ಬದುಕು ಕಟ್ಟಿಕೊಟ್ಟ ಗಣೇಶ ವಿಗ್ರಹ ತಯಾರಿಕೆ

| Published : Sep 02 2024, 02:14 AM IST

ಸಾರಾಂಶ

ಸರ್ಕಾರ ಪಿಓಪಿ ಗಣೇಶ ಮೂರ್ತಿಗಳ ನಿಷೇಧ ಮಾಡಿ, ಮಣ್ಣಿನ ಗಣೇಶ ಮೂರ್ತಿ ಗಳಿಗೆ ಮಾತ್ರ ಅವಕಾಶ ನೀಡಿದೆ. ಆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಅಷ್ಟೇ ಅಲ್ಲ ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ರಾಮನಗರ, ಕೋಲಾರ ಮತ್ತಿತರ ಭಾಗಗಳಿಂದ ಗ್ರಾಹಕರು ಗಣೇಶಮೂರ್ತಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಗಣೇಶೋತ್ಸವ ಬಂತೆಂದರೆ ಗಣೇಶನ ಮೂರ್ತಿ ತಯಾರಕರಿಗೆ ಎಲ್ಲಿಲ್ಲದ ಬೇಡಿಕೆ ಬರುವುದು ಸಹಜ. ಸ್ಥಳೀಯರಲ್ಲಿದೆ ದೂರರ ರಾಜ್ಯಗಳಿಂದಲೂ ಗಣೇಶಮೂರ್ತಿ ತಯಾರಕರು ಚಿಕ್ಕಬಳ್ಳಾಪುರ ನಗರಕ್ಕೆ ಲಗ್ಗೆ ಇಡುತ್ತಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯು ಹಲವರಿಗೆ ಆಶ್ರಯ ಕಲ್ಪಿಸಿರುವುದರ ಜೊತೆಗೆ ಹೊರ ರಾಜ್ಯದವರಿಗೂ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಅಂತಹ ವ್ಯಕ್ತಿಗಳಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸಲೆಂದೇ ಪಶ್ಚಿಮ ಬಂಗಾಳದ ಕೋಲ್ಕತಾದಿಂದ ಬಂದ ಲಕ್ಷ್ಮೀಕಾಂತ್ ಸಹಾ ಒಬ್ಬರು.

ಕೋಲ್ಕೊತ್ತಾದಿಂದ ಚಿಕ್ಕಬಳ್ಳಾಪುರಕ್ಕೆ

13 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ವಲಸೆ ಬಂದ ಈತ ನಗರ ಹೊರವಲಯದ ಅಗಲಗುರ್ಕಿ ರೈಲ್ವೇ ಗೇಟ್ ಸಮೀಪದ ಹೊಲದ ಜಮೀನಿನಲ್ಲಿ ಶೆಡ್ ನಿರ್ಮಿಸಿ ಕೊಂಡು, ಹೊಲದ ಮಾಲಿಕನಿಗೆ ಬಾಡಿಗೆ ನೀಡಿ ಆಶ್ರಯಿಸಿದ್ದು ಸಾಂಪ್ರದಾಯಿಕ ಮಣ್ಣಿನ ಮೂರ್ತಿ ತಯಾರಿಕೆಯನ್ನು ವೃತ್ತಿಯಾಗಿಸಿ ಕೊಂಡು ಬದುಕು ಕಟ್ಟಿಕೊಂಡಿದ್ದಾನೆ.

ಲಕ್ಷ್ಮೀಕಾಂತ್ ನೊಂದಿಗೆ 4 ಮಂದಿ ಇದ್ದಾರೆ. ಅವರೆಲ್ಲರೂ ಗೌರಿಗಣೇಶ ಮೂರ್ತಿ ತಯಾರಿಸುವುದರ ಜತೆಗೆ ಮೂರ್ತಿಗಳಿಗೆ ಬಣ್ಣದ ಜೀವಕಳೆ ನೀಡುವುದರಲ್ಲಿ ಕೂಡ ಸಿದ್ಧಹಸ್ತರಾಗಿದ್ದಾರೆ. ಲಕ್ಷ್ಮೀಕಾಂತ ತನ್ನ ಸಂಗಡಿಗರ ಜತೆಗೂಡಿ ಸಂಪ್ರದಾಯ ಬದ್ದ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ. ವರ್ಷವಿಡೀ ಗಣಪನ ವಿಗ್ರಹಗಳನ್ನೇ ಮಾರಾಟ ಮಾಡಿ ಬದುಕು ರೂಪಿಸಿಕೊಂಡಿದ್ದಾರೆ.ಮಣ್ಣಿನಿಂದ ಮೂರ್ತಿ ತಯಾರಿಕೆ

ಸರ್ಕಾರ ಪಿಓಪಿ ಗಣೇಶ ಮೂರ್ತಿಗಳ ನಿಷೇಧ ಮಾಡಿ, ಮಣ್ಣಿನ ಗಣೇಶ ಮೂರ್ತಿ ಗಳಿಗೆ ಮಾತ್ರ ಅವಕಾಶ ನೀಡಿದೆ. ಆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಅಷ್ಟೇ ಅಲ್ಲ ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ರಾಮನಗರ, ಕೋಲಾರ ಮತ್ತಿತರ ಭಾಗಗಳಿಂದ ಗ್ರಾಹಕರು ಭಿನ್ನ ರೀತಿ ಗಣೇಶಮೂರ್ತಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಉತ್ತಮ ಮಾರಾಟವನ್ನು ಈ ಸಲ ನಿರೀಕ್ಷಿಸಲಾಗಿದೆ ಎಂದು ಕೋಲ್ಕತಾ ಮೂಲಕ ಮೂರ್ತಿ ತಯಾರಕ ಲಕ್ಷ್ಮೀಕಾಂತ್ ಹೇಳುತ್ತಾರೆ. ಚಿಕ್ಕಬಳ್ಳಾಪುರದಲ್ಲಿ 13 ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿರುವುದರಿಂದ ಕಾಯಂ ಗ್ರಾಹಕರು ಇದ್ದಾರೆ. ಒಂದೂವರೆ ಅಡಿ ಎತ್ತರದ ಚಿಕ್ಕ ಮೂರ್ತಿಗಳಿಂದ ಹಿಡಿದು 10 ಅಡಿ ಎತ್ತರವುಳ್ಳ ಗಣೇಶ ಮೂರ್ತಿಗಳಿಗೆ ಗ್ರಾಹಕರು ಬೇಡಿಕೆ ಸಲ್ಲಿಸಿದ್ದಾರೆ. ಮನೆ ಬಾಗಿಲಿಗೆ ಬಂದು ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುತ್ತಾರೆ.ಪರಿಸರ ಸ್ನೇಹಿ ಮೂರ್ತಿಗಳು

ಕೋಲ್ಕತಾ ಮೂಲದ ಲಕ್ಷ್ಮೀಕಾಂತ್ ಮತ್ತು ಸಂಗಡಿಗರು ಪರಿಸರ ಪ್ರೇಮಿ ಮೂರ್ತಿಗಳ ತಯಾರಿಕೆಗೆ ಆದ್ಯತೆ ನೀಡಿದೆ.ಮೊದಲು ಪೀಠ ನಿರ್ಮಿಸಿ ಅದರ ಮೇಲೆ ಬಿದಿರಿನಿಂದ ಗಣೇಶನ ಆಕಾರ ಮಾಡಿ ಅದಕ್ಕೆ ಭತ್ತದ ಹುಲ್ಲು ಸುತ್ತಿ, ಅದರ ಮೇಲೆ ಕೋಲ್ಕತಾದಿಂದ ಪೂರೈಕೆ ಆಗಿರುವ ಮಣ್ಣು ಹಾಗೂ ಸ್ಥಳೀಯ ಕೆರೆಗಳಿಂದ ತಂದಿರುವ ಮಣ್ಣಿನ ಸಮಿಶ್ರಣಗಳಿಂದ ಮೂರ್ತಿ ವಿನ್ಯಾಸ ಪಡಿಸಲಾಗುತ್ತದೆ.

ಜೇಡಿಮಣ್ಣಿನ ಮೂರ್ತಿಗಳಿಗೆ ಹಾನಿಕಾರಕ ವಲ್ಲದ ರಾಸಾಯನಿಕ ರಹಿತ ವಾಟರ್ ಕಲರ್ ಗಳಿಂದ ಮುಂಬೈ ಗಣೇಶೋತ್ಸವದ ಟಚ್‌ ನೀಡಿ ಸೌಂದರ್ಯದ ಮೆರಗು ದ್ವಿಗುಣಗೊಳಿಸಲಾಗುತ್ತದೆ. ಈ ಬಾರಿ ವಿಶೇಷವಾಗಿ ರಾಮಲಲ್ಲಾ ಗಣೇಶ ಮೂರ್ತಿ ತಯಾರಿಸಿದ್ದೇನೆ. ಯಾರಾದರೂ ಪೋಟೋ ತಂದು ಈ ವಿನ್ಯಾಸದ ಗಣಪತಿ ಬೇಕು ಎಂದು ಆರ್ಡರ್ ಮಾಡಿದರೆ ಅದೇ ರೀತಿಯಾಗಿ ತಯಾರಿಸಿ ಕೋಡುತ್ತೇವೆ ಎಂದು ಲಕ್ಷ್ಮೀಕಾಂತ್ ತಿಳಿಸಿದ್ದಾರೆ.ಸಿಕೆಬಿ-1 ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಲಕ್ಷ್ಮೀಕಾಂತ್