ಮುಡಾ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್, ಲೋಕಾಯುಕ್ತರಿಂದ 4 ತನಿಖಾ ತಂಡ ರಚನೆ

| Published : Sep 29 2024, 01:38 AM IST / Updated: Sep 29 2024, 05:03 AM IST

ಸಾರಾಂಶ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಲೋಕಾಯುಕ್ತರು ನಾಲ್ಕು ತನಿಖಾ ತಂಡಗಳನ್ನು ರಚಿಸಿದ್ದಾರೆ.

 ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಸೂಚನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ತನಿಖೆಗೆ ಶನಿವಾರ ನಾಲ್ಕು ತಂಡಗಳನ್ನು ರಚಿಸಿದ್ದಾರೆ.

ಮುಡಾ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಮೈಸೂರು ಠಾಣೆಯ ಕೇಸ್ ನಂಬರ್ 11/2024 ಅಡಿ ದಾಖಲಾಗಿರುವ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂಮಿ ಮಾರಾಟ ಮಾಡಿದ ಜೆ. ದೇವರಾಜು ಆರೋಪಿ ಆಗಿದ್ದಾರೆ.

ಎಫ್‌ಐಆರ್‌ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ಲೋಕಾಯುಕ್ತ ಎಸ್ಪಿ ಉದೇಶ್, ಡಿವೈಎಸ್ಪಿ ಮಾಲತೇಶ್, ಚಾಮರಾಜನಗರ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಹಾಗೂ ಇನ್ಸ್‌ಪೆಕ್ಟರ್‌ ಅವರನ್ನೊಳಗೊಂಡ 4 ತಂಡ ರಚಿಸಿದ್ದು, ಈ ತಂಡ ನ್ಯಾಯಾಲಯ ನೀಡಿರುವ ದಾಖಲೆಗಳು, ದೂರಿನಲ್ಲಿ ಅಡಕವಾಗಿರುವ ದಾಖಲೆಗಳನ್ನು ಪರಿಶೀಲಿಸುತ್ತಿದೆ. ದಾಖಲೆಗಳ ಪರಿಶೀಲನೆ ಬಳಿಕ ಅಧಿಕಾರಿಗಳ ತಂಡ ತನಿಖೆ ಆರಂಭಿಸುವ ಸಾಧ್ಯತೆ ಇದೆ.

ಸದ್ಯದಲ್ಲೇ ನೋಟಿಸ್‌?:

ಸಾಮಾನ್ಯವಾಗಿ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ಆದ ನಂತರ ಆರೋಪಿಗಳಿಗೆ ತನಿಖಾಧಿಕಾರಿ ನೋಟಿಸ್ ಕೊಡಬೇಕು. ಸಿಆರ್‌ಪಿಸಿ 41 ಅಡಿ ನೋಟಿಸ್ ಜಾರಿ ಮಾಡಬೇಕು. ಮುಡಾದಲ್ಲಿ ಮೂಲ ದಾಖಲೆಗಳನ್ನು ವಶಪಡಿಸಿಕೊಳ್ಳುವುದು, ಆರೋಪಿಗಳಿಂದ ದಾಖಲೆಗಳನ್ನು ವಶಪಡಿಸಿಕೊಳ್ಳುವುದು, ಆಯಾ ಸಂದರ್ಭದಲ್ಲಿದ್ದ ಮುಡಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವುದು, ಹೆಚ್ಚುವರಿ ಆರೋಪಿಗಳು ಕಂಡು ಬಂದರೆ ಅವರನ್ನು ಕೇಸಿಗೆ ಸೇರಿಸುವ ಕೆಲಸ ಲೋಕಾಯುಕ್ತರ ತನಿಖೆಯ ಭಾಗವಾಗಿರಲಿದೆ. ನಂತರ ದಾಖಲೆಗಳು ಫೋರ್ಜರಿಯಾಗಿದ್ದರೆ ಅಂಥ ದಾಖಲೆಗಳ ಕುರಿತು ಎಫ್ಎಸ್ಎಲ್ ವರದಿ ಕೋರಲಾಗುತ್ತದೆ.==

ಸಿದ್ದರಾಮಯ್ಯ ಮುಂದಿನ ಆಯ್ಕೆಗಳು

- ಸಿಆರ್‌ಪಿಸಿ 438 ಅಡಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಬಹುದು.

- ಬೇಲ್ ಜೊತೆಗೆ ಸಿಆರ್‌ಪಿಸಿ 482ರ ಅಡಿ ನೇರವಾಗಿ ಹೈಕೋರ್ಟ್ ಗೆ ಪ್ರಕರಣ ರದ್ದತಿಗೆ ಕೋರಿ ಅರ್ಜಿ ಹಾಗೂ ತನಿಖೆಗೆ ತಾತ್ಕಾಲಿಕ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಬಹುದು.

- ಎಫ್ಐಆರ್ ಅನ್ನು ಪ್ರಶ್ನಿಸಬಹುದು, ನ್ಯಾಯಾಲಯದ ಆದೇಶವನ್ನೇ ಹೈಕೋರ್ಟಲ್ಲಿ ಪ್ರಶ್ನಿಸಬಹುದು. ಹೈಕೋರ್ಟ್ ಮಾಡಿರುವ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೂ ಹೋಗಬಹುದು. 

ತನಿಖಾಧಿಕಾರಿಗಳಿಗಿರುವ ಅಧಿಕಾರ ಏನು? ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ದಾಖಲೆಗಳ ಪರಿಶೀಲನೆ ಮಾಡಬಹುದು, ದಸ್ತಗಿರಿ ಮಾಡದೆ ತನಿಖೆ ನಡೆಸಬಹುದು, ಸಾಕ್ಷ್ಯನಾಶ ಕಂಡು ಬಂದರೆ ಅಂತಹ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಬಹುದು. ತನಿಖೆ ಸಂದರ್ಭದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಬಹುದು, ಬಂಧಿಸದೆಯೂ ಇರಬಹುದು.