ದೇಶದ ಕೃಷಿ ಚಟುವಟಿಕೆಯ ಆಧಾರವಾಗಿರುವ ನೈಋತ್ಯ ಮುಂಗಾರು ಮಾರುತಗಳು ಭಾನುವಾರ ನಿಕೋಬಾರ್‌ ದ್ವೀಪಸಮೂಹವನ್ನು ಪ್ರವೇಶಿಸಿವೆ.

 ನವದೆಹಲಿ : ದೇಶದ ಕೃಷಿ ಚಟುವಟಿಕೆಯ ಆಧಾರವಾಗಿರುವ ನೈಋತ್ಯ ಮುಂಗಾರು ಮಾರುತಗಳು ಭಾನುವಾರ ನಿಕೋಬಾರ್‌ ದ್ವೀಪಸಮೂಹವನ್ನು ಪ್ರವೇಶಿಸಿವೆ. ಅದರಿಂದಾಗಿ ದೇಶದ ದಕ್ಷಿಣದ ತುತ್ತತುದಿಯ ಪ್ರದೇಶವಾಗಿರುವ ನಿಕೋಬಾರ್‌ ದ್ವೀಪಗಳ ಮೇಲೆ ಉತ್ತಮ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

‘ನೈಋತ್ಯ ಮುಂಗಾರು ಮಾಲ್ಡೀವ್ಸ್‌ ಹಾಗೂ ಕಮೋರಿನ್‌ ದ್ವೀಪಗಳನ್ನು ದಾಟಿ ಬಂಗಾಳ ಕೊಲ್ಲಿಯ ನಿಕೋಬಾರ್‌ ದ್ವೀಪಗಳು ಹಾಗೂ ದಕ್ಷಿಣ ಅಂಡಮಾನ್‌ ಸಮುದ್ರದ ಮೇಲೆ ಭಾನುವಾರ ಮಳೆ ಸುರಿಸಿವೆ. ಕೇರಳಕ್ಕೆ ಮೇ 31ರಂದು ಮಾರುತಗಳು ಪ್ರವೇಶಿಸುವ ಸಾಧ್ಯತೆಯಿದೆ’ ಎಂದು ಐಎಂಡಿ ಹೇಳಿದೆ.

ಕಳೆದ ವರ್ಷವೂ ಮೇ 19ರಂದೇ ಮುಂಗಾರು ಮಾರುತಗಳು ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪ ಪ್ರವೇಶಿಸಿದ್ದವು. ಆದರೆ ಆ ವೇಳೆ ಮಾವಾರ್‌ ಚಂಡಮಾರುತ ಕಾಣಿಸಿಕೊಂಡ ಪರಿಣಾಮ ಭಾರತದ ಕರಾವಳಿ ಪ್ರವೇಶ ಮಾಡುವುದು ತಡವಾಗಿತ್ತು. ಜೂ.8ರಂದು ಮುಂಗಾರು ಮಾರುತ ಭಾರತಕ್ಕೆ ಪ್ರವೇಶಿಸಿತ್ತು.

 2022ರಲ್ಲಿ ಮೇ 29ರಂದು ಹಾಗೂ 2021ರಲ್ಲಿ ಜೂನ್‌ 3ರಂದು ಪ್ರವೇಶಿಸಿತ್ತು. ಜೂ.1ನ್ನು ಮುಂಗಾರು ಮಾರುತ ಕೇರಳವನ್ನು ಪ್ರವೇಶಿಸುವ ವಾಡಿಕೆಯ ದಿನಾಂಕವೆಂದು ಪರಿಗಣಿಸಲಾಗುತ್ತದೆ. ಈ ವರ್ಷವೂ ಹೆಚ್ಚುಕಮ್ಮಿ ಅದೇ ಸಮಯಕ್ಕೆ ಕೇರಳದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ. ಇದು ಕಳೆದ ವರ್ಷ ಬರದಿಂದ ಬಳಲಿದ್ದ ದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಅಲ್ಲದೆ, ದೇಶದ ಅನೇಕ ಭಾಗಗಳು ಉಷ್ಣ ಮಾರುತಗಳ ಪ್ರಕೋಪದಿಂದ ಬಳಲುತ್ತಿದ್ದು, ಅಲ್ಲೂ ವಾತಾವರಣ ತಂಪಾಗುವ ಆಶಾಭಾನೆ ಮೂಡಿದೆ.

ದೇಶದ ಶೇ.52ರಷ್ಟು ಕೃಷಿ ಚಟುವಟಿಕೆಗಳು ನೇರವಾಗಿ ಮುಂಗಾರು ಮಳೆಯನ್ನೇ ಅವಲಂಬಿಸಿವೆ. ಅಲ್ಲದೆ ಈ ಮಾರುತಗಳು ಸುರಿಸುವ ಮಳೆಯಿಂದಾಗಿಯೇ ದೇಶದ ಅಣೆಕಟ್ಟೆಗಳು ತುಂಬಿ, ಜಲವಿದ್ಯುತ್‌ ಉತ್ಪಾದನೆಗೂ ಅನುಕೂಲವಾಗುತ್ತದೆ.

ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಕಳೆದ ತಿಂಗಳು ಐಎಂಡಿ ಹೇಳಿತ್ತು. ಪೆಸಿಫಿಕ್‌ ಮಹಾಸಾಗರದ ನೀರು ತಂಪಾಗುವ ಲಾ ನಿನಾ ವಿದ್ಯಮಾನ ಈ ವರ್ಷ ಸಂಭವಿಸಲಿದ್ದು, ಅದರಿಂದಾಗಿ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ಭಾರತದಲ್ಲಿ ಒಳ್ಳೆಯ ಮಳೆಯಾಗುವ ನಿರೀಕ್ಷೆಯಿದೆ.