ಸಾರಾಂಶ
ದಾವಣಗೆರೆ : ಪಂಚ ಪೀಠಾಧೀಶರು ಹಾಗೂ ಶಿವಾಚಾರ್ಯ ಶೃಂಗ ಸಮ್ಮೇಳನದಲ್ಲಿ ಒಟ್ಟು 12 ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಸಮ್ಮೇಳನದ ಕೊನೆಯ ದಿನವಾದ ಮಂಗಳವಾರ ಸಂಜೆ 12 ನಿರ್ಣಯಗಳನ್ನು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಂಡಿಸಿದರು.
ಸಮ್ಮೇಳನದಲ್ಲಿ ಕೈಗೊಂಡ 12 ನಿರ್ಣಯಗಳನ್ನು ಒಂದೊಂದಾಗಿ ಓದಿದ ರಂಭಾಪುರಿ ಜಗದ್ಗುರುಗಳು ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರಗಳು, ಸಮಾಜದ ನಾಯಕರು, ಜನಪ್ರತಿನಿಧಿಗಳು, ಸಮಾಜ ಬಾಂಧವರು ಮಾಡಬೇಕು ಎಂದು ತಿಳಿಸಿದರು. ಉಜ್ಜಯಿನಿ ಸಿದ್ಧಲಿಂಗ ರಾಜದೇಶೀಕೇಂದ್ರ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠದ ನಿಯೋಜಿತ ಪೀಠಾಧ್ಯಕ್ಷರಾದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಶಿವಾಚಾರ್ಯರು, ಸಮಾಜ ಬಾಂಧವರು ಐತಿಹಾಸಿಕ ಸಮ್ಮೇಳನಕ್ಕೆ ಸಾಕ್ಷಿಯಾದರು.
*ನಿರ್ಣಯಗಳು ಹೀಗಿವೆ
1.ಬರಲಿರುವ ಜಾತಿ ಗಣತಿಯಲ್ಲಿ ಎಲ್ಲ ಒಳಪಂಗಡಗಳು ‘ವೀರಶೈವ ಲಿಂಗಾಯತ’ ಎಂದು ಬರೆಯಿಸಬೇಕು. ವೀರಶೈವ ಲಿಂಗಾಯತ ಸಮಗ್ರತೆ ಮತ್ತು ಒಗ್ಗಟ್ಟನ್ನು ಪ್ರತಿಪಾದಿಸಬೇಕೆಂದು ಸಭೆ ತೀರ್ಮಾನಿಸಿತು.
2.ಸನಾತನ ಹಿಂದೂ ವೀರಶೈವ ಲಿಂಗಾಯತ ಧರ್ಮದ ಅನುಯಾಯಿಗಳು ತಾವು ಮಾಡುವ ಉದ್ಯೋಗಗಳಿಂದಲೇ ಉಪಜಾತಿಗಳು ನಿರ್ಮಾಣವಾಗಿವೆ. ಈ ಉಪ ಜಾತಿಗಳಿಂದ ಧರ್ಮವು ಹರಿದು ಹಂಚಿ ಹೋಗಬಾರದು. ಉಪಜಾತಿ ಯಾವುದೇ ಇದ್ದರೂ ನಾವೆಲ್ಲ ವೀರಶೈವ ಲಿಂಗಾಯತರೆಂಬ ಒಗ್ಗಟ್ಟನ್ನು ಕಾಪಾಡಿಕೊಂಡು ಹೋಗಬೇಕು.
3.ಜನಗಣತಿಯ ಫಾರಂನಲ್ಲಿ ಮತದ ಕಾಲಂ ಸಹ ಇರಬೇಕು ಎಂಬ ಆಗ್ರಹವನ್ನು ಅಖಿಲ ಭಾರತ ವೀರಶೈವ ಮಹಾಸಭೆ ಮುಖಾಂತರ ಕೂಡಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು.
4.ಈ ವಿಷಯವಾಗಿ ಪ್ರಧಾನಮಂತ್ರಿ ಗಮನ ಸೆಳೆಯಲು ಸಮಾಜದ ಮುಖಂಡರ, ವೀರಶೈವ ಮಠಾಧಿಪತಿಗಳ ಮತ್ತು ಎಲ್ಲ ಪಕ್ಷಗಳ ವೀರಶೈವ ಲಿಂಗಾಯತ ಸಂಸದರ ಒಂದು ನಿಯೋಗವನ್ನು ದಿಲ್ಲಿಗೆ ಕಳಿಸುವ ವ್ಯವಸ್ಥೆ ಮಾಡಬೇಕು.
5.ವೀರಶೈವ ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳಿಗೆ ಕೇಂದ್ರ ಸರ್ಕಾರದ ಒಬಿಸಿ ದೊರಕಿಸಿ ಕೊಡಲು ಎಲ್ಲ ಒಳಪಂಗಡಗಳ ಮುಖಂಡರು ಒಗ್ಗಟ್ಟಿನಿಂದ ಕೇಂದ್ರ ಸರ್ಕಾರದ ಗಮನ ಸೆಳೆಯಲು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
6.ವೀರಶೈವ ಲಿಂಗಾಯತ ಕೆಲವು ಒಳ ಪಂಗಡಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಯಡಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದು, ಅದರ ಮುಂದುವರಿಕೆ ಅಗತ್ಯವೆಂದು ಸಭೆ ತೀರ್ಮಾನಿಸಿತು.
7.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಎಲ್ಲ ಜಿಲ್ಲಾ ತಾಲೂಕು ಮತ್ತು ಗ್ರಾಮೀಣ ಸಂಘಟನೆಯಲ್ಲಿ ಜಗದ್ಗುರು ರೇಣುಕಾಚಾರ್ಯರ ಫೋಟೋ ಹಾಕುವುದನ್ನು ಮರೆಯಬಾರದು. ವೀರಶೈವ ಲಿಂಗಾಯತ ಮೂಲ ತತ್ವ-ಸಿದ್ಧಾಂತಗಳನ್ನು ಮತ್ತು ಶರಣರ ವಿಚಾರಧಾರೆಗಳನ್ನು ಸಂಯುಕ್ತವಾಗಿ ಮನವರಿಕೆ ಮಾಡಿಕೊಡಬೇಕು.
8.ಗುರು ಪರಂಪರೆಯ ಪ್ರಾಚೀನ ಸಂಪ್ರದಾಯಗಳನ್ನು ಶ್ರದ್ಧೆಯಿಂದ ಆಚರಿಸಲು ಲಕ್ಷ್ಯ ವಹಿಸುವುದು ಮತ್ತು ಯುವ ಜನಾಂಗದಲ್ಲಿ ಅರಿವು ಆಚರಣೆ ಮೂಡಿಸಬೇಕು.
9.ವೀರಶೈವ ಲಿಂಗಾಯತ ಸಂಪ್ರದಾಯದ ಮಹಿಳೆಯರು, ಅಂಗವಿಕಲರು ಮತ್ತು ಶೋಷಿತರ ಹಿತರಕ್ಷಣೆಗಾಗಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು.
10.ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಮಧ್ಯೆ ಉತ್ತಮ ವಾತಾವರಣ ನಿರ್ಮಾಣಗೊಳ್ಳಬೇಕು. ಆಯಾ ಪೀಠಗಳ ಶಾಖಾ ಮಠಗಳ ಹಿತರಕ್ಷಣೆ-ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಪೀಠಾಚಾರ್ಯರು ಮಾರ್ಗದರ್ಶನ ನೀಡಿ ಬಲಪಡಿಸಬೇಕು. ಇನ್ನೊಂದು ಶಾಖಾ ಮಠದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು.
11.ವರ್ಷದಲ್ಲಿ ಒಮ್ಮೆ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಬೃಹತ್ ಸಮಾವೇಶ ನಡೆಸಿ ವೀರಶೈವ ಲಿಂಗಾಯತ ಪರಂಪರೆಯ ಆದರ್ಶ ಮೌಲ್ಯಗಳನ್ನು ಸಂರಕ್ಷಿಸಿಕೊಂಡು ಬರಬೇಕು.
12.ಉತ್ತರ ಭಾರತದ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಕೂಡ ವೀರಶೈವರು ಅನಾದಿ ಕಾಲದಿಂದಲೂ ವಾಸವಾಗಿದ್ದು, ಅವರಿಗೆ ಧರ್ಮ ಸಂಸ್ಕಾರಗಳ ಮತ್ತು ಸರ್ಕಾರಿ ಸೌಲಭ್ಯಗಳ ಪ್ರಾಪ್ತಿಯ ಯೋಜನೆಗಳನ್ನು ರೂಪಿಸಬೇಕು.