ಯಾ.ಖನ್ನಾ ನೇಮಕವಾಗಿದ್ದು, 2025ರ ಮೇ 13ರವರೆಗೂ ಹುದ್ದೆಯಲ್ಲಿ ಇರಲಿದ್ದಾರೆ. ನ್ಯಾ. ಖನ್ನಾಗೆ ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಭ ಕೋರಿದ್ದಾರೆ.
ಸಿಜೆಐ ಖನ್ನಾ ಹಿನ್ನೆಲೆ: ದೆಹಲಿ ಮೂಲದ ವಕೀಲರ ಕುಟುಂಬದಲ್ಲಿ ಜನಿಸಿದ ಸಂಜೀವ್ ಖನ್ನಾ, ಜಿಲ್ಲಾ ನ್ಯಾಯಾಲಯಗಳು ಹಾಗೂ ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದ ನ್ಯಾ. ಖನ್ನಾ 2019ರ ಜ.18ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಕಳೆದ 5 ವರ್ಷಗಳಲ್ಲಿ ಚುನಾವಣೆಗಳಲ್ಲಿ ಇವಿಎಂ ಬಳಕೆ, ಚುನಾವಣಾ ಬಾಂಡ್ ರದ್ದತಿ, ಆರ್ಟಿಕಲ್ 370 ರದ್ದತಿ ಸೇರಿದಂತೆ ಅನೇಕ ಮಹತ್ವಪೂರ್ಣ ತೀರ್ಪುಗಳನ್ನು ನೀಡಿದ್ದಾರೆ. ಅವರ ತಂದೆ ನ್ಯಾ। ದೆವ್‌ರಾಜ್ ಖನ್ನಾ ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದರು. ಇವರ ಚಿಕ್ಕಪ್ಪ ಎಚ್.ಆರ್. ಖನ್ನಾ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಸಮಯದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ವೈರತ್ವ ಕಟ್ಟಿಕೊಂಡ ಕಾರಣ ಸಿಜೆಐ ಹುದ್ದೆಯಿಂದ ವಂಚಿತರಾಗಿದ್ದರು.
ಇಂದಿರಾರಿಂದ ಶಿಕ್ಷೆಗೊಳಗಾಗಿದ್ದ ನ್ಯಾ.ಸಂಜೀವ್ ಖನ್ನಾ ಚಿಕ್ಕಪ್ಪ!
1976ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ನ್ಯಾ.ಹಂಸ್ ರಾಜ್ ಖನ್ನಾ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿದ್ದರು. ಈ ವೇಳೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಅವಧಿಯ ಪ್ರಕರಣವೊಂದರ ತೀರ್ಪು ನೀಡಿದ್ದ ನ್ಯಾಯಪೀಠದ ಭಾಗವಾಗಿದ್ದ ನ್ಯಾ.ಹಂಸ್ ರಾಜ್ ಅವರು ಭಿನ್ನ ತೀರ್ಪು ನೀಡಿದ್ದರು. ಈ ತೀರ್ಪು ತುರ್ತು ಪರಿಸ್ಥಿತಿಯ ವೇಳೆಯಲ್ಲೂ ಮಾನವ ಹಕ್ಕು ಉಲ್ಲಂಘನೆ ವಿರೋಧಿಸುವ ಅಭಿಪ್ರಾಯ ಹೊಂದಿತ್ತು.
ಆಗ ಅದು ಅಲ್ಪಮತದ ತೀರ್ಪಾಗಿದ್ದರೂ ಇಂದಿಗೂ ಅದನ್ನು ನಿರ್ಭೀತ ನ್ಯಾಯಾಂಗದ ವಿಷಯದ ಬಂದಾಗ ಈಗಲೂ ಪ್ರಸ್ತಾಪಿಸಲಾಗುತ್ತದೆ. ಆದರೆ ಸರ್ಕಾರಕ್ಕೆ ವಿರುದ್ಧವಾಗಿದ್ದ ಈ ತೀರ್ಪಿನ ಹಿನ್ನೆಲೆಯಲ್ಲಿ ಆಗಿನ ಇಂದಿರಾ ಸರ್ಕಾರ, ನ್ಯಾ.ಹಂಸ್ ರಾಜ್ ಅವರಿಗೆ ಸಿಜೆಐ ಪಟ್ಟ ನಿರಾಕರಿಸಿದೆ, ಅವರಿಗಿಂತ ಕಿರಿಯರಾದ ನ್ಯಾ. ಮೊಹಮ್ಮದ್ ಹಿದಾಯುತುಲ್ಲಾ ಅವರನ್ನು ಸಿಜೆಐ ಮಾಡಲಾಗಿತ್ತು. ಇದೀಗ 48 ವರ್ಷಗಳ ಬಳಿಕ ನ್ಯಾ.ಹಂಸ್ ರಾಜ್ ಖನ್ನಾ ಅವರ ಸೋದರನ ಪುತ್ರ ನ್ಯಾ.ಸಂಜೀವ್ ಖನ್ನಾ ಅದೇ ಸಿಜೆಐ ಪಟ್ಟ ಏರಿದ್ದಾರೆ.