ಬಾಹ್ಯಾಕಾಶ ನಿಲ್ದಾಣಕ್ಕೆ ಮೇ 29ಕ್ಕೆ ಭಾರತೀಯ!

| Published : Apr 30 2025, 02:02 AM IST

ಸಾರಾಂಶ

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮುಂಬರುವ ಮೇ 29ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್‌ಎಸ್‌) ಪ್ರಯಾಣ ಕೈಗೊಳ್ಳಲಿದ್ದಾರೆ. ಇದರೊಂದಿಗೆ ಭಾರತದ ಬಾಹ್ಯಾಕಾಶ ಯಾನದ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣಕ್ಕೆ ಕ್ಷಣಗಣನೆ ಆರಂಭವಾಗಿದೆ.

- ಶುಭಾಂಶು ಉಡಾವಣೆ ದಿನಾಂಕ ಘೋಷಣೆ- ಭಾರತದ ಮೊದಲ ವ್ಯಕ್ತಿ ಲಗ್ಗೆಗೆ ದಿನಗಣನೆ- ಅಂತರಿಕ್ಷದಲ್ಲಿ ರಾಜ್ಯದ ಪರ 2 ಪ್ರಯೋಗ

---

ಏನಿದರ ಮಹತ್ವ?- 40 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಪ್ರಜೆಯಿಂದ ಬಾಹ್ಯಾಕಾಶ ಯಾನ- ಆ್ಯಕ್ಸಿಯಮ್‌ ಸ್ಪೇಸ್‌ ಸಂಸ್ಥೆಯ ನೌಕೆಯಲ್ಲಿ ಮೇ 29ಕ್ಕೆ ಅಂತರಿಕ್ಷಕ್ಕೆ ಹೊರಡಲಿರುವ ಶುಭಾಂಶು - 14 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿ ವಿವಿಧ ಪ್ರಯೋಗ ಮಾಡಲಿರುವ ಶುಕ್ಲಾ- ಧಾರವಾಡ ಕೃಷಿ ವಿವಿ ಹಾಗೂ ಬೆಂಗಳೂರಿನ ಐಐಎಸ್ಸಿಯ ರೂಪಿಸಿದ 2 ಪ್ರಯೋಗ ಅಲ್ಲಿ ಟೆಸ್ಟ್‌- ರಾಕೇಶ್‌ ಶರ್ಮಾ ನಂತರ ಬಾಹ್ಯಾಕಾಶಕ್ಕೆ ತೆರಳುತ್ತಿರುವ 2ನೇ ಭಾರತೀಯ ಶುಭಾಂಶು- ರಷ್ಯಾದ ಸೂಯೆಜ್‌ ನೌಕೆಯಲ್ಲಿ ಅಂತರಿಕ್ಷಕ್ಕೆ ತೆರಳಿ ಇಂದಿರಾಗಾಂಧಿ ಜಗೆ ಸಂವಹನ ನಡೆಸಿದ್ದ ಶರ್ಮಾ

---ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮುಂಬರುವ ಮೇ 29ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್‌ಎಸ್‌) ಪ್ರಯಾಣ ಕೈಗೊಳ್ಳಲಿದ್ದಾರೆ. ಇದರೊಂದಿಗೆ ಭಾರತದ ಬಾಹ್ಯಾಕಾಶ ಯಾನದ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣಕ್ಕೆ ಕ್ಷಣಗಣನೆ ಆರಂಭವಾಗಿದೆ.

ಕಾರಣ- ಐಎಸ್‌ಎಸ್‌ಗೆ ಇದು ಭಾರತೀಯರೊಬ್ಬರ ಚೊಚ್ಚಲ ಪಯಣವಾಗಿದೆ. ಜೊತೆಗೆ 40 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯರೊಬ್ಬರು ಬಾಹ್ಯಾಕಾಶ ಪ್ರಯಾಣ ಮಾಡುತ್ತಿದ್ದಾರೆ. ಮೇ 29ರಂದು ಅಮೆರಿಕದ ಆ್ಯಕ್ಸಿಯಮ್ ಸ್ಪೇಸ್‌ ಸಂಸ್ಥೆಯ ನೌಕೆಯು ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಹಂಗೇರಿ, ಪೋಲೆಂಡ್‌ ದೇಶದ ಮೂವರನ್ನು ಹೊತ್ತು ಗಗನಕ್ಕೆ ನೆಗೆಯಲಿದೆ. ಅಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೆಡೆಗೆ ಪ್ರಯಾಣ ಬೆಳೆಸಲಿದೆ. ಈ ನಾಲ್ವರೂ ಐಎಸ್‌ಎಸ್‌ನಲ್ಲಿ 14 ದಿನಗಳ ಕಾಲ ಇದ್ದು ವಿವಿಧ ಪ್ರಯೋಗ ನಡೆಸಲಿದ್ದಾರೆ.40 ವರ್ಷಗಳ ಬಳಿಕ:

1984ರ ಏ.3ರಂದು ಭಾರತೀಯ ಗಗನಯಾತ್ರಿ ರಾಕೇಶ್‌ ಶರ್ಮಾ ಅವರು ರಷ್ಯಾದ ಸೂಯೆಜ್‌ ನೌಕೆಯಲ್ಲಿ ಬಾಹ್ಯಾಕಾಶ ಯಾನ ಕೈಗೊಂಡಿದ್ದರು. ಅಲ್ಲಿಂದಲೇ ಅವರು ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ಅದು ಭಾರತೀಯೊಬ್ಬರ ಮೊದಲ ಗಗನಯಾನವಾಗಿತ್ತು. ಆದರೆ ಅವರು ಆಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿರಲಿಲ್ಲ. ಈ ಘಟನೆಯ 40 ವರ್ಷಗಳ ಬಳಿಕ ಇದೀಗ ಮತ್ತೊಬ್ಬ ಭಾರತೀಯ ಶುಕ್ಲಾ ಬಾಹ್ಯಾಕಾಶ ಯಾನ ಮಾಡುತ್ತಿದ್ದಾರೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಜೊತೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಾಡಿಕೊಂಡ ಒಪ್ಪಂದ ಅನ್ವಯ, ಶುಕ್ಲಾ ಅವರನ್ನು ಐಎಸ್‌ಎಸ್‌ಗೆ ಕಳುಹಿಸಿಕೊಡಲಾಗುತ್ತಿದೆ.

ಧಾರವಾಡ, ಐಐಎಸ್‌ಸಿ:

ಐಎಸ್‌ಎಸ್‌ ವಾಸದ ವೇಳೆ ಶುಭಾಂಶು ಶುಕ್ಲಾ ಅವರು ಬೆಂಗಳೂರು, ಧಾರವಾಡ, ತಿರುವನಂತಪುರಂ ಮತ್ತು ನವದೆಹಲಿಯ ವಿಜ್ಞಾನಿಗಳ ರೂಪಿಸಿದ 7 ಪ್ರಯೋಗಗಳನ್ನು ನಡೆಸಲಿದ್ದಾರೆ. ಇದರಲ್ಲಿ ಧಾರವಾಡದ ಕೃಷಿ ವಿವಿಯು ಬಾಹ್ಯಾಕಾಶದಲ್ಲಿ ಸಲಾಡ್ ಬೀಜಗಳ ಮೊಳಕೆಯೊಡೆಯುವಿಕೆ ಪ್ರಯೋಗ, ಬೆಂಗಳೂರಿನ ಐಐಎಸ್‌ಸಿ ಸ್ಟೆಮ್ ಸೆಲ್ ಸೈನ್ಸ್ ಅಂಡ್ ರಿಜೆನೆರೇಟಿವ್ ಮೆಡಿಸಿನ್ (ಇನ್‌ಸ್ಟೆಮ್) ಪ್ರಯೋಗ ಕೂಡ ಸೇರಿದೆ.