ಅರಣ್ಯ ಇಲಾಖೆಯ ಕಕ್ಕೂರ ನರ್ಸರಿಯಲ್ಲಿ 1.55 ಲಕ್ಷ ಸಸಿ

| Published : May 29 2024, 12:52 AM IST

ಸಾರಾಂಶ

ಅರಣ್ಯ ಇಲಾಖೆಯಿಂದ ಸಿದ್ಧವಾಗಿರುವ ಈ ಸಸಿಗಳನ್ನು ಬೆಳೆಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಹಲವಾರು ತಿಂಗಳುಗಳ ಶ್ರಮವಿದೆ

ರಿಯಾಜಅಹ್ಮದ ಎಂ ದೊಡ್ಡಮನಿ ಡಂಬಳ

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡವನ್ನು ಇನ್ನಷ್ಟು ಹಸಿರುಗೊಳಿಸುವದರ ಜತೆಗೆ ಜಿಲ್ಲೆಯ ಇನ್ನುಳಿದ ಭಾಗಗಳಲ್ಲಿಯೂ ಸಸಿಗಳನ್ನು ಬೆಳೆಸಲು ಬೇಕಾಗುವ 1.55 ಲಕ್ಷಕ್ಕೂ ಅಧಿಕ ಸಸಿಗಳನ್ನು ಕಕ್ಕೂರು ನರ್ಸರಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಳೆಸಿ ಜಿಲ್ಲೆಯನ್ನು ಹಸಿರುಗೊಳಿಸಲು ಸಿದ್ಧರಾಗಿದ್ದಾರೆ.

ಸದ್ಯ ಸಿದ್ಧವಾಗಿರುವ 1.55 ಲಕ್ಷ ಸಸಿಗಳಲ್ಲಿ 1 ಲಕ್ಷಕ್ಕೂ ಅಧಿಕ ಸಸಿಗಳನ್ನು ಕಪ್ಪತ್ತಗುಡ್ಡ ಭಾಗದಲ್ಲಿಯೇ ನೆಡುವುದು. ಇನ್ನುಳಿದ 50 ಸಾವಿರ ಸಸಿಗಳನ್ನು ರೈತರಿಗೆ ವಿತರಿಸುವ ಮೂಲಕ ರೈತರ ಜಮೀನುಗಳಲ್ಲಿಯೂ ಹಸಿರೀಕರಣ ಮಾಡುವುದು ಅರಣ್ಯ ಇಲಾಖೆಯ ಉದ್ದೇಶವಾಗಿದ್ದು, ಇದಕ್ಕೆ ಹಲವಾರು ಅಧಿಕಾರಿಗಳು, ಸಿಬ್ಬಂದಿಗಳ ನಿರಂತರ ಶ್ರಮದಿಂದ ಇದೆಲ್ಲ ಸಾಧ್ಯವಾಗಿದೆ.

ವಿಶೇಷ ಕಾಳಜಿ: ಅರಣ್ಯ ಇಲಾಖೆಯಿಂದ ಸಿದ್ಧವಾಗಿರುವ ಈ ಸಸಿಗಳನ್ನು ಬೆಳೆಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಹಲವಾರು ತಿಂಗಳುಗಳ ಶ್ರಮವಿದೆ. ಮೊದಲು ಗೊಬ್ಬರ, ಮರಳು ಮತ್ತು ಕೆಂಪು ಮಣ್ಣನ್ನು ಬಹಳ ಎಚ್ಚರಿಕೆಯಿಂದ ಸಂಯೋಜನೆ ಮಾಡಿ ಫಲವತ್ತಾದ ಮಣ್ಣನ್ನು ತಯಾರಿಸಿ, ನಂತರ ಬೀಜಗಳನ್ನು ಸಾಮಾನ್ಯವಾಗಿ ಜನವರಿ ಮತ್ತು ಮಾರ್ಚ ನಡುವೆ 4x6 ಇಂಚಿನ ಚೀಲಗಳಲ್ಲಿ ಹಾಕಿ, ಅವುಗಳು ಮೊಳಕೆಯೊಡೆದು ಅಲ್ಪ ಬೆಳೆದ ನಂತರ ಜೂನ್‌ ತಿಂಗಳಲ್ಲಿ ಅವುಗಳನ್ನು ದೊಡ್ಡ ಚೀಲಗಳಲ್ಲಿ ಸ್ಥಳಾಂತರಿಸಲಾಗುತ್ತದೆ. ಹೀಗೆ ನಿರಂತರವಾಗಿ ಒಂದು ವರ್ಷ ಶ್ರಮಪಟ್ಟ ನಂತರ ಸಸಿಗಳು ನಾಟಿ ಮಾಡಲು ಸಿದ್ಧವಾಗುತ್ತವೆ. ಇದಕ್ಕೆ ಇಲಾಖೆಯ ವಿಶೇಷ ಕಾಳಜಿಯೇ ಕಾರಣವಾಗಿದೆ.

ರೈತರಿಗೆ ವಿತರಿಸುವ ಸಸಿಗಳು: ರೈತರ ವಿತರಣೆಗಾಗಿ ಸಿದ್ಧವಾಗಿರುವ 55 ಸಾವಿರ ಸಸಿಗಳಲ್ಲಿ ಪ್ರಮುಖವಾಗಿ ಅತ್ಯಂತ ಬೆಲೆಬಾಳುವ, ರೈತರಿಗೆ ಮುಂದೆ ವರದಾನವಾಗುವ ಸಾಗವಾನಿ, ಮಹಾಗನಿ, ಸೀತಾಫಲ, ಕರಬೇವು, ನುಗ್ಗೆ, ಲಿಂಬೆ, ಬಿದಿರು, ನೇರಳೆ, ನೆಲ್ಲಿ, ಮಾವು ಸಿದ್ಧವಾಗಿವೆ. 6x9 ಎತ್ತರದ ಒಂದು ಸಸಿಗೆ ₹3, 8x12 ಎತ್ತರದ ಒಂದು ಸಸಿಗೆ ₹6 ಅರಣ್ಯ ಇಲಾಖೆಗೆ ಭರಿಸುವುದರ ಮೂಲಕ ಸಸಿಗಳನ್ನು ರೈತರು ಪಡೆದುಕೊಳ್ಳಬಹುದಾಗಿದ್ದು, ಇದು ರೈತರಿಗೆ ಅತ್ಯಂತ ಕಡಿಮೆ ಬೆಲೆ ಸಿಗುತ್ತಿರುವ ಸಸಿಗಳಾಗಿವೆ.

ಇತರೆ ಸಸಿಗಳು: ಜಿಲ್ಲೆಯ ಇನ್ನುಳಿದ ಭಾಗಗಳಾದ ಕಪ್ಪತ್ತಗುಡ್ಡ, ಶಾಲೆ, ಸರ್ಕಾರಿ ಜಾಗೆಗಳಲ್ಲಿ ಅರಳಿ, ಆಲ, ಹತ್ತಿ, ಇಲಾಚಿ, ನೇರಳೆ, ಹೊಂಗೆ, ತಪಸ್ಸಿ, ಬಿಳಿಮತ್ತಿ, ಕಮರ, ಸೋನಾಡಾ, ಬೇವು, ಸೀತಾಫಲ, ಶಿವನಿ, ಭಾಗ್ಯ ಸೇರಿದಂತೆ ವಿವಿಧ ತಳಿಯ 1 ಲಕ್ಷ ಸಸಿಗಳು, ತಬೆಬುಯಾ ಅರ್ಜೆಂಟೀಯಾ, ಭಾರತೀಯ ಕಹಳೆ ಮರ, ಚಂಪಕ್ ಸೇರಿದಂತೆ ವಿಶೇಷ ಹೂವಿನ ಸಸಿಗಳು ಕೂಡಾ ಸಿದ್ಧವಾಗಿವೆ.

ಸಂಪರ್ಕಿಸಿ: ವರ್ಷದಿಂದ ವರ್ಷಕ್ಕೆ ತಾಪಮಾನ ಪ್ರಮಾಣ ಹೆಚ್ಚಾಗುತ್ತಿದೆ. ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಇದರ ತಡೆಗೆ ಪ್ರತಿಯೊಬ್ಬರು ಗಮನ ವಹಿಸಿ ಗಿಡಗಳನ್ನು ಹೇರಳವಾಗಿ ಬೆಳೆಸಬೇಕು, ಇದರಿಂದ ಸಹಜವಾಗಿಯೇ ಆಮ್ಲಜನಕದ ಪ್ರಮಾಣವೂ ಹೆಚ್ಚಾಗುತ್ತದೆ. ವಾಯುಮಾಲಿನ್ಯ ಕಡಿಮೆಯಾಗಿ, ಮಳೆ ಪ್ರಮಾಣ ಹೆಚ್ಚಾಗಿ, ಬರಗಾಲದಂತಹ ಸ್ಥಿತಿ ನಿರ್ಮಾಣವಾಗುವುದಿಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಸಸಿಗಳನ್ನು ಪಡೆದುಕೊಳ್ಳಲು ಇಚ್ಚಿಸುವವರು ಅರಣ್ಯ ಇಲಾಖೆಯ ಸಂತೋಷ ಕಗದಾಳ 8762073359, ಕುಮಾರ ಪೂಜಾರ 8277503451 ಇವರನ್ನು ಸಂಪರ್ಕಿಸಬಹುದಾಗಿದೆ.

ನಮ್ಮ ಕಕ್ಕೂರ ನರ್ಸರಿಯಲ್ಲಿ ಹಿರಿಯ ಅರಣ್ಯ ಅಧಿಕಾರಿಗಳ ಸಲಹೆ ಸೂಚನೆಯ ಮೇರೆಗೆ ಸಸಿಗಳನ್ನು ಬೆಳೆಸುವದರ ಮೂಲಕ ಅವು ಒಂದು ನಿರ್ದಿಷ್ಟ ಎತ್ತರಕ್ಕೆ ಬೆಳೆದು ನಿಲ್ಲುವವರೆಗೆ ನಾವು ಅವುಗಳನ್ನು ಕಾಳಜಿಯಿಂದ ಬೆಳೆಸಿದ್ದೇವೆ. ರೈತರು ತಮ್ಮ ಜಮೀನುಗಳಲ್ಲಿ ತೋಟಗಳಲ್ಲಿ ಹಚ್ಚಲು ಮುಂದಾಗಬೇಕು ಎಂದು ಮುಂಡರಗಿ ವಲಯ ಅರಣ್ಯ ಅಧಿಕಾರಿ ವೀರೇಂದ್ರ ಮರಿಬಸಣ್ಣವರ ತಿಳಿಸಿದ್ದಾರೆ.