ಅಣುದುರಂತಕ್ಕೆ ನ್ಯೂಕ್ಲಿಯರ್‌ ರಿಯಾಕ್ಟರ್‌ ಪೂರೈಕೆದಾರ ಕಂಪನಿಗಳ ಹೊಣೆ ಮಾಡದ ಕಾನೂನು ಶೀಘ್ರ ಜಾರಿ?

| N/A | Published : Apr 19 2025, 12:35 AM IST / Updated: Apr 19 2025, 06:20 AM IST

ಸಾರಾಂಶ

ಅಣು ದುರಂತದ ವೇಳೆ ನ್ಯೂಕ್ಲಿಯರ್‌ ರಿಯಾಕ್ಟರ್‌ ಪೂರೈಕೆದಾರರ ಮೇಲೆ ವಿಧಿಸುವ ದಂಡಕ್ಕೆ ಮಿತಿಹೇರುವ ಸಂಬಂಧ ಭಾರತವು ತನ್ನ ಅಣು ಹೊಣೆಗಾರಿಕೆ ಕಾನೂನುಗಳ ತಿದ್ದುಪಡಿಗೆ ಮುಂದಾಗಿದೆ. 

ನವದೆಹಲಿ: ಅಣು ದುರಂತದ ವೇಳೆ ನ್ಯೂಕ್ಲಿಯರ್‌ ರಿಯಾಕ್ಟರ್‌ ಪೂರೈಕೆದಾರರ ಮೇಲೆ ವಿಧಿಸುವ ದಂಡಕ್ಕೆ ಮಿತಿಹೇರುವ ಸಂಬಂಧ ಭಾರತವು ತನ್ನ ಅಣು ಹೊಣೆಗಾರಿಕೆ ಕಾನೂನುಗಳ ತಿದ್ದುಪಡಿಗೆ ಮುಂದಾಗಿದೆ. ಈ ಮೂಲಕ ಅಣು ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿರುವ ವಿದೇಶಿ ಹೂಡಿಕೆಗಳು ಅದರಲ್ಲೂ ಮುಖ್ಯವಾಗಿ ಅಮೆರಿಕದ ಕಂಪನಿಗಳನ್ನು ಆಕರ್ಷಿಸಲು ದೇಶ ಮುಂದಾಗಿದೆ ಎಂದು ಸರ್ಕಾರದ ಮೂರು ಮೂಲಗಳು ತಿಳಿಸಿವೆ.

ಈ ಸಂಬಂಧ ಈಗಾಗಲೇ ಅಣುಶಕ್ತಿ ಇಲಾಖೆಯು ತಿದ್ದುಪಡಿಗೆ ಸಂಬಂಧಿಸಿದ ಕರಡು ಸಿದ್ಧಪಡಿಸಿದ್ದು, ಇದರಲ್ಲಿ 2010ರ ಅಣುಹಾನಿ ಕಾಯ್ದೆಗೆ ಸಂಬಂಧಿಸಿದ ನಾಗರಿಕ ಹೊಣೆಗಾರಿಕೆಯ ಷರತ್ತನ್ನು ತೆಗೆದುಹಾಕಲಿದೆ. ಅಣುದುರಂತ ಸಂಭವಿಸಿದಾಗ ಈ ಷರತ್ತು ಅಣು ರಿಯಾಕ್ಚರ್‌ ಪೂರೈಕೆದಾರರಿಗೆ ಅನಿಯಮಿತ ಹೊಣೆಗಾರಿಕೆ ಹೇರಲು ಅನುವು ಮಾಡಿಕೊಡುತ್ತದೆ. ಈ ಕಾನೂನನ್ನು 1984ರ ಭೋಪಾಲ್‌ ಗ್ಯಾಸ್‌ ದುರಂತದ ಬಳಿಕ ಪ್ರಸ್ತಾಪಿಸಲಾಗಿತ್ತು.

2047ರ ವೇಳೆಗೆ ದೇಶದಲ್ಲಿ ಅಣು ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು 12 ಪಟ್ಟು ಅಂದರೆ 100 ಗಿಗಾವ್ಯಾಟ್ಸ್‌ಗೆ ಹೆಚ್ಚಿಸುವ ಪ್ರಧಾನಿ ಮೋದಿ ಸರ್ಕಾರದ ಗುರಿಯ ಭಾಗವಾಗಿ ಈ ತಿದ್ದುಪಡಿ ಪ್ರಸ್ತಾಪ ಕುರಿತು ಚರ್ಚಿಸಲಾಗುತ್ತಿದೆ. ಇದು ಅಮೆರಿಕದ ಜತೆಗಿನ ತೆರಿಗೆ ಒಪ್ಪಂದದ ವೇಳೆ ಭಾರತಕ್ಕೆ ಅನುಕೂಲ ಮಾಡಿಕೊಡುವ ವಿಶ್ವಾಸವಿದೆ.

ಭಾರತದ ಅಣುಶಕ್ತಿ ಯೋಜನೆಗಳಿಗೆ ನ್ಯೂಕ್ಲಿಯರ್‌ ರಿಯಾಕ್ಟರ್‌ಗಳನ್ನು ಪೂರೈಸಲು ಅಮೆರಿಕದ ಕಂಪನಿಗಳು ಈ ಹೊಣೆಗಾರಿಕೆ ಷರತ್ತುಗಳಿಂದಾಗಿ ಹಿಂದೇಟು ಹಾಕುತ್ತಿದ್ದವು. ಇದೀಗ ಅಮೆರಿಕದ ಕಂಪನಿಗಳಾದ ಜನರಲ್‌ ಎಲೆಕ್ಟ್ರಿಕ್‌ ಕಂ. ವೆಸ್ಟಿಂಗ್‌ ಹೌಸ್‌ ಕಂ.ನಂಥ ನ್ಯೂಕ್ಲಿಯರ್‌ ರಿಯಾಕ್ಟ್‌ ಪೂರೈಕೆದಾರ ಕಂಪನಿಗಳ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಈ ಕಾನೂನು ತಿದ್ದುಪಡಿಗೆ ಹೊರಟಿದೆ ಎಂದು ಹೇಳಲಾಗಿದೆ.

ಏನು ಬದಲಾವಣೆ?: ಸದ್ಯ ಅಣು ದುರಂತದ ವೇಳೆ ಆಪರೇಟರ್‌ಗಳು ರಿಯಾಕ್ಟರ್‌ ಪೂರೈಕೆದಾರರಿಂದ ಎಷ್ಟು ಪರಿಹಾರ ಕೇಳಬೇಕು ಮತ್ತು ಎಷ್ಟು ಅವಧಿ ವರೆಗೆ ಉತ್ತರದಾಯಿತ್ವ ಹೊರಿಸಬೇಕು ಎಂಬ ಕುರಿತು ಕಾನೂನಲ್ಲಿ ಯಾವುದೇ ವ್ಯಾಖ್ಯಾನ ಇಲ್ಲ. ಪ್ರಸ್ತಾಪಿತ ಕಾನೂನು ತಿದ್ದುಪಡಿಯು ಸಣ್ಣ ರಿಯಾಕ್ಟರ್‌ ಆಪರೇಟರ್‌ಗಳು ನೀಡಬೇಕಾದ ಪರಿಹಾರದ ಮೊತ್ತವನ್ನು 495 ಸಾವಿರ ಕೋಟಿ ರು.ಗೆ ಮಿತಿಗೊಳಿಸುವ ಪ್ರಸ್ತಾಪ ಮಾಡಿದೆ. ಇನ್ನು ದೊಡ್ಡ ರಿಯಾಕ್ಟರ್‌ ಆಪರೇಟರ್‌ಗಳಿಗೆ ವಿಧಿಸಲಾಗುವ 1,500 ಸಾವಿರ ಕೋಟಿ ರು. ದಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ ಎನ್ನಲಾಗಿದೆ.