ಸಾರಾಂಶ
ವಾಷಿಂಗ್ಟನ್: ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿ ಅಮೆರಿಕದಲ್ಲಿ ತನಿಖೆ ಎದುರಿಸುತ್ತಿರುವ ಅದಾನಿ ಗ್ರೂಪ್ ಸಂಸ್ಥೆಗೆ ನೆಮ್ಮದಿ ನೀಡುವ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ವಿದೇಶಿ ನೆಲದಲ್ಲಿನ ಭ್ರಷ್ಟಾಚಾರದ ತನಿಖೆಗೆ ಅವಕಾಶ ಮಾಡಿಕೊಡುವ ಐದು ದಶಕಗಳಷ್ಟು ಹಳೆಯ ಕಾನೂನಿಗೆ ತಡೆ ನೀಡುವ ಕಾರ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಇದೇ ಕಾನೂನಿನಡಿ ಅದಾನಿ ಕಂಪನಿ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಕಳೆದ ವರ್ಷ ದೋಷಾರೋಪಣೆ ಸಲ್ಲಿಸಲಾಗಿತ್ತು.
ಅಮೆರಿಕದ 1977ರ ಫಾರಿನ್ ಕರಪ್ಟ್ ಪ್ರ್ಯಾಕ್ಟೀಸಸ್ ಕಾಯ್ದೆ (ಎಫ್‌ಸಿಪಿಎ)ಯು ಗುತ್ತಿಗೆ ಪಡೆಯುವ ಸಲುವಾಗಿ ಅಮೆರಿಕದ ಕಂಪನಿಗಳು, ವ್ಯಕ್ತಿಗಳು ಮತ್ತು ವಿದೇಶಿ ಕಂಪನಿಗಳು ಹೊರದೇಶದ ಸಂಸ್ಥೆಗಳಿಗೆ ಲಂಚ ನೀಡುವುದನ್ನು ನಿರ್ಬಂಧಿಸುತ್ತದೆ. ಅಮೆರಿಕದ ಸಂಸ್ಥೆ ಜತೆಗೆ ಯಾವುದೇ ಸಂಬಂಧ ಹೊಂದಿರುವ ವಿದೇಶಿ ಸಂಸ್ಥೆಗಳ ವಿರುದ್ಧವೂ ಭ್ರಷ್ಟಾಚಾರದ ಆರೋಪ ಕೇಳಿಬಂದರೆ ತನಿಖೆಗೆ ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಇದೇ ಕಾಯ್ದೆಯನ್ನು ಇದೀಗ ಟ್ರಂಪ್ ತಡೆಹಿಡಿದ್ದಾರೆ.==
ಸ್ಟೀಲ್ ಮೇಲೆ ಟ್ರಂಪ್ 25% ಸುಂಕ: ಇಯು ತೆರಿಗೆ ತಿರುಗೇಟು ಎಚ್ಚರಿಕೆವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗುತ್ತಿದ್ದಂತೆ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಸಾಲುಸಾಲು ತೆರಿಗೆಗಳನ್ನು ಘೋಷಿಸುತ್ತಿರುವ ಡೊನಾಲ್ಡ್ ಟ್ರಂಪ್ ಸ್ಟೀಲ್ ಹಾಗೂ ಅಲ್ಯುಮಿನಿಯಂ ಆಮದಿನ ಮೇಲೆ ಶೇ.25ರಷ್ಟು ಸುಂಕ ಹೇರಿದ್ದಾರೆ.
ಜಾಗತಿಕ ಸ್ಪರ್ಧೆಯಿಂದ ಸ್ಥಳೀಯ ಉತ್ಪಾದಕರಿಗೆ ರಕ್ಷಣೆ ನೀಡಿ, ತಮ್ಮ ಉತ್ಪನ್ನಗಳಿಗೆ ಅಧಿಕ ಬೆಲೆ ನಿಗದಿಪಡಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ಟ್ರಂಪ್ ಸ್ಟೀಲ್ ಆಮದಿನ ಸುಂಕ ಹೇರುವ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಭಾರತ ಸೇರಿದಂತೆ ಕೆನಡಾ, ಬ್ರಜಿಲ್, ಮೆಕ್ಸಿಕೋ ಹಾಗೂ ಸೌತ್ ಕೊರಿಯಾಗಳಂತಹ ದೇಶಗಳ ಸ್ಟೀಲ್ ಉದ್ಯಮದ ಮೇಲೆ ಋುಣಾತ್ಮಕ ಪರಿಣಾಮವಾಗಿದೆ.ಟ್ರಂಪ್‌ರ ಈ ನಡೆಗೆ ತೆರಿಗೆ ಮೂಲಕವೇ ಉತ್ತರಿಸುವುದಾಗಿ ಯುರೋಪಿಯನ್ ಒಕ್ಕೂಟ ಘೋಷಿಸಿದೆ. 27 ದೇಶಗಳನ್ನೊಳಗೊಂಡ ಯುರೋಪಿಯನ್ ಒಕ್ಕೂಟದ ಮುಖ್ಯಸ್ಥ ಉರ್ಸುಲಾ ವೊನ್ ದೆರ್ ಲೆಯೆನ್ ಮಾತನಾಡಿ, ‘ಟ್ಯಾರಿಫ್‌ನಂತಹ ತೆರಿಗೆಗಳು ಉದ್ಯೋಗಕ್ಕೆ ಹಾಗೂ ಗ್ರಾಹಕರ ಪಾಲಿಗೆ ಅತಿ ಕೆಟ್ಟದ್ದು. ಇಯು ತನ್ನ ಆರ್ಥಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ. ಸ್ಟೀಲ್ ಹಾಗೂ ಅಲ್ಯುಮಿನಿಯಂ ಮೇಲಿನ ತೆರಿಗೆಗೆ ಉತ್ತರಿಸದೆ ಬಿಡುವುದಿಲ್ಲ’ ಎಂದು ತಾವೂ ಅಮೆರಿಕದ ಮೇಲೆ ಹೆಚ್ಚಿನ ಅಥವಾ ಸಮ ಪ್ರಮಾಣದ ತೆರಿಗೆ ಹೇರುವ ಸೂಚನೆ ನೀಡಿದ್ದಾರೆ. ಇದಕ್ಕೆ ಯುರೋಪಿಯನ್ ಒಕ್ಕೂಟದ ಅತಿದೊಡ್ಡ ಆರ್ಥಿಕತೆಯಾದ ಜರ್ಮನಿ ಕೂಡ ಬೆಂಬಲ ಸೂಚಿಸಿದೆ.ಮೊದಲ ಅವಧಿಯಲ್ಲೂ ಇದೇ ಕತೆ:
ಟ್ರಂಪ್ ತಮ್ಮ ಮೊದಲ ಅವಧಿಯಲ್ಲೂ ಭಾರೀ ತೆರಿಗೆ ವಿಧಿಸಿದ್ದರಿಂದ ಮಿತ್ರದೇಶಗಳೊಂದಿಗಿನ ಸಂಬಂಧದಲ್ಲಿ ಬಿರುಕು ಮೂಡಿತ್ತು. ಜತೆಗೆ, ಸ್ಟೀಲ್ ಹಾಗೂ ಅಲ್ಯುಮೀನಿಯಂ ದರ ಹೆಚ್ಚಿ, ಉತ್ಪಾದಕರ ಮೇಲೆ ಟ್ರಂಪ್ ಅಂದುಕೊಂಡಿದ್ದುದರ ವ್ಯತಿರಿಕ್ತ ಪರಿಣಾಮ ಬೀರಿತ್ತು. ಯುರೋಪಿಯನ್ ಯೂನಿಯನ್ 2018ರಲ್ಲಿ ಅಮೆರಿಕದಿಂದ ಆಮದಾಗುವ ಮೋಟರ್‌ಸೈಕಲ್, ಮದ್ಯ, ಪೀನಟ್ ಬಟರ್ , ಜೀನ್ಸ್ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿತ್ತು.==
ಗಾಜಾಕ್ಕೆ ಪ್ಯಾಲೆಸ್ತೀನಿಯರು ಮರಳಲು ಬಿಡಲ್ಲ: ಟ್ರಂಪ್!ವಾಷಿಂಗ್ಟನ್: ಯುದ್ಧದಿಂದ ನಲುಗಿರುವ ಗಾಜಾ ಪಟ್ಟಿಯನ್ನು ಅಮೆರಿಕ ವಶ ಪಡಿಸಿಕೊಳ್ಳುವ ಬಗ್ಗೆ ಮಾತಾಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನನ್ನ ಯೋಜನೆಯ ಪ್ರಕಾರ ಗಾಜಾದಲ್ಲಿರುವ ಪ್ಯಾಲೆಸ್ತೇನಿಗಳಿಗೆ ಅಲ್ಲಿಗೆ ಮರಳಲು ಹಕ್ಕಿಲ್ಲ’ ಎಂದಿದ್ದಾರೆ.ಅಮೆರಿಕದ ಮಿತ್ರ ದೇಶಗಳಾದ ಜೋರ್ಡನ್ ಹಾಗೂ ಈಜಿಪ್ಟ್‌ನಂತಹ ಅರಬ್ ದೇಶಗಳಿಗೆ ಗಾಜಾದಿಂದ ಪ್ಯಾಲೆಸ್ತೇನಿಗಳನ್ನು ತಮ್ಮ ದೇಶಗಳಿಗೆ ಕರೆದುಕೊಳ್ಳುವಂತೆ ಒತ್ತಾಯಿಸುತ್ತಿರುವ ಟ್ರಂಪ್, ಸಂದರ್ಶನವೊಂದರಲ್ಲಿ ಮಾತಾಡುತ್ತಾ, ‘ಪ್ಯಾಲೆಸ್ತೇನಿಗಳಿಗಾಗಿ ಅವರಿರುವಲ್ಲಿಗಿಂತ ಕೊಂಚ ದೂರ ಸುರಕ್ಷಿತ ಜಾಗ ಮಾಡಿಕೊಡುತ್ತೇವೆ. ಇತ್ತ ಗಾಜಾವನ್ನು ವಶಪಡಿಸಿಕೊಂಡು, ಹೆಚ್ಚು ಹಣ ಖರ್ಚು ಮಾಡದೆ ಭವಿಷ್ಯಕ್ಕಾಗಿ ರಿಯಲ್ ಎಸ್ಟೇಟ್‌ನಂತ ಅಭಿವೃದ್ಧಿಪಡಿಸುತ್ತೇನೆ. ಇದೊಂದು ಸುಂದರ ಜಾಗವಾಗಲಿದೆ’ ಎಂದರು.ಟ್ರಂಪ್ ಯೋಜನೆಗೆ ಅರಬ್ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸುತ್ತಿವೆ. ಅಲ್ಲದೆ, ಜೋರ್ಡನ್ ರಾಜ ಅಬ್ದುಲ್ಲಾ II ವೈಟ್‌ಹೌಸ್‌ಗೆ ಭೇಟಿ ನೀಡುವ ಮುನ್ನಾದಿನ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
==ಓಪನ್‌ಎಐ ಖರೀದಿಗೆ 8.45 ಲಕ್ಷ ಕೋಟಿ ರು. ಬಿಡ್ ಸಲ್ಲಿಸಿದ ಮಸ್ಕ್
ನವದೆಹಲಿ: ವಿಶ್ವದ ಜನಪ್ರಿಯ ಕೃತಕ ಬುದ್ಧಿಮತ್ತೆ ಸಂಸ್ಥೆ ಓಪನ್ ಎಐ ಅನ್ನು ಕೊಂಡುಕೊಳ್ಳಲು ಇದೀಗ ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಭಾರೀ ಮೊತ್ತದ ಆಫರ್ ಮುಂದಿಟ್ಟಿದ್ದಾರೆ. ಮಸ್ಕ್ ಮತ್ತು ಇತರೆ ಉದ್ಯಮಿಗಳು ಸೇರಿ ಓಪನ್‌ಎಐ ಸಂಸ್ಥೆಗೆ 8.45 ಲಕ್ಷ ಕೋಟಿಯ ಆಫರ್ ನೀಡಿದ್ದಾರೆ.ಆದರೆ, ಸಂಸ್ಥೆಯ ಸಿಇಒ ಸ್ಯಾಮ್ ಆಲ್ಟ್‌ಮನ್ ಮಾತ್ರ ಈ ಆಫರ್ ಅನ್ನು ತಿರಸ್ಕರಿಸಿದ್ದಾರೆ. ಅದರ ಬದಲು ನೀವು ಸಾಮಾಜಿಕ ಜಾಲತಾಮ ‘ಎಕ್ಸ್’ ಅನ್ನು ಅನ್ನು ಮಾರಾಟ ಮಾಡುವುದಾದರೆ 84 ಸಾವಿರ ಕೋಟಿಗೆ ಖರೀದಿಸುವುದಾಗಿ ಮಸ್ಕ್ ಕಾಲೆಳೆದಿದ್ದಾರೆ.ಎಲಾನ್ ಮಸ್ಕ್ ತಮ್ಮ ವಕೀಲರ ಮೂಲಕ ಒಪನ್ ಎಐ ಬೋರ್ಡ್ ಮುಂದೆ ಸೋಮವಾರ ಭಾರೀ ಮೊತ್ತದ ಖರೀದಿ ಆಫರ್ ನೀಡಿದ್ದರು. ಆದರೆ ಓಪನ್‌ಎಐ ಅನ್ನು ಮಾರಾಟಮಾಡುವ ಸಾಧ್ಯತೆಯನ್ನು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಳ್ಳಿಹಾಕಿದ ಸಿಇಒ ಆಲ್ಟ್‌ಮನ್, ಈ ಆಫರ್‌ಗಾಗಿ ಧನ್ಯವಾದಗಳು. ಆದರೆ ನಾವು ಓಪನ್ ಎಐ ಅನ್ನು ಮಾರಾಟ ಮಾಡಲು ಇಚ್ಛಿಸುವುದಿಲ್ಲ. ಬದಲಾಗಿ ಮಸ್ಕ್ ಬಯಸಿದರೆ 84 ಸಾವಿರ ಕೋಟಿಗೆ ಸಾಮಾಜಿಕ ಜಾಲತಾಣ ''''''''ಎಕ್ಸ್'''''''' ಅನ್ನೇ ಖರೀದಿಸಲು ಸಿದ್ಧ ಎಂದು ಹೇಳಿದ್ದಾರೆ.ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಸ್ಕ್, ಆಲ್ಟ್‌ಮನ್ ಅವರನ್ನು ಮೋಸಗಾರ ಎಂದು ಕರೆದಿದ್ದಾರೆ. ಜತೆಗೆ, ಆಲ್ಟ್‌ಮನ್ ಹಗರಣ ಎಂದು ಪೋಸ್ಟ್ ಮಾಡಿದ್ದಾರೆ.
==ಗೋಹತ್ಯೆ ನಿಷೇಧ: ಕೇಂದ್ರ ಸರ್ಕಾರಕ್ಕೆ 33 ದಿನಗಳ ಗಡುವಿತ್ತ ಶಂಕರಾಚಾರ್ಯಮಹಾಕುಂಭ ನಗರ: ದೇಶದಲ್ಲಿ ಗೋ ಹತ್ಯೆ ನಿಷೇಧಿಸಿ, ಗೋವುಗಳನ್ನು ರಾಷ್ಟ್ರಮಾತಾ ಎಂದು ಘೋಷಿಸಬೇಕು ಎಂದು ಉತ್ತರಾಖಂಡದ ಜ್ಯೋತಿಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಕೇಂದ್ರ ಸರ್ಕಾರಕ್ಕೆ 33 ದಿನಗಳ ಗಡುವು ನೀಡಿದ್ದಾರೆ. ಒಂದು ವೇಳೆ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳದೇ ಹೋದಲ್ಲಿ ಮಾ.17ರ ನಂತರ ಕಠಿಣ ನಿಲುವು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಒಂದೂವರೆ ವರ್ಷಗಳಿಂದ ನಾವು ಹಸುವನ್ನು ರಾಷ್ಟ್ರಮಾತಾ ಎಂದು ಘೋಷಿಸಲು ಆಂದೋಲನವನ್ನು ನಡೆಸುತ್ತಿದ್ದೇವೆ. ಈಗ ನಾವು ಮಾಘ ಪೂರ್ಣಿಮೆಯ ಮರುದಿನದಿಂದ 33 ದಿನಗಳ ಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದೇವೆ. ಈ ಯಾತ್ರೆ ಮಾರ್ಚ್ 17ರಂದು ದೆಹಲಿಗೆ ಹೋಗುವ ಮೂಲಕ ಪೂರ್ಣಗೊಳ್ಳಲಿದೆ. ಈ 33 ದಿನಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಮಾರ್ಚ್ 17ರಂದು ಸಂಜೆ 5 ಗಂಟೆಯ ನಂತರ ಕಠಿಣ ನಿಲುವು ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.
==ಸೆನ್ಸೆಕ್ಸ್ 1018 ಅಂಕ ಇಳಿಕೆ: ಟ್ರಂಪ್ ತೆರಿಗೆ ಶಾಕ್‌ಗೆ 5 ದಿನಕ್ಕೆ 17 ಲಕ್ಷ ಕೋಟಿ ನಷ್ಟಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 1018 ಅಂಕಗಳ ಭಾರೀ ಕುಸಿತ ಕಂಡು 76293ರಲ್ಲಿ ಮುಕ್ತಾಯವಾಗಿದೆ. ನಿಫ್ಟಿ 309 ಅಂಕ ಕುಸಿದು 23071 ಅಂಕಗಳಲ್ಲಿ ಕೊನೆಗೊಂಡಿದೆ.ವಿವಿಧ ದೇಶಗಳ ಮೇಲೆ ಅಮೆರಿಕ ಹೇರುತ್ತಿರುವ ತೆರಿಗೆ ಮತ್ತು ಅದಕ್ಕೆ ವಿದೇಶಗಳ ತಿರುಗೇಟು ಜಾಗತಿಕ ಷೇರುಪೇಟೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ಕಳೆದ 5 ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟಾರೆ 2290 ಅಂಕ ಕುಸಿತ ಕಂಡಿದೆ. ಜೊತೆಗೆ ಷೇರುಪೇಟೆಯಲ್ಲಿ ನೊಂದಯಿತ ಕಂಪನಿಗಳ ಷೇರು ಮೌಲ್ಯ ಕುಸಿತದ ಕಾರಣ 5 ದಿನಗಳಲ್ಲಿ ಹೂಡಿಕೆದಾರರ 16.97 ಲಕ್ಷ ಕೋಟಿ ರು.ನಷ್ಟು ಸಂಪತ್ತು ಕರಗಿ ಹೋಗಿದೆ.
==ಗಲ್ಲು ಶಿಕ್ಷೆಗೊಳಗಾದ 544 ಕೈದಿಗಳು ಜೈಲಲ್ಲಿ: 32 ಜನರು ಕರ್ನಾಟಕದಲ್ಲಿನವದೆಹಲಿ: 2022ರ ಡಿ.31ರ ವೇಳೆಗೆ ದೇಶಾದ್ಯಂತ ವಿವಿಧ ಜೈಲುಗಳಲ್ಲಿ ಮರಣದಂಡನೆ ಶಿಕ್ಷೆಗೊಳಗಾದ 544 ಮಂದಿಯನ್ನು ಇರಿಸಲಾಗಿತ್ತು ಲೋಕಸಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್, ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಈ ಬಗ್ಗೆ ಮಾಹಿತಿ ನೀಡಿದ್ದು, ‘2022ರ ಡಿ.31ರ ವೇಳೆಗೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಒಟ್ಟು 95 ಕೈದಿಗಳು ಜೈಲಿನಲ್ಲಿದ್ದರು. ನಂತರ ಗುಜರಾತ್ (49), ಜಾರ್ಖಂಡ್ ಮತ್ತು ಮಹಾರಾಷ್ಟ್ರ (45), ಮಧ್ಯಪ್ರದೇಶ (39) ಕರ್ನಾಟಕ (32), ಬಿಹಾರ (27),ಪಶ್ಚಿಮ ಬಂಗಾಳ (26), ಹರ್ಯಾಣ (21), ರಾಜಸ್ಥಾನ ಮತ್ತು ಉತ್ತರಾಖಂಡ (20), ಕೇರಳ (19), ಆಂಧ್ರಪ್ರದೇಶ (15) ತಮಿಳುನಾಡು (19), ದೆಹಲಿ (9), ಜಮ್ಮು ಕಾಶ್ಮೀರ (8) ಕೈದಿಗಳಿದ್ದರು’ ಎಂದಿದ್ದಾರೆ.