ಸಾರಾಂಶ
ಪುಣೆ: ಮರಾಠಾ ಸಾಮ್ರಾಜ್ಯದ ಚಿಹ್ನೆಯಾಗಿರುವ ಶನಿವಾರ ವಾಡಾ ಕೋಟೆಯಲ್ಲಿ ಕೆಲ ಮುಸಲ್ಮಾನ ಮಹಿಳೆಯರು ನಮಾಜ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ಅವರು ಸ್ಥಳಕ್ಕೆ ತೆರಳಿ ಅದನ್ನು ಶುದ್ಧೀಕರಿಸಿದ್ದಾರೆ. ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಶನಿವಾರವಾಡಾ ಕೋಟೆಯಲ್ಲಿ ಕೆಲ ಮಹಿಳೆಯರು ಶುಕ್ರವಾರ ನಮಾಜ್ ಮಾಡಿದ್ದರು.
ಅದರ ಬೆನ್ನಲ್ಲೇ ಸ್ಥಳಕ್ಕೆ ತೆರಳಿದ ಮೇಧಾ, ಗೋಮೂತ್ರದಿಂದ ಶುದ್ಧೀಕರಣ ಮಾಡಿದ್ದಲ್ಲದೆ, ಶಿವವಂದನೆಯನ್ನೂ ಮಾಡಿದ್ದಾರೆ. ಬಳಿಕ ಮಾತನಾಡಿ, ‘ಇದು ದುರದೃಷ್ಟಕರ. ಈ ಜನ ಕಂಡಲ್ಲೆಲ್ಲಾ ನಮಾಜ್ ಮಾಡಿ, ಅದನ್ನು ವಕ್ಫ್ ಆಸ್ತಿಗೆ ಸೇರಿಸಿಕೊಂಡುಬಿಡುತ್ತಾರೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತಕ್ಕೆ ಆಗ್ರಹಿಸುತ್ತೇವೆ’ ಎಂದರು.
ಇತ್ತ ಮೇಧಾ ವಿರುದ್ಧ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಿದ ಆರೋಪದಡಿ ದೂರು ದಾಖಲಿಸಬೇಕು ಎಂದು ಆಡಳಿತಾರೂಡ ಎನ್‌ಸಿಪಿಯ ಅಜಿತ್ ಪವಾರ್ ಎನ್‌ಸಿಪಿ ಹಾಗೂ ಕೆಲವು ವಿಪಕ್ಷಗಳು ಒತ್ತಾಯಿಸಿವೆ.
ಜಪಾನ್‌ನ ಮೊದಲ ಮಹಿಳಾ ಪ್ರಧಾನಿ ಆಗಿ ಸಾನೆ ಆಯ್ಕೆ
ಟೋಕ್ಯೋ: ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಸಾನೆ ತಾಕಾಯಿಚಿ (64) ಅವರು ಮಂಗಳವಾರ ಆಯ್ಕೆಯಾಗಿದ್ದಾರೆ. ಲಿಬರಲ್ ಡೆಮಾಕ್ರಟಿಕ್ ಪಕ್ಷದವರಾಗಿರುವ ಇವರು, ಜುಲೈನಲ್ಲಿ ಬಹುಮತ ಕಳೆದುಕೊಂಡಿದ್ದ ಶಿಗೇರು ಇಶೀಬಾರ ಬಳಿಕ ಅವರ ಸ್ಥಾನಕ್ಕೇರಿದ್ದಾರೆ.ತಾಕಾಯಿಚಿ ಅವರು, 237 ಮತಗಳನ್ನು ಪಡೆಯುವ ಮೂಲಕ ಕೆಳಮನೆಗೆ ನಡೆದ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ.
ಅವರ ಪಕ್ಷ ಬಲಪಂತೀಯ ಪಕ್ಷವಾದ ಜಪಾನ್ ಇನೋವೇಷನ್ ಜತೆ ಮೈತ್ರಿ ಮಾಡಿಕೊಂಡಿದೆಯಾದರೂ, ಅವರ ಸರ್ಕಾರ ಅಸ್ಥಿರವಾಗಿಯೇ ಇರಲಿದೆ. ಸ್ಥಿರ ಸರ್ಕಾರ ರಚಿಸಲು ಅವರು ಕೆಲ ವಿಪಕ್ಷಗಳ ಜತೆ ಕೈಜೋಡಿಸುವುದು ಅನಿವಾರ್ಯ.ಸಾನೆ ಅವರ ಎದುರಿಗಿರುವ ಸವಾಲೆಂದರೆ, ಅವರು ಡಿಸೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರ ಅಸಮಾಧಾನವನ್ನು ತಣಿಸಲು ಬೆಲೆ ಏರಿಕೆಯನ್ನು ತ್ವರಿತವಾಗಿ ನಿಭಾಯಿಸಬೇಕು ಮತ್ತು ಆರ್ಥಿಕ ಉತ್ತೇಜಕ ಕ್ರಮಗಳನ್ನು ರೂಪಿಸಬೇಕು.ಮೋದಿ ಅಭಿನಂದನೆ:
ಸಾನೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದು, ಮುಂಬರುವ ದಿನಗಳಲ್ಲಿ ಉಭಯ ದೇಶಗಳ ಸಂಬಂಧ ವರ್ಧನೆಗೆ ಒಟ್ಟಾಗಿ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಫ್ರಾನ್ಸ್ ಮಾಜಿ ಅಧ್ಯಕ್ಷ ಸರ್ಕೋಜಿ ಜೈಲುಪಾಲು
ಪ್ಯಾರಿಸ್: ಅಧ್ಯಕ್ಷೀಯ ಚುನಾವಣೆಗೆ ಲಿಬಿಯಾದಿಂದ ಹಣ ಪಡೆದುಕೊಂಡಿದ್ದಕ್ಕಾಗಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರ ಜೈಲು ಶಿಕ್ಷೆ ಮಂಗಳವಾರದಿಂದ ಆರಂಭವಾಗಿದೆ.
ಸರ್ಕೋಜಿ ಅವರು 2007ರ ಅಧ್ಯಕ್ಷೀಯ ಚುನಾವಣೆಯಲ್ಲಿ ಲಿಬಿಯಾದಿಂದ ಅಕ್ರಮವಾಗಿ ಹಣ ಪಡೆದುಕಂಡಿದ್ದರು. ಈ ಮೂಲಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು ಎಂದು ಇಲ್ಲಿನ ನ್ಯಾಯಾಲಯ ಕ್ರಿಮಿನಲ್ ಸಂಚು ಎಂದು ಘೋಷಿಸಿ, ಸರ್ಕೋಜಿ ಅವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಹೀಗಾಗಿ ಮಂಗಳವಾರ ಜೈಲು ಸೇರಿದ್ದಾರೆ.ಆಧುನಿಕ ಫ್ರಾನ್ಸ್‌ನಲ್ಲಿ ಜೈಲು ಸೇರುತ್ತಿರುವ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಸರ್ಕೋಜಿ ಗುರಿಯಾಗಿದ್ದಾರೆ.
ಬೋನಸ್ ನೀಡದ್ದಕ್ಕೆ ಸಿಡಿದು ವಾಹನ ‘ಟೋಲ್ ಫ್ರೀ’ ಮಾಡಿದ ಟೋಲ್ ಸಿಬ್ಬಂದಿ!
ಫತೇಹಾಬಾದ್: ತಮ್ಮ ಕಂಪನಿ ಕೇವಲ 1100 ರು. ದೀಪಾವಳಿ ಬೋನಸ್ ನೀಡಿತು ಅಸಮಾಧಾನಗೊಂಡ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇನಲ್ಲಿರುವ ಫತೇಹಾಬಾದ್ ಟೋಲ್ ಪೋಸ್ಟ್‌ನ ಕಾರ್ಮಿಕರು, ಸೋಮವಾರ ಎಲ್ಲಾ ಗೇಟ್‌ಗಳನ್ನು ತೆರೆದು ಸಾವಿರಾರು ವಾಹನಗಳು ಯಾವುದೇ ಶುಲ್ಕವಿಲ್ಲದೆ ಹಾದುಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಇದು ‘ದೀಪಾವಳಿ ಗಿಫ್ಟ್’ ಆಗಿ ಪರಿಣಮಿಸಿದರೆ, ಇದು ಸ್ಥಳದಲ್ಲಿ ಅವ್ಯವಸ್ಥೆ ಉಂಟು ಮಾಡಿತು. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಗೊಂದಲ ಇತ್ಯರ್ಥಪಡಿಸಿದರು.

;Resize=(128,128))
;Resize=(128,128))