ಸಾರಾಂಶ
ಅಲಾಸ್ಕಾ (ಅಮೆರಿಕ) : ಉಕ್ರೇನ್-ರಷ್ಯಾ ಯುದ್ಧಕ್ಕೆ ಅಂತ್ಯ ಹಾಡಲು ಇದೇ ಮೊದಲ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಶುಕ್ರವಾರ ತಡರಾತ್ರಿ ಅಲಸ್ಕಾದಲ್ಲಿ ನಡೆದ ಮಾತುಕತೆ ತಕ್ಷಣಕ್ಕೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ವಿಫಲವಾಗಿದೆ. ಆದಾಗ್ಯೂ ಯುದ್ಧ ತಣಿಸುವಲ್ಲಿ ಇದು ಮೊದಲ ಹೆಜ್ಜೆಯಾಗಿದ್ದು, ಧನಾತ್ಮಕ ಸಂದೇಶದೊಂದಿಗೆ ಕೊನೆಗೊಂಡಿದೆ.
ವಿವಾದ ಇತ್ಯರ್ಥಕ್ಕೆ ಸಂಬಂಧಿಸಿ ಉಭಯ ನಾಯಕರು ತಿಳಿವಳಿಕೆಯೊಂದಕ್ಕೆ ಬಂದಿದ್ದು, ಸದ್ಯದಲ್ಲೇ ಈ ವಿಚಾರವಾಗಿ ಮತ್ತೊಮ್ಮೆ ಮಾತುಕತೆಗೆ ಕೂರುವ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ರಷ್ಯಾ ರಾಜಧಾನಿ ಮಾಸ್ಕೋದಲ್ಲೇ ಮುಂದಿನ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಮಾಸ್ಕೋಗೆ ಬರುವಂತೆ ಟ್ರಂಪ್‌ಗೆ ಪುಟಿನ್ ಆಹ್ವಾನ ನೀಡಿದ್ದಾರೆ.
ಇದರ ಬೆನ್ನಲ್ಲೇ ಸೋಮವಾರ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅಮೆರಿಕಕ್ಕೆ ತೆರಳಿ ಟ್ರಂಪ್ ಜತೆ ಮಾತುಕತೆ ನಡೆಸಲಿದ್ದಾರೆ. ಇದರ ನಡುವೆ, ಟ್ರಂಪ್ ಅವರು, ‘ನನ್ನ ಹಾಗೂ ಪುಟಿನ್ ಸಭೆಗೆ 10ಕ್ಕೆ 10 ಅಂಕ ನೀಡುವೆ. ಜೆಲೆಸ್ಕಿ ಕೂಡ ಕದನವಿರಾಮಕ್ಕೆ ಒಲವು ತೋರಬೇಕು. ಕದನವಿರಾಮಕ್ಕಿಂತ ಸಂಪೂರ್ಣ ಶಾಂತಿ ಒಪ್ಪಂದ ಆಗಬೇಕು ಎಂದು ನನ್ನ ಅಭಿಪ್ರಾಯ’ ಎಂದು ಹೇಳಿದ್ದಾರೆ.
ಒಪ್ಪಂದಕ್ಕೆ ಬಾರದೆ ಸಭೆ ಅಂತ್ಯ:
ಉಕ್ರೇನ್ ಯುದ್ಧದ ವಿಚಾರವಾಗಿ ಅಮೆರಿಕದ ಅಲಸ್ಕಾದಲ್ಲಿ ನಡೆದ ಈ ಮಾತುಕತೆ ಇಡೀ ವಿಶ್ವದ ಗಮನಸೆಳೆದಿತ್ತು. ಆರಂಭದಲ್ಲಿ ಸುಮಾರು 6-7 ಗಂಟೆಗಳಷ್ಟು ಸುದೀರ್ಘ ಮಾತುಕತೆ ನಿರೀಕ್ಷೆ ಇತ್ತಾದರೂ ಎರಡೂವರೆ ಗಂಟೆಯಲ್ಲೇ ಸಭೆ ಮುಕ್ತಾಯ ಕಂಡಿತು. ಸಭೆ ಬಳಿಕ ಉಭಯ ನಾಯಕರ ಪತ್ರಿಕಾಗೋಷ್ಠಿ ಸುದ್ದಿಗಾರರ ಜತೆಗೆ ಯಾವುದೇ ಪ್ರಶ್ನೋತ್ತರಕ್ಕೆ ಅವಕಾಶವಿಲ್ಲದೆ ಕೇವಲ 12 ನಿಮಿಷಗಳಲ್ಲೇ ಕೊನೆಗೊಂಡಿತು.
ಸುದ್ದಿಗೋಷ್ಠಿಯಲ್ಲಿ ಪುಟಿನ್ ಮಾತನಾಡಿ, ‘ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ನಾನು-ಟ್ರಂಪ್ ತಿಳಿವಳಿಕೆಯೊಂದಕ್ಕೆ ಬಂದಿದ್ದೇವೆ. ಆದರೆ ಯುರೋಪ್ ಈ ಮಾತುಕತೆಯ ಹಳಿ ತಪ್ಪಿಸುವ ಸಾಧ್ಯತೆ ಇದೆ. ನಮಗೆ ನಮ್ಮ ರಾಷ್ಟ್ರದ ಭದ್ರತೆಯೇ ಮುಖ್ಯ. ಟ್ರಂಪ್ ಇದ್ದರೆ 2022ರಲ್ಲಿ ಯುದ್ಧವೇ ನಡೆಯುತ್ತಿರಲಿಲ್ಲ. ಟ್ರಂಪ್ ಮಾಸ್ಕೋಗೆ ಬಂದು ಮುಂದಿನ ಸುತ್ತಿನ ಮಾತುಕತೆ ನಡೆಸಬೇಕು ಎಂಬುದು ನನ್ನ ಅಪೇಕ್ಷೆ’ ಎಂದರು.
ಟ್ರಂಪ್ ಮಾತನಾಡಿ, ‘ಇದು ಫಲಪ್ರದ ಮಾತುಕತೆ ಆಗಿತ್ತು. ಹಲವು ಅಂಶಗಳ ಬಗ್ಗೆ ಒಮ್ಮತಕ್ಕೆ ಬರಲಾಯಿತು. ಆದರೆ ಕೆಲವು ಅಂಶಗಳ ಬಗ್ಗೆ ಒಮ್ಮತಕ್ಕೆ ಬರಲು ಆಗದೇ ಉಳಿದುಕೊಂಡವು. ಅಂತಿಮ ಒಪ್ಪಂದವಾಗುವವರೆಗೆ ಯಾವುದೇ ಒಪ್ಪಂದವಿಲ್ಲ. ಆದರೂ ನಾವು ಈ ಕುರಿತು ಒಪ್ಪಂದವೊಂದಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ನಾವು ಶೀಘ್ರದಲ್ಲೇ ಮತ್ತೆ ಮಾತನಾಡಲಿದ್ದೇವೆ. ಮಾಸ್ಕೋ ಭೇಟಿ ಟೀಕೆಗೆ ಗುರಿಯಾಗುವ ಸಾಧ್ಯತೆಯಿದ್ದರೂ ಆ ಭೇಟಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ’ ಎಂದು ಟ್ರಂಪ್ ಹೇಳಿದರು.
ಈ ನಡುವೆ, ಬಳಿಕ ಮಾಧ್ಯಮವೊಂದರ ಜತೆ ಮಾತನಾಡಿದ ಟ್ರಂಪ್, ‘ಈ ಮಹತ್ವದ ಮಾತುಕತೆಗೆ 10ರಲ್ಲಿ 10 ಅಂಕ ನೀಡುವೆ’ ಎಂದರು.
ಇನ್ನು ಟ್ರಂಪ್ ಅವರ ಆತ್ಮೀಯ ನಡೆಗಾಗಿ ಇದೇ ವೇಳೆ ಧನ್ಯವಾದ ಸಲ್ಲಿಸಿದ ಪುಟಿನ್, ‘ಎರಡೂ ದೇಶಗಳು ಹಳೆಯದನ್ನೆಲ್ಲ ಮರೆತು ಸಹಭಾಗಿತ್ವದ ಕಡೆಗೆ ಹೆಜ್ಜೆಹಾಕಬೇಕಿದೆ. ಟ್ರಂಪ್ ಅವರಿಗೆ ಅವರ ದೇಶದ ಸಮೃದ್ಧಿಯ ಕುರಿತು ನೈಜ ಕಾಳಜಿಯೂ ಇದೆ ಎಂದು ಹೊಗಳಿದ್ದಾರೆ. ಅಲಸ್ಕಾ ಮಾತುಕತೆಯು ಉಕ್ರೇನ್ ಸಮಸ್ಯೆ ಪರಿಹರಿಸಲು ವೇದಿಕೆಯಾಗುವುದಷ್ಟೇ ಅಲ್ಲದೆ, ರಷ್ಯಾ-ಅಮೆರಿಕದ ನಡುವಿನ ವ್ಯಾವಹಾರಿಕ ಸಂಬಂಧವನ್ನು ಪುನರ್‌ಸ್ಥಾಪಿಸಲೂ ನೆರವು ನೀಡಲಿದೆ’ ಎಂದರು.
ರಷ್ಯಾ ಮತ್ತು ಉಕ್ರೇನ್ 2022ರ ಫೆಬ್ರವರಿಯಿಂದ ಸೇನಾ ಸಂಘರ್ಷಕ್ಕಿಳಿದಿದ್ದು, ಇದು ವಿಶ್ವದ ಅತಿ ಸುದೀರ್ಘ ಯುದ್ಧಗಳಲ್ಲೊಂದು ಎಂದು ಹೇಳಲಾಗಿದೆ.
ನಾಳೆ ಟ್ರಂಪ್-ಜೆಲೆನ್ಸ್ಕಿ ಭೇಟಿ
ಕೀವ್/ವಾಷಿಂಗ್ಟನ್ : 3 ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕುವ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗಿನ ಮಾತುಕತೆ ಬೆನ್ನಲ್ಲೇ, ಇದೀಗ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿಜತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಭೆ ನಡೆಸಲಿದ್ದಾರೆ.ಈಗಾಗಲೇ ಜೆಲೆನ್ಸ್ಕಿ ಅವರನ್ನು ಸೋಮವಾರ ವಾಷಿಂಗ್ಟನ್‌ಗೆ ಆಹ್ವಾನಿಸಲಾಗಿದ್ದು, ಈ ವೇಳೆ ಉಭಯ ನಾಯಕರು ಮುಂದಿನ ನಡೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ.
ಅಲಾಸ್ಕಾ ಮಾತುಕತೆ ಬಳಿಕ ಫಾಕ್ಸ್ ನ್ಯೂಸ್ ಜತೆ ಮಾತನಾಡಿದ ಟ್ರಂಪ್, ‘ಯುರೋಪ್ ಒಕ್ಕೂಟದ ಜತೆಗೆ ಸೇರಿ ಕದನ ವಿರಾಮ ಒಪ್ಪಂದದ ಕುರಿತು ನಿರ್ಧಾರಕ್ಕೆ ಬರುವುದು ಇನ್ನು ಮುಂದೆ ಜೆಲೆನ್ಸ್ಕಿ ಅವರ ಕೈಯಲ್ಲಿದೆ. ಆದಷ್ಟು ಶೀಘ್ರ ಈ ಕುರಿತು ಒಪ್ಪಂದ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.ಈ ನಡುವೆ, ತಮ್ಮ ಟ್ರುತ್ ಸೋಷಿಯಲ್ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಬರೆದ ಟ್ರಂಪ್, ‘ಕದನವಿರಾಮಕ್ಕಿಂತ ಶಾಂತಿ ಒಪ್ಪಂದ ಉತ್ತಮ ಪರಿಹಾರ’ ಎಂದರು.
ಶಾಂತಿಗೆ ಜೆಲೆನ್ಸ್ಕಿ ಒಲವು :ಟ್ರಂಪ್ ಅವರ ವಾಷಿಂಗ್ಟನ್ ಭೇಟಿಯ ಆಹ್ವಾನ ಒಪ್ಪಿರುವ ಜೆಲೆನ್ಸ್ಕಿ, ‘ಶಾಂತಿ ಸ್ಥಾಪನೆಯತ್ತ ಕೆಲಸ ಮಾಡಲು ಸಿದ್ಧನಿದ್ದೇನೆ. ವಿಶ್ವಾಸಾರ್ಹ ಭದ್ರತೆಯ ಗ್ಯಾರಂಟಿಯ ದೃಷ್ಟಿಯಿಂದ ಕದನ ವಿರಾಮಕ್ಕೆ ಸಂಬಂಧಿಸಿದ ಮಾತುಕತೆಯಲ್ಲಿ ಯುರೋಪ್ ನಾಯಕರನ್ನೂ ಸೇರಿಸಿಕೊಳ್ಳುವ ಅಗತ್ಯವಿದೆ. ಉಕ್ರೇನ್ ಭದ್ರತೆ ವಿಚಾರವಾಗಿ ಅಮೆರಿಕದ ಕಡೆಯಿಂದ ಧನಾತ್ಮಕ ಸಂದೇಶಗಳು ಸಿಕ್ಕಿವೆ’ ಎಂದಿದ್ದಾರೆ.
ಯುದ್ಧಾಪರಾಧಿಗಳ ಹಸ್ತಾಂತರ ಚರ್ಚೆ:
ಟ್ರಂಪ್ ಮತ್ತು ಪುಟಿನ್ ನಡುವಿನ ಅಲಸ್ಕಾ ಮಾತುಕತೆಯ ಬೆನ್ನಲ್ಲೇ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧಾಪರಾಧಿಗಳ ಪರಸ್ಪರ ಹಸ್ತಾಂತರ ನಡೆಯುವ ನಿರೀಕ್ಷೆ ಇದೆ. ಮಾತುಕತೆ ವೇಳೆ ಪುಟಿನ್ ಅವರು ಸಾವಿರಾರು ಮಂದಿ ಯುದ್ಧಾಪರಾಧಿಗಳ ವಿವರ ನೀಡಿದ್ದಾರೆ. ಸದ್ಯದಲ್ಲೇ ಅವರ ಬಿಡುಗಡೆ ನಿರೀಕ್ಷೆ ಇದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಪುಟಿನ್ ಬಂದಾಗ ಅಮೆರಿಕದ ಬಿ-2 ಬಾಂಬರ್ ಹಾರಾಟ!
ಅಲಾಸ್ಕಾ: ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಮಾತುಕತೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಗಮಿಸಿದಾಗ ಅಮೆರಿಕದ ಬಿ-2 ಬಾಂಬರ್ ಜೆಟ್ ಮತ್ತು ಯುದ್ಧವಿಮಾನಗಳು ಹಾರಾಟ ನಡೆಸಿವೆ. ಇದನ್ನು ಕಂಡು ಕ್ಷಣಕಾಲ ಚಕಿತರಾದ ಪುಟಿನ್ ಪುಟಿನ್ ತಲೆಯೆತ್ತಿ ಈ ದೃಶ್ಯ ದಿಟ್ಟಿಸಿದ್ದಾರೆ.ಅಲಾಸ್ಕಾದ ಆ್ಯಂಕರೇಜ್‌ನಲ್ಲಿರುವ ಎಲ್ಮೆಂಡಾರ್ಫ್-ರಿಚರ್ಡ್ಸನ್ ಸೇನಾ ನೆಲೆಗೆ ಬಂದ ಪುಟಿನ್‌ರನ್ನು ಟ್ರಂಪ್ ಸ್ವಾಗತಿಸಿದರು. ಬಳಿಕ ಉಭಯ ನಾಯಕರು ರೆಡ್ ಕಾರ್ಪೆಟ್ ಮೇಲೆ ನಡೆದು ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಮೆರಿಕ ರಷ್ಯಾಕ್ಕೆ ತನ್ನ ಸೇನಾ ಶಕ್ತಿಯನ್ನು ಪ್ರದರ್ಶನ ಮಾಡಲು ಈ ರೀತಿ ಮಾಡಿದೆಯೇ ಎಂಬ ಚರ್ಚೆ ಎದ್ದಿದೆ.
ಇತ್ತೀಚೆಗೆ ಇರಾನ್‌ನ ಅಣ್ವಸ್ತ್ರ ನೆಲೆ ಮೇಲಿನ ದಾಳಿಗೆ ಅಮೆರಿಕ ಬಿ-2 ಬಾಂಬರ್ ಬಳಸಿತ್ತು.