ಪ್ರಖ್ಯಾತ ನಟ ಮೋಹನ್‌ಲಾಲ್‌ಗೆ ದಾದಾ ಸಾಹೇಬ್‌ ಫಾಲ್ಕೆ ಕಿರೀಟ

| Published : Sep 21 2025, 02:00 AM IST

ಪ್ರಖ್ಯಾತ ನಟ ಮೋಹನ್‌ಲಾಲ್‌ಗೆ ದಾದಾ ಸಾಹೇಬ್‌ ಫಾಲ್ಕೆ ಕಿರೀಟ
Share this Article
  • FB
  • TW
  • Linkdin
  • Email

ಸಾರಾಂಶ

ಇರುವರ್‌, ವಾನಪ್ರಸ್ಥಂ, ದೃಶ್ಯಂ ಸೇರಿದಂತೆ ಕಳೆದ 4 ದಶಕಗಳಿಂದ 350ಕ್ಕೂ ಹೆಚ್ಚು ಚಿತ್ರಗಳಲ್ಲಿನ ಮನಮೋಹಕ ನಟನೆಯ ಮೂಲಕ ಭಾರತೀಯಾ ಸಿನೆಮಾ ರಂಗಕ್ಕೆ ಅಪರೂಪದ ಕೊಡುಗೆ ನೀಡಿರುವ ಮಲಯಾಳಂನ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಅವರಿಗೆ 2023ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ.

- 4 ದಶಕಗಳ ಸಿನಿ ಸಾಧನೆಗೆ ಅರಸಿ ಬಂದ ಪ್ರತಿಷ್ಠಿತ ಗೌರವ

- ನಾಡಿದ್ದು ದಿಲ್ಲಿಯಲ್ಲಿ ಸಿನಿ ರಂಗದ ಮೇರು ಪ್ರಶಸ್ತಿ ಪ್ರದಾನ

- ಸಾಧನೆ-ಸಮ್ಮಾನ- ಕನ್ನಡ, ಮಲಯಾಳಂ, ತಮಿಳು ಸೇರಿ ಹಲವು ಭಾಷೆಗಳ 350 ಚಿತ್ರಗಳಲ್ಲಿ ನಟನೆ

- 2001ರಲ್ಲಿ ಪ್ರತಿಷ್ಠಿತ ಪದ್ಮಶ್ರೀ, 2019ರಲ್ಲಿ ಪದ್ಮಭೂಷಣಕ್ಕೆ ಭಾಜನರಾಗಿದ್ದ ಲಾಲ್‌

- 2 ರಾಷ್ಟ್ರೀಯ ಸಿನಿಮಾ ಪ್ರಶಸ್ತಿ, 9 ಕೇರಳ ರಾಜ್ಯ ಪ್ರಶಸ್ತಿಗಳೂ ಅವರ ಮುಡಿಗೆ

- ಇದೀಗ ಫಾಲ್ಕೆ ಪ್ರಶಸ್ತಿ ಬಂದ ಕಾರಣ ಮೋದಿ ಸೇರಿ ಅನೇಕ ಗಣ್ಯರ ಅಭಿನಂದನೆ

---

ಇದು ಎಲ್ಲರಿಗೂ ಗೌರವ

ಫಾಲ್ಕೆ ಪ್ರಶಸ್ತಿ ಸ್ವೀಕರಿಸಲು ನಿಜಕ್ಕೂ ವಿನೀತನಾಗಿದ್ದೇನೆ. ಈ ಗೌರವ ನನಗೊಬ್ಬನಿಗಲ್ಲ, ಈ ಪ್ರಯಾಣದಲ್ಲಿ ನನ್ನೊಂದಿಗೆ ನಡೆದ ಪ್ರತಿಯೊಬ್ಬರಿಗೂ ಸೇರಿದೆ. ನನ್ನ ಕುಟುಂಬ, ಪ್ರೇಕ್ಷಕರು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಹಿತೈಷಿಗಳಿಗೆ, ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ನನ್ನನ್ನು ಯಾರೆಂದು ರೂಪಿಸಿದೆ. ನಾನು ಈ ಕೃತಜ್ಞನಾಗಿದ್ದೇನೆ.

- ಮೋಹನ್‌ ಲಾಲ್‌, ಖ್ಯಾತ ಮಲಯಾಳ ನಟ

---

ಪಿಟಿಐ ನವದೆಹಲಿ

ಇರುವರ್‌, ವಾನಪ್ರಸ್ಥಂ, ದೃಶ್ಯಂ ಸೇರಿದಂತೆ ಕಳೆದ 4 ದಶಕಗಳಿಂದ 350ಕ್ಕೂ ಹೆಚ್ಚು ಚಿತ್ರಗಳಲ್ಲಿನ ಮನಮೋಹಕ ನಟನೆಯ ಮೂಲಕ ಭಾರತೀಯಾ ಸಿನೆಮಾ ರಂಗಕ್ಕೆ ಅಪರೂಪದ ಕೊಡುಗೆ ನೀಡಿರುವ ಮಲಯಾಳಂನ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಅವರಿಗೆ 2023ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ.

ಹಿರಿಯ ನಟಿನಿಗೆ ಸಿನಿಮಾ ಕ್ಷೇತ್ರದಲ್ಲಿ ಕೊಡಲಾಗುವ ದೇಶದ ಅತ್ಯುನ್ನತ ಪ್ರಶಸ್ತಿ ಪ್ರಕಟಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯಾಗಿ ರಾಜಕೀಯ ಗಣ್ಯರು, ಚಲನಚಿತ್ರ ರಂಗದ ಹಿರಿ ಕಿರಿಯ ನಟರು ಶುಭ ಕೋರಿದ್ದಾರೆ. ಸೆ.23ರಂದು ನಡೆಯಲಿರುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ, ‘ಮೋಹನ್‌ಲಾಲ್‌ ಅವರ ಸಿನಿ ಪಯಣವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತದೆ. ಅವರ ಅಪ್ರತಿಮ ಪ್ರತಿಭೆ, ಬಹುಮುಖತೆ ಮತ್ತು ನಿರಂತರ ಕಠಿಣ ಪರಿಶ್ರಮ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣ ಗುಣಮಟ್ಟವನ್ನು ಸ್ಥಾಪಿಸಿವೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ನಟ, ನಿರ್ದೇಶಕ ಮತ್ತು ನಿರ್ಮಾಪಕ ಮೋಹನ್‌ಲಾಲ್‌ರನ್ನು ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದೆ.

4 ದಶಕಗಳ ಅನನ್ಯ ಸಾಧನೆ:

ಮೋಹನ್‌ಲಾಲ್‌ ಅವರು ತಮ್ಮ 4 ದಶಕಕ್ಕೂ ಅಧಿಕ ಕಾಲದ ಸಿನಿ ಪಯಣದಲ್ಲಿ ಮಲಯಾಳಂ, ತಮಿಳು, ತೆಲುಗು, ಹಿಂದಿ ಮತ್ತು ಕನ್ನಡದಲ್ಲಿ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1980ರಲ್ಲಿ ‘ಮಂಜಿಲ್‌ ವಿರಿಂಜ ಪೂಕ್ಕಳ್‌’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಮೋಹನ್‌ಲಾಲ್‌, ನಂತರದ ದಶಕಗಳಲ್ಲಿ ‘ತನ್ಮಾತ್ರ’, ‘ಇರುವರ್‌’, ‘ವಾನಪ್ರಸ್ಥಂ’, ‘ಕಂಪನಿ’, ‘ಮುಂದಿರಿವಲ್ಲಿಕಲ್‌ ತಳಿರ್ಕುಂಬೋಲ್‌’, ‘ಪುಲಿಮುರುಗನ್‌’ ಮೊದಲಾದ ಚಿತ್ರಗಳ ಮೂಲಕ ಗಮನ ಸೆಳೆದಿದ್ದಾರೆ. 2004ರಲ್ಲಿ ಕನ್ನಡದ ಲವ್‌ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಮೋಹನ್‌ಲಾಲ್ ನಟಿಸಿದ್ದರು.

ಹಲವು ಪ್ರಶಸ್ತಿ:

ತಮ್ಮ ಸಿನಿ ಸಾಧನೆಗಾಗಿ 2001ರಲ್ಲಿ ಪದ್ಮಶ್ರೀ, 2019ರಲ್ಲಿ ಪದ್ಮಭೂಷಣ, ಉತ್ತಮ ನಟನೆಗಾಗಿ 2 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 9 ಕೇರಳ ರಾಜ್ಯ ಪ್ರಶಸ್ತಿಗಳು ಸೇರಿ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಮೋದಿ ಅಭಿನಂದನೆ:

ಮೋಹನ್‌ಲಾಲ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ‘ಶ್ರೀ ಮೋಹನ್‌ಲಾಲ್‌ ಜಿ ಶ್ರೇಷ್ಠತೆ ಮತ್ತು ಬಹುಮುಖತೆಯನ್ನು ಪ್ರತಿನಿಧಿಸುತ್ತಾರೆ. ದಶಕಗಳ ಕಾಲ ತಮ್ಮ ಶ್ರೀಮಂತ ಕಾರ್ಯವೈಖರಿಯೊಂದಿಗೆ ಮಲಯಾಳಂ ಸಿನಿಮಾ ಮತ್ತು ರಂಗಭೂಮಿಯ ಉಜ್ವಲ ಜ್ಯೋತಿಯಾಗಿ ನಿಂತಿದ್ದಾರೆ ಮತ್ತು ಕೇರಳದ ಸಂಸ್ಕೃತಿಯ ಬಗ್ಗೆ ತೀವ್ರ ಒಲವು ಹೊಂದಿದ್ದಾರೆ. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿ’ ಎಂದು ಎಕ್ಸ್‌ನಲ್ಲಿ ಮೋದಿ ಶುಭ ಹಾರೈಸಿದ್ದಾರೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸೇರಿ ಹಲವರು ಅಭಿನಂದನೆ ತಿಳಿಸಿದ್ದಾರೆ.