ರೈತರ ಹೋರಾಟ ಹತ್ತಿಕ್ಕಲು 1987ರ ಕಾಯ್ದೆ ಅಸ್ತ್ರವಾಗಿ ಬಳಕೆ; ಬಿಡದಿ ಟೌನ್ ಶಿಪ್ ಗಾಗಿ ಭೂ ಸ್ವಾಧೀನ ಪ್ರಕ್ರಿಯೆ

| Published : May 02 2025, 12:13 AM IST

ರೈತರ ಹೋರಾಟ ಹತ್ತಿಕ್ಕಲು 1987ರ ಕಾಯ್ದೆ ಅಸ್ತ್ರವಾಗಿ ಬಳಕೆ; ಬಿಡದಿ ಟೌನ್ ಶಿಪ್ ಗಾಗಿ ಭೂ ಸ್ವಾಧೀನ ಪ್ರಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಕಲಂ 17(1)ರ ಅಡಿ ಜಮೀನುಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಅಥವಾ ಆಯುಕ್ತರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರ ಪರವಾಗಿ ಪ್ರತಿನಿಧಿಸುವವರನ್ನು ತಡೆಯುವುದಾಗಲೀ, ಅಡ್ಡಿಪಡಿಸುವುದಾಗಲೀ ಮಾಡುವಂತಿಲ್ಲ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿ ಟೌನ್ ಶಿಪ್ ಗಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಡೆಸುತ್ತಿರುವ ಭೂ ಸ್ವಾಧೀನದ ವಿರುದ್ಧ ರೈತರ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ 1987ರ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆಯನ್ನು ಅಸ್ತ್ರವಾಗಿ ಬಳಕೆ ಮಾಡಿಕೊಂಡಿದೆ.

ಕೇಂದ್ರ ಸರ್ಕಾರ 2013ರಲ್ಲಿ ಜಾರಿಗೆ ತಂದ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರ, ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆ ಹಕ್ಕು ಅಧಿನಿಯಮದ ಅಡಿಯಲ್ಲಿ ಭೂ ಸ್ವಾಧೀನ ಮಾಡಿದರೆ ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ಶೇಕಡ 80ರಷ್ಟು ರೈತರ ಒಪ್ಪಿಗೆ ಬೇಕಾಗುತ್ತದೆ. ಇಲ್ಲದಿದ್ದರೆ ಕೃಷಿಕರು ನ್ಯಾಯಾಲಯದ ಮೊರೆ ಹೋಗುತ್ತಾರೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ 1987ರ ಕಾಯ್ದೆ ಅನ್ವಯ ಭೂ ಸ್ವಾಧೀನಕ್ಕೆ ಮುಂದಾಗಿದೆ.

ರಾಜ್ಯ ಸರ್ಕಾರದ ಅನುಮೋದನೆ:

ಟೌನ್ ಶಿಪ್ ಯೋಜನೆಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 17ಎಕ್ಯೂಜಿಆರ್ 2024 ದಿನಾಂಕ:10-12-2024 ರನ್ವಯ ಭೂಸ್ವಾಧೀನ ಪಾರದರ್ಶಕತೆ ಸೂಕ್ತ ಪರಿಹಾರದ ಹಕ್ಕು, ಪುನ‌ರ್ ವಸತಿ ಮತ್ತು ಪುನ‌ರ್ ನಿರ್ಮಾಣ ಕಾಯ್ದೆ 2013 ರ ಅಧ್ಯಾಯ- III(ಎ)ರ ಕಲಂ 10ಎ ರಡಿ ಸಾಮಾಜಿಕ ಅಧ್ಯಯನ ಮಾಡುವುದರಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ. ಈ ಯೋಜನೆಯ ಬಗ್ಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಕಲಂ 15(1) (ಬಿ) ರನ್ವಯ ಸರ್ಕಾರದ ಆದೇಶ ಸಂಖ್ಯೆ ನಅಇ/115/ಬಿಎಂಆರ್2024(ಇ) ಬೆಂಗಳೂರು ದಿನಾಂಕ:10-02-2025 ರಲ್ಲಿ ಸರ್ಕಾರ ಅನುಮೋದನೆ ನೀಡಿದೆ.

ಈ ಕಾಯ್ದೆ ಅಡಿಯಲ್ಲಿಯೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂ ಮಾಲೀಕರಾದ ರೈತರಿಗೆ ಭೂ ಸ್ವಾಧೀನ ಕುರಿತು ನೋಟಿಸ್ ಜಾರಿ ಮಾಡುತ್ತಿದೆ. ಇದೀಗ ರೈತರು ಭೂ ಸ್ವಾಧೀನದ ವಿರುದ್ಧ ಕಾನೂನು ಹೋರಾಟ ನಡೆಸಲೂ ಅವಕಾಶ ಇಲ್ಲದಂತಾಗಿದೆ.

ಅಧಿಸೂಚನೆಯಲ್ಲಿ ಏನಿದೆ?:

ಟೌನ್ ಶಿಪ್ ಯೋಜನೆಯ ಭೂಸ್ವಾಧೀನಕ್ಕಾಗಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಕಲಂ 17,18,19,35 ಮತ್ತು 36 ಉಪಬಂಧಗಳನ್ವಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ- 2 ಹಾಗೂ ಅವರ ಸಿಬ್ಬಂದಿಯನ್ನು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರ, ಪುನರ್ ವಸತಿ ಮತ್ತು ಪುನರ್‌ ವ್ಯವಸ್ಥೆ ಹಕ್ಕು ಅಧಿನಿಯಮ 2013ರ ಕಲಂ 20 ರಿಂದ 23 ರಡಿಯಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರ ನೀಡಲಾಗಿದೆ.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಕಲಂ 17(1)ರ ಅಡಿ ಜಮೀನುಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಅಥವಾ ಆಯುಕ್ತರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರ ಪರವಾಗಿ ಪ್ರತಿನಿಧಿಸುವವರನ್ನು ತಡೆಯುವುದಾಗಲೀ, ಅಡ್ಡಿಪಡಿಸುವುದಾಗಲೀ ಮಾಡುವಂತಿಲ್ಲ.

ಪ್ರಾಧಿಕಾರದ ಆಯುಕ್ತರ ಅನುಮತಿ ಇಲ್ಲದೇ ಸದರಿ ಜಮೀನುಗಳನ್ನು ವಿಲೇ ಮಾಡುವ, ಒಪ್ಪಂದ ಕ್ರಯ, ಕರಾರು, ಭೋಗ್ಯ ಅಡಮಾನ(ಲೀಸ್), ಅದಲು-ಬದಲು, ಭೂಪರಿವರ್ತನೆ, ವಗೈರೆ ಮಾಡಲು ಅವಕಾಶ ಇಲ್ಲ. ಸದರಿ ಜಮೀನುಗಳಲ್ಲಿ ಈ ಅಧಿಸೂಚನೆಯ ನಂತರ ಕಟ್ಟಡ ನಿರ್ಮಾಣ ಮತ್ತಿತರೆ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ ಪರಿಹಾರ ಹಣ ನಿಗದಿ ಮಾಡುವಾಗ ಅಂತಹ ವ್ಯವಹಾರದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.

ಈ ಅಧಿಸೂಚನೆಯ ಮೂಲಕ ಸದರಿ ಜಮೀನುಗಳ ಮೇಲೆ ಹಕ್ಕು/ಹಿತಾಸಕ್ತಿ ಹೊಂದಿರುವವರು ಅಹವಾಲು ಆಕ್ಷೇಪಣೆಗಳಿದ್ದಲ್ಲಿ ಖಚಿತ ದಾಖಲೆಗಳೊಂದಿಗೆ ಆಯುಕ್ತರಿಗೆ ಅಧಿಸೂಚನೆ ಹೊರಡಿಸಲಾದ 30 ದಿನಗಳೊಳಗಾಗಿ ಸ್ವತಃ ಅಥವಾ ಪ್ರತಿನಿಧಿ ಮೂಲಕ ಸಲ್ಲಿಸಬೇಕೆಂದು ಸೂಚಿಸಲಾಗಿದೆ.

ಅಧಿಸೂಚಿತ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಜನವಸತಿ ಪ್ರದೇಶಗಳು, ಅಭಿವೃದ್ಧಿ ಹೊಂದಿದ್ದ ಪ್ರದೇಶಗಳು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಯಥಾಸ್ಥಿತಿಯಂತೆ ಕಾಯ್ದಿರಿಸುವ ಕುರಿತಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುವ ಸಮಿತಿಯ ಶಿಫಾರಸ್ಸಿನ ಅನುಸಾರ ಪರಿಶೀಲಿಸಿ ತೀರ್ಮಾನಿಸಲಾಗುತ್ತದೆ.

ಆಕಾರ್ ಬಂದ್ ಹಾಗೂ ಆರ್ ಟಿಸಿ ವಿಸ್ತೀರ್ಣದ ವ್ಯತ್ಯಾಸವಿದ್ದಲ್ಲಿ ಆಕಾರ್ ಬಂದ್ ವಿಸ್ತೀರ್ಣವೇ ಅಂತಿಮವೆಂದು ಪರಿಗಣಿಸಲಾಗುತ್ತದೆ. ಭೂ ಪರಿಹಾರ, ಪುನರ್ ವಸತಿ ಯಾವುದನ್ನು ಪ್ರಶ್ನೆ ಮಾಡಲು ಅವಕಾಶ ಇಲ್ಲದೆ ರೈತರು ಭೂ ತಾಯಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿ ಸಿಲುಕಿದ್ದಾರೆ.

ರಾಜ್ಯ ಸರ್ಕಾರ 2013ರ ಭೂ ಸ್ವಾಧೀನ ಕಾಯ್ದೆ ಕೈಬಿಟ್ಟು 1987ರ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆಯನ್ನು ಜಾರಿ ಮಾಡಿ ಭೂಮಿ ವಶ ಪಡಿಸಿಕೊಳ್ಳಲು ಮುಂದಾಗಿರುವುದು ರೈತ ವಿರೋಧಿ ಎಂಬುದು ಸ್ಪಷ್ಟವಾಗಿದೆ. ಮೂರು ರಾಜಕೀಯ ಪಕ್ಷಗಳ ನಾಯಕರು ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡು ರೈತರ ಹೆಸರಿನಲ್ಲಿ ಅಧಿಕಾರ ಸ್ವೀಕಾರ ಮಾಡುತ್ತಾರೆ. ಮಣ್ಣಿನ ಮಕ್ಕಳೆಂದು ಹೇಳಿಕೊಂಡು ಕೈ ಮುಗಿದು ಅಧಿಕಾರಕ್ಕೆ ಬಂದ ಮೇಲೆ ಅದೇ ರೈತರನ್ನು ಕಾಲಿನಲ್ಲಿ ಒದೆಯುತ್ತಿದ್ದಾರೆ. ಅಲ್ಲದೆ, ನಿಜವಾದ ಮಣ್ಣಿನ ಮಕ್ಕಳನ್ನು ಮಣ್ಣು ಮಾಡುತ್ತಿದ್ದಾರೆ.

- ಅರಳಾಳಸಂದ್ರ ಕೆ. ರಾಮಯ್ಯ, ಅಧ್ಯಕ್ಷರು, ಬೈರಮಂಗಲ ಮತ್ತು ಕಂಚುಗಾರನಹಳ್ಳಿ ರೈತರ ಭೂ ಹಿತರಕ್ಷಣಾ ಸಮಿತಿ.ರಾಜ್ಯ ಸರ್ಕಾರ ಅಳೆದು ತೂಗಿ 1987ರ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ ಪ್ರಕಾರ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಇದು 2013ರ ಭೂ ಸ್ವಾಧೀನ ಕಾಯ್ದೆಯನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. ಈ ಕಾಯ್ದೆ ಅನ್ವಯ ಭೂ ಸ್ವಾಧೀನ ನಡೆದಿದ್ದರೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತರಬಹುದಾಗಿತ್ತು. ಆದರೆ, 1987ರ ಕಾಯ್ದೆ ಪ್ರಕಾರ ಅಧಿಸೂಚನೆ ಹೊರಡಿಸಿರುವುದರಿಂದ ಕೋರ್ಟಿನಲ್ಲಿ ಹಿನ್ನಡೆಯಾಗುವ ಸಾಧ್ಯತೆಗಳೇ ಹೆಚ್ಚಾಗಿದೆ. ತಕರಾರು ಅರ್ಜಿ ಸಲ್ಲಿಸಿದ್ದು, ಆನಂತರ ಕಾನೂನು ಹೋರಾಟಕ್ಕೂ ಪ್ರಯತ್ನ ಮಾಡುತ್ತೇವೆ.

- ಪ್ರಕಾಶ್ , ಮಾಜಿ ಸದಸ್ಯರು, ತಾಪಂ, ರಾಮನಗರ.