ಡೇರಿಗಳಲ್ಲಿ ಏಕರೂಪದ ತತ್ರಾಂಶ ಅನುಷ್ಠಾನ

| Published : May 10 2024, 11:48 PM IST / Updated: May 11 2024, 01:07 PM IST

ಸಾರಾಂಶ

ಡೇರಿಗಳಿಗೆ ಹಾಲು ಉತ್ಪಾದಕರು ನೀಡುವ ಹಾಲಿನ ಗುಣಮಟ್ಟ ಹಾಗೂ ಹಾಲಿನ ಪ್ರಮಾಣ ಗಣಕ ಯಂತ್ರದಲ್ಲಿ ನಮೂದಿಸಿ, ಸಹಕಾರ ಸಂಘಗಳಲ್ಲಿ ಪಾರದರ್ಶಕ ವ್ಯವಹಾರಕ್ಕಾಗಿ ಏಕರೂಪ ತಂತ್ರಾಂಶ ಅಳವಡಿಕೆ ಮಾಡಲು ಸರ್ಕಾರ ಆದೇಶಿಸಿದೆ.

 ಮಾಲೂರು :  ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಒಕ್ಕೂಟದ ಆಡಳಿತ ಮಂಡಳಿ ಸಭೆಯ ನಿರ್ಧಾರದಂತೆ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಏಕರೂಪ ತಂತ್ರಾಂಶ ಅನುಷ್ಠಾನಗೊಳಿಸಲಾಗುವುದು ಎಂದು ಕೊಚಿಮಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ. ನಂಜೇಗೌಡ ಹೇಳಿದರು

ಅವರು ಪಟ್ಟಣದ ಶಿಬಿರ ಕಚೇರಿಯ ಸಭಾಂಗಣದಲ್ಲಿ ಕೋಚಿಮುಲ್ ವತಿಯಿಂದ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಏಕರೂಪ ತಂತ್ರಾಂಶ ಅಳವಡಿಸಿಕೊಳ್ಳುವ ಬಗ್ಗೆ ಅಧ್ಯಕ್ಷ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಹಾಗೂ ಮೃತ ೩೨ ರಾಸುಗಳ ಮಾಲೀಕರಿಗೆ ೨೦ ಲಕ್ಷ ೪೦,೦೦೦ ವಿಮಾ ಪರಿಹಾರ ಹಣದ ಚೆಕ್‌ ವಿತರಿಸಿ ಮಾತನಾಡಿದರು.

ಪಾರದರ್ಶಕ ವ್ಯವಹಾರ ಉದ್ದೇಶ

ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಹಾಲು ಉತ್ಪಾದಕರು ನೀಡುವ ಹಾಲಿನ ಗುಣಮಟ್ಟ ಹಾಗೂ ಹಾಲಿನ ಪ್ರಮಾಣ ಗಣಕ ಯಂತ್ರದಲ್ಲಿ ನಮೂದಿಸಿ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಪಾರದರ್ಶಕ ವ್ಯವಹಾರಕ್ಕಾಗಿ ಏಕರೂಪ ತಂತ್ರಾಂಶ ಅಳವಡಿಕೆ ಮಾಡಲು ಸರ್ಕಾರ ಆದೇಶಿಸಿದೆ. ಈ ತಂತ್ರಾಂಶ ಅಳವಡಿಕೆಯಿಂದ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಹಾಗೂ ಹಾಲು ಉತ್ಪಾದಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದರು.

ಈ ತಂತ್ರಾಂಶದಿಂದ ಹಾಲು ಉತ್ಪಾದಕರು ತಾವು ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ನೀಡಿರುವ ಹಾಲಿನ ಗುಣಮಟ್ಟ ಹಾಗೂ ಪ್ರಮಾಣದ ಮಾಹಿತಿಯನ್ನು ತಿಳಿಯಬಹುದಾಗಿದೆ. ಹಾಲಿಗೆ ಸಿಗುವ ಪ್ರೋತ್ಸಾಹ ಧನ ಸೇರಿದಂತೆ ಇತರೆ ಸೌಲತ್ತುಗಳು ಬೇಗನೆ ಪಡೆಯಲು ಸಾಧ್ಯವಾಗುತ್ತದೆ. ಈ ತಂತ್ರಾಂಶ ಅಳವಡಿಕೆಗೆ ಯಾವ ಸಂಘದ ವಿರೋಧವೂ ಇಲ್ಲ ಎಂದರು.

ತತ್ರಾಂಶದಲ್ಲಿ ಗುಣಮಟ್ಟ ನಿರ್ಧಾರ

ತಂತ್ರಾಂಶ ಅಳವಡಿಸುವುದರಿಂದ ಉಂಟಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಸಂಘದ ಕಾರ್ಯದರ್ಶಿಗಳು, ವಿಸ್ತರಣಾಧಿಕಾರಿಗಳು ಪರಿಹರಿಸಬಹುದಾಗಿದೆ, ತಂತ್ರಾಂಶದಲ್ಲಿ ಹಾಲಿನ ಗುಣಮಟ್ಟ ಹಾಲಿನ ಪ್ರಮಾಣದ ದರ ನಿಗದಿಯಾಗಿರುತ್ತದೆ. ಗುಣಮಟ್ಟದ ಹಾಲು ಕೊಡುವವರನ್ನು ಗುರುತಿಸಬಹುದಾಗಿದೆ, ಶೇ.೯೮ ರಷ್ಟು ಗುಣಮಟ್ಟದ ಹಾಲು ಹಾಲು ಉತ್ಪಾದಕರು ನೀಡುತ್ತಿದ್ದು, ಎರಡರಷ್ಟು ಮಾತ್ರ ಹಾಲಿನ ಉತ್ಪಾದಕರ ಹಾಲಿನ ಗುಣಮಟ್ಟ ಕಡಿಮೆ ಇದೆ ಎಂದರು.

ಸೋಲಾರ್‌ ಪ್ಲಾಂಟ್‌ ನಿರ್ಮಾಣ

ಒಕ್ಕೂಟದ ವಿದ್ಯುತ್ ಬಿಲ್‌ಗಾಗಿ ಪ್ರತಿ ತಿಂಗಳು ೨ ಕೋಟಿ ರೂಗಳು ವ್ಯಯವಾಗುತ್ತಿತ್ತು ಅದನ್ನು ಉಳಿಸುವ ನಿಟ್ಟಿನಲ್ಲಿ ಒಕ್ಕೂಟವು 2 ಕೋಟಿ ರು.ಗಳ ಸೋಲಾರ್ ಪ್ಲಾಂಟ್ ಅನ್ನು ನಿರ್ಮಾಣ ಮಾಡುತ್ತಿದ್ದು, ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ಉಳಿತಾಯವಾಗುವ ಹಣವನ್ನು ಹಾಲು ಉತ್ಪಾದಕರಿಗೆ ವಿವಿಧ ರೀತಿಯ ಸೌಲತ್ತುಗಳ ರೂಪದಲ್ಲಿ ಹಂಚಿಕೆ ಮಾಡಲಾಗುವುದು. ಅಲ್ಲದೆ ೨೫೦ ಕೋಟಿ ರು.ಗಳ ವೆಚ್ಚದಲ್ಲಿ ಐಸ್ ಕ್ರೀಮ್ ಫ್ಯಾಕ್ಟರಿ ಪ್ರಾಜೆಕ್ಟ್ ಕಾಮಗಾರಿ ಸಹ ನಡೆಯುತ್ತಿದೆ ಎಂದರು.

ಹೈನುಗಾರಿಕೆ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ಹಾಲು ಉತ್ಪಾದಕ ರೈತರು ತಮ್ಮ ರಾಸುಗಳಿಗೆ ಕಡ್ಡಾಯವಾಗಿ ಒಕ್ಕೂಟ ನೀಡುವ ವಿಮಾಕಂತಿನ ಹಣವನ್ನು ಬಳಸಿಕೊಂಡು ತಾವು ವಿಮಾ ಕಂತನ್ನು ಪಾರ್ವತಿಸುವುದರ ಮೂಲಕ ವಿಮೆಯನ್ನು ಮಾಡಿಸಿ ಆಕಸ್ಮಿಕವಾಗಿ ರಾಸುಗಳು ಮೃತಪಟ್ಟ ವಿಮಾ ಪರಿಹಾರ ಹಣವನ್ನು ಪಡೆದು ಮತ್ತೊಮ್ಮೆ ರಾಸುಗಳನ್ನು ಖರೀದಿಸಿ ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ನಡೆಸುವಂತೆ ಹೇಳಿದರು.ಈ ಸಂದರ್ಭದಲ್ಲಿ ಒಕ್ಕೂಟದ ತಂತ್ರಾಂಶ ವಿಭಾಗದ ವ್ಯವಸ್ಥಾಪಕ ಮಧು, ನಾಗೇಶ್, ಶಿಬಿರ ಕಚೇರಿಯ ವ್ಯವಸ್ಥಾಪಕರಾದ ಡಾ. ಲೋಹಿತ್, ದ್ಯಾಪಸಂದ್ರ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ನಾರಾಯಣಗೌಡ, ತಾ.ಪಂ. ಮಾಜಿ ಅಧ್ಯಕ್ಷ ಬಿ.ಆರ್. ಶ್ರೀನಿವಾಸ್, ವಿಸ್ತರಣಾಧಿಕಾರಿಗಳಾದ ಕರಿಯಪ್ಪ, ಹುಲ್ಲೂರಪ್ಪ, ಮನೋಹರ್ ರೆಡ್ಡಿ, ವೆಂಕಟೇಶ್, ಇನ್ನಿತರರು ಹಾಜರಿದ್ದರು.