ಲಂಚ ಕೇಸಲ್ಲಿ ಶಾಸಕರಿಗೆ ರಕ್ಷಣೆ ಇಲ್ಲ: ಸರ್ವೋಚ್ಚ ನ್ಯಾಯಾಲಯ

| Published : Mar 05 2024, 01:31 AM IST / Updated: Mar 05 2024, 08:13 AM IST

ಸಾರಾಂಶ

ಸದನದಲ್ಲಿ ಮತ ಚಲಾವಣೆ ಮಾಡಲು ಅಥವಾ ಪ್ರಶ್ನೆ ಕೇಳಲು ಲಂಚ ಪಡೆಯುವ ಸಂಸದರು, ಶಾಸಕರಿಗೆ ಈವರೆಗೆ ಇದ್ದ ಕಾನೂನು ವಿಚಾರಣೆಯ ವಿನಾಯಿತಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿದೆ.

ಪಿಟಿಐ ನವದೆಹಲಿ

ಸದನದಲ್ಲಿ ಮತ ಚಲಾವಣೆ ಮಾಡಲು ಅಥವಾ ಪ್ರಶ್ನೆ ಕೇಳಲು ಲಂಚ ಪಡೆಯುವ ಸಂಸದರು, ಶಾಸಕರಿಗೆ ಈವರೆಗೆ ಇದ್ದ ಕಾನೂನು ವಿಚಾರಣೆಯ ವಿನಾಯಿತಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿದೆ. 

ತನ್ಮೂಲಕ ಜೆಎಂಎಂ ಲಂಚ ಪ್ರಕರಣ ಸಂಬಂಧ 1998ರಲ್ಲಿ ಸಂಸದರು, ಶಾಸಕರಿಗೆ ಕಾನೂನು ವಿಚಾರಣೆಯಿಂದ ವಿನಾಯಿತಿ ನೀಡಿ ಸುಪ್ರೀಂಕೋರ್ಟ್‌ನ ಪಂಚಸದಸ್ಯ ಪೀಠ ನೀಡಿದ್ದ ತೀರ್ಪನ್ನು ವಜಾಗೊಳಿಸಿದೆ.

ಇದೇ ವೇಳೆ, ಶಾಸನಸಭೆ ಸದಸ್ಯರ ಭ್ರಷ್ಟಾಚಾರ ಹಾಗೂ ಲಂಚಾವತಾರದಿಂದಾಗಿ ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯವೇ ಹಾಳಾಗುತ್ತದೆ ಎಂದು ಸುಪ್ರೀಂಕೋರ್ಟ್‌ನ 7 ಸದಸ್ಯರ ಸಾಂವಿಧಾನಿಕ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಸರ್ವೋಚ್ಚ ನ್ಯಾಯಾಲಯದ ಈ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ‘ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ.

ರಾಜಕಾರಣದ ಸ್ವಚ್ಛತೆಗೆ ಇದು ಸಹಕಾರಿಯಾಗಲಿದ್ದು, ವ್ಯವಸ್ಥೆಯ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸುತ್ತದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಕೋರ್ಟ್‌ ಹೇಳಿದ್ದೇನು?
ಸದನದಲ್ಲಿ ಮತ ಚಲಾವಣೆ ಮಾಡಲು ಅಥವಾ ಮಾತನಾಡಲು ಲಂಚ ಪಡೆಯುವ ಸಂಸದರು ಹಾಗೂ ಶಾಸಕರು ವಿಚಾರಣೆಯಿಂದ ಅತೀತರಲ್ಲ. ಸಂಸದೀಯ ಹಕ್ಕುಬಾಧ್ಯತೆಗಳು ಲಂಚಾವತಾರಕ್ಕೆ ಯಾವುದೇ ರಕ್ಷಣೆಯನ್ನು ನೀಡುವುದಿಲ್ಲ. 

ಜನಪ್ರತಿನಿಧಿ ಲಂಚ ಪಡೆಯುವುದು ಸ್ವತಂತ್ರ ಅಪರಾಧ. ಶಾಸನಸಭೆಗಳ ಸದಸ್ಯರ ಭ್ರಷ್ಟಾಚಾರ ಹಾಗೂ ಲಂಚಾವತಾರದಿಂದ ಸಾರ್ವಜನಿಕ ಜೀವನದಲ್ಲಿನ ಪ್ರಾಮಾಣಿಕತೆಯೇ ನಶಿಸಿಹೋಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠ ಹೇಳಿತು.

ಜೆಎಂಎಂ ಲಂಚ ಪ್ರಕರಣಕ್ಕೆ ಸಂಬಂಧಿಸಿದ 1998ರ ಪಂಚ ಸದಸ್ಯ ನ್ಯಾಯಪೀಠದ ತೀರ್ಪು ಸಂವಿಧಾನದ ಪರಿಚ್ಛೇದ 105 ಹಾಗೂ 194ಕ್ಕೆ ತದ್ವಿರುದ್ಧವಾಗಿದೆ. 

ಸದನದೊಳಗೆ ಚರ್ಚೆ ಹಾಗೂ ಸಂವಾದಗಳು ನಡೆಯುವಂತಹ ವಾತಾವರಣ ಇರಲು ಈ ಎರಡು ಪರಿಚ್ಛೇದಗಳು ನಿರ್ಭೀತ ವಾತಾವರಣದ ಅವಕಾಶ ಮಾಡಿಕೊಡುತ್ತವೆ. 

ಒಬ್ಬ ಸದಸ್ಯ ಮುಕ್ತವಾಗಿ ಹಾಗೂ ಆತ್ಮಸಾಕ್ಷಿಯಿಂದ ಕೆಲಸ ಮಾಡಲು ಅನವು ಮಾಡಿಕೊಡುತ್ತವೆ. ಆದರೆ ಒಬ್ಬ ಸದಸ್ಯ ಮತ ಚಲಾವಣೆಗೆ ಅಥವಾ ಮಾತನಾಡಲು ಲಂಚ ಪಡೆದುಕೊಂಡರೆ ಆ ಉದ್ದೇಶವೇ ಹಾಳಾಗಿಬಿಡುತ್ತದೆ ಎಂದು ತಿಳಿಸಿತು.

ಸಂವಿಧಾನದ 105ನೇ ಪರಿಚ್ಛೇದ ಸಂಸದರಿಗೆ ಮತ್ತು 194ನೇ ಪರಿಚ್ಛೇದ ಶಾಸಕರಿಗೆ ಸದನದೊಳಗೆ ವಿವಿಧ ರೀತಿಯ ರಕ್ಷಣೆಗಳನ್ನು ನೀಡುವ ಕಾನೂನುಗಳಾಗಿವೆ.

ಏನಿದು ಪ್ರಕರಣ?
2012ರ ರಾಜ್ಯಸಭೆ ಚುನಾವಣೆಯ ವೇಳೆ ನಿರ್ದಿಷ್ಟ ಅಭ್ಯರ್ಥಿಯ ಪರ ಮತ ಚಲಾವಣೆ ಮಾಡಲು ಜೆಎಂಎಂ ಪಕ್ಷದ ಸಂಸ್ಥಾಪಕ ಶಿಬು ಸೊರೇನ್‌ ಅವರ ಸೊಸೆ ಹಾಗೂ ಆ ಪಕ್ಷದ ಶಾಸಕಿ ಸೀತಾ ಸೊರೇನ್‌ ಲಂಚ ಪಡೆದಿದ್ದರು ಎಂಬ ಕಾರಣಕ್ಕೆ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು. 

ಜಾರ್ಖಂಡ್‌ ಹೈಕೋರ್ಟ್‌ ಆ ಪ್ರಕರಣವನ್ನು ವಜಾ ಮಾಡಲು 2014ರ ಫೆ.17ರಂದು ನಿರಾಕರಿಸಿತ್ತು. ಹೀಗಾಗಿ ಅವರು ಸುಪ್ರೀಂಕೋರ್ಟ್‌ ಕದ ಬಡಿದಿದ್ದರು. ಇಂಥದ್ದೇ ಪ್ರಕರಣದಲ್ಲಿ ತಮ್ಮ ಮಾವ ಶಿಬು ಸೊರೇನ್‌ ಅವರಿಗೆ ಯಾವುದೇ ಶಿಕ್ಷೆಯಾಗಿರಲಿಲ್ಲ. ಏಕೆಂದರೆ, ಜನಪ್ರತಿನಿಧಿಗಳಿಗೆ ಸಾಂವಿಧಾನಿಕ ವಿನಾಯಿತಿ ಇದೆ ಎಂದು ಸೀತಾ ವಾದಿಸಿದ್ದರು. 

ಈ ಹಿನ್ನೆಲೆಯಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರು ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು 2019ರಲ್ಲಿ ಸಾಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದ್ದರು. ಪ್ರಕರಣದ ತೀರ್ಪನ್ನು ಮರುಪರಿಶೀಲಿಸುವುದಾಗಿ 2023ರ ಸೆ.20ರಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು.

ಜೆಎಂಎಂ ಪ್ರಕರಣದ ಹಿನ್ನೆಲೆ: 1993ರ ಜುಲೈನಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. 265 ಪರ, 251 ವಿರುದ್ಧ ಮತಗಳೊಂದಿಗೆ ಸರ್ಕಾರ ಪತನದಿಂದ ಬಚಾವಾಗಿತ್ತು. ಇದಾದ ಒಂದು ವರ್ಷದ ಬಳಿಕ ಗಂಭೀರ ಆರೋಪವೊಂದು ಕೇಳಿಬಂದಿತ್ತು. 

ಅದೇನೆಂದರೆ, ನರಸಿಂಹರಾವ್‌ ಸರ್ಕಾರಕ್ಕೆ ಬೆಂಬಲ ನೀಡಲು ಜೆಎಂಎಂ ಸಂಸದರು ಲಂಚ ಪಡೆದುಕೊಂಡಿದ್ದಾರೆ ಎಂಬುದಾಗಿತ್ತು. ಈ ಸಂಬಂಧ ಶಿಬು ಸೊರೇನ್‌ ಹಾಗೂ ನಾಲ್ವರು ಜೆಎಂಎಂ ಸಂಸದರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಆದರೆ, ಸಂಸದರಿಗೆ ಸಂವಿಧಾನದ ವಿಧಿ 105ರಡಿ ವಿಚಾರಣೆಯಿಂದ ವಿನಾಯಿತಿ ಇದೆ ಎಂದು ಸುಪ್ರೀಂಕೋರ್ಟ್‌ ಪ್ರಕರಣವನ್ನು ವಜಾಗೊಳಿಸಿತ್ತು.

ಯಾರಿಗೆ ಅನ್ವಯ?
ಸದನದಲ್ಲಿ ಯಾವುದೇ ವ್ಯಕ್ತಿಯ ಪರವಾಗಿ ಪ್ರಶ್ನೆ ಕೇಳಲು ಲಂಚ ಪಡೆದಿದ್ದರೆ, ಸದನದೊಳಗೆ ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷದ ಪರವಾಗಿ ಮತ ಚಲಾಯಿಸಲು ಲಂಚ ಪಡೆದಿದ್ದರೆ ಅಂಥವರು ಇನ್ನುಮುಂದೆ ವಿಚಾರಣೆಗೆ ಒಳಪಡಬೇಕಾಗುತ್ತದೆ. ಸಂಸದರು ಹಾಗೂ ಶಾಸಕರಿಗೆ ಈ ತೀರ್ಪು ಅನ್ವಯಿಸುತ್ತದೆ.

ಏನಿದು ಪ್ರಕರಣ?
1993ರಲ್ಲಿ ಪಿ.ವಿ.ನರಸಿಂಹರಾವ್‌ ಅವರ ಸರ್ಕಾರವನ್ನು ಉಳಿಸಲು ಜೆಎಂಎಂ ಸಂಸದರು ಲಂಚ ಪಡೆದು ಮತದಾನ ಮಾಡಿದ್ದರು. ಅವರ ವಿರುದ್ಧ ಕೇಸು ದಾಖಲಾದಾಗ, ಸದನದಲ್ಲಿ ಸಂಸದರಿಗೆ ‘ಇಮ್ಯುನಿಟಿ’ ಇದೆ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್‌ ಕೇಸು ವಜಾಗೊಳಿಸಿತ್ತು. 

2012ರಲ್ಲಿ ಇದೇ ಆರೋಪ ಶಿಬು ಸೊರೇನ್ ಸೊಸೆ ಮೇಲೆ ಬಂದಿತ್ತು. ಆ ಕೇಸಿನಲ್ಲಿ 2019ರಲ್ಲಿ ‘ಇಮ್ಯುನಿಟಿ’ ವಿಚಾರವನ್ನು ಸಪ್ತಸದಸ್ಯ ಸಾಂವಿಧಾನಿಕ ಪೀಠ ಕೈಗೆತ್ತಿಕೊಂಡಿತ್ತು. ಈಗ ತೀರ್ಪು ನೀಡಿದೆ.

ಪರಿಣಾಮ ಏನು?
ಸದನದಲ್ಲಿ ಪ್ರಶ್ನೆ ಕೇಳಲು ಅಥವಾ ಮತದಾನ ಮಾಡಲು ಲಂಚ ಪಡೆದ ಆರೋಪ ಸಂಸದರು ಅಥವಾ ಶಾಸಕರ ಮೇಲೆ ಬಂದರೆ ಇನ್ನುಮುಂದೆ ಅವರು ವಿಚಾರಣೆ ಎದುರಿಸಬೇಕಾಗುತ್ತದೆ. ತಮಗೆ ಕಾಯ್ದೆಯಡಿ ರಕ್ಷಣೆಯಿದೆ ಎಂಬ ಅಂಶವನ್ನು ಕೋರ್ಟ್‌ನಲ್ಲಿ ಮಂಡಿಸಲು ಸಾಧ್ಯವಿಲ್ಲ.