ನ್ಯಾಯಾಧೀಶ ಬಿ.ಎಚ್‌. ಲೋಯಾ ಅವಧಿಪೂರ್ವ ಸಾವಿನ ಹಿಂದೆ ಸಂಚು : ಮಹುವಾ ಹೇಳಿಕೆಯಿಂದ ಕೋಲಾಹಲ

| Published : Dec 14 2024, 12:49 AM IST / Updated: Dec 14 2024, 04:45 AM IST

ಸಾರಾಂಶ

  ನ್ಯಾಯಾಧೀಶ ಬಿ.ಎಚ್‌. ಲೋಯಾ ಅವಧಿಪೂರ್ವ ಸಾವನ್ನಪ್ಪಿದರು.  ಅವರ ಸಾವಿನ ಹಿಂದೆ ಸಂಚು ಇತ್ತು ಎಂಬರ್ಥದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮಾಡಿದ ಆರೋಪ ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿ ಕಲಾಪ ಮುಂದೂಡಿಕೆ ಆಯಿತು.

ನವದೆಹಲಿ: ಕೇಂದ್ರ ಸಚಿವ ಅಮಿತ್‌ ಶಾ ಆರೋಪಿಯಾಗಿದ್ದ ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್ ಕೇಸಿನ ವಿಚಾರಣೆ ನಡೆಸುತ್ತಿದ್ದ ಮಹಾರಾಷ್ಟ್ರ ವಿಶೇಷ ಕೋರ್ಟ್‌ ನ್ಯಾಯಾಧೀಶ ಬಿ.ಎಚ್‌. ಲೋಯಾ ಅವಧಿಪೂರ್ವ ಸಾವನ್ನಪ್ಪಿದರು. ಅವರ ಸಾವಿನ ಹಿಂದೆ ಸಂಚು ಇತ್ತು ಎಂಬರ್ಥದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮಾಡಿದ ಆರೋಪ ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿ ಕಲಾಪ ಮುಂದೂಡಿಕೆ ಆಯಿತು.

ಶುಕ್ರವಾರ ಸಂವಿಧಾನದ ಮೇಲಿನ ಚರ್ಚೆ ವೇಳೆ ಮಹುವಾ ಈ ಆರೋಪ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಕೇಂದ್ರ ಸಂಸದೀಯ ಸಚಿವ ಕಿರಣ್‌ ರಿಜಿಜು ಹಾಗೂ ಬಿಜೆಪಿ ಸಂಸದ ನಿಶಿಕಾಂತ ದುಬೆ, ‘ಸುಪ್ರೀಂ ಕೋರ್ಟು ಲೋಯಾ ಸಾವು ಸಹಜ ಎಂದು ತೀರ್ಪು ನೀಡಿತ್ತು. ಹೀಗಾಗಿ ಅನಗತ್ಯ ವಿಷಯ ಕೆದಕಿರುವ ಮಹುವಾ ಸೂಕ್ತ ಸಂಸದೀಯ ಶಿಕ್ಷೆ ಎದುರಿಸಬೇಕಾಗುತ್ತದೆ’ ಎಂದರು ಹಾಗೂ ಸ್ಪೀಕರ್‌ ಓಂ ಬಿರ್ಲಾ ಈ ವಿಷಯ ಪರಿಶೀಲಿಸುವೆ ಎಂದರು. ಆಗ ಮಹುವಾ ರಿಜಿಜು ವಿರುದ್ಧ ಹರಿಹಾಯ್ದಾಗ ಕೋಲಾಹಲ ಉಂಟಾಗಿ ಸದನ ಮುಂದೂಡಿತು.

2014ರಲ್ಲಿ ಲೋಯಾ ಸಾವು ಸಂಭವಿಸಿತ್ತು. ಅವರ ಸಾವು ಸಹಜವಲ್ಲ. ಅವರು ಸೂಕ್ಷ್ಮ ಸಿಬಿಐ ಕೇಸುಗಳ ವಿಚಾರಣೆ ನಡೆಸುತ್ತಿದ್ದ ಕಾರಣ ಏನೋ ಸಂಚು ಇದೆ ಎಂಬ ಸಂದೇಹ ಉಂಟಾಗಿತ್ತು. ಆದರೆ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ‘ಲೋಯಾ ಸಾವು ಸಹಜ. ಸಂಚು ಇಲ್ಲ’ ಎಂದು ತೀರ್ಪು ನೀಡಿತ್ತು.

ಏಕ ದೇಶ, ಏಕ ಚುನಾವಣೆ ಮಸೂದೆ ನಾಡಿದ್ದು ಮಂಡನೆ ಸಾಧ್ಯತೆ

ನವದೆಹಲಿ: ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ನಡೆಸಲು ನಾಂದಿ ಹಾಡುವ ‘ಏಕ ದೇಶ-ಏಕ ಚುನಾವಣೆ’ ಮಸೂದೆ ಸೋಮವಾರ ಮಂಡನೆ ಆಗುವ ನಿರೀಕ್ಷೆ ಇದೆ. ಗುರುವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಎಲ್ಲ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಸೂದೆ ಅಂಗೀಕರಿಸುವ ಉದ್ದೇಶವಿರುವ ಕಾರಣ ತಕ್ಷಣ ಇದನ್ನು ಅಂಗೀಕರಿಸುವುದಿಲ್ಲ. ಬದಲಾಗಿ, ವಕ್ಫ್‌ ತಿದ್ದುಪಡಿ ಮಸೂದೆಯಂತೆಯೇ ಇದನ್ನು ಜಂಟಿ ಸದನ ಸಮಿತಿಗೆ (ಜೆಪಿಸಿ) ಕಳಿಸಿ ಅಲ್ಲಿ ಸರ್ವಸಮ್ಮತಿ ಪಡೆಯಲು ಯತ್ನಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಅಲಹಾಬಾದ್‌ ಹೈಕೋರ್ಟ್‌ ಜಡ್ಜ್‌ ವಿರುದ್ಧ ವಾಗ್ದಂಡನೆ ನೋಟಿಸ್‌

ನವದೆಹಲಿ: ಅಲ್ಪಸಂಖ್ಯಾತರ ಬಗ್ಗೆ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದ ಅಲಹಾಬಾದ್‌ ಹೈಕೋರ್ಟ್‌ ನ್ಯಾ। ಶೇಖರ್‌ ಕುಮಾರ್‌ ಯಾದವ್ ವಿರುದ್ಧ ವಿಪಕ್ಷದ ಹಲವು ಸದಸ್ಯರು ರಾಜ್ಯಸಭೆಯಲ್ಲಿ ವಾಗ್ದಂಡನೆ ನಿಲುವಳಿ ಮಂಡನೆಗೆ ನೋಟಿಸ್‌ ನೀಡಿದ್ದಾರೆ.ಕಪಿಲ್ ಸಿಬಲ್, ವಿವೇಕ್ ತಂಖಾ, ದಿಗ್ವಿಜಯ್ ಸಿಂಗ್ ಸೇರಿ ವಿಪಕ್ಷದ 55 ಸಂಸದರು ವಾಗ್ದಂಡನೆ ನೋಟಿಸ್‌ಗೆ ಸಹಿ ಹಾಕಿದ್ದು, ರಾಜ್ಯಸಭೆ ಕಾರ್ಯದರ್ಶಿಯನ್ನು ಭೇಟಿ ಮಾಡಿ ಅದನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪ್ರಯಾಗರಾಜ್‌ನಲ್ಲಿ ನಡೆದ ವಿಶ್ವಹಿಂದೂ ಪರಿಷತ್‌ ಸಭೆಯಲ್ಲಿ ನ್ಯಾ। ಯಾದವ್, ‘ಹಿಂದುಸ್ತಾನದಲ್ಲಿ ಬಹುಸಂಖ್ಯಾತರ ಇಚ್ಛೆಯಂತೆ ಕೆಲಸ ನಡೆಯುತ್ತದೆ ಎಂದು ಹೇಳಲು ಯಾವುದೇ ಹಿಂಜರಿಕೆ ಇಲ್ಲ’ ಎಂದು ಹೇಳಿಕೆ ನೀಡಿದ್ದರು ಹಾಗೂ ನಿರ್ದಿಷ್ಟ ಧರ್ಮವೊಂದರ ಆಚರಣೆಯನ್ನು ಟೀಕಿಸಿದ್ದರು.