ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ತಿಂಗಳಿಗೆ ಒಂದೂವರೆಯಿಂದ ಎರಡು ಸಾವಿರ ಮಂದಿ ಬೀದಿ ನಾಯಿಗಳ ದಾಳಿಗೆ ಒಳಗಾಗುತ್ತಿದ್ದಾರೆ. ರಾತ್ರಿ ವೇಳೆ ದ್ವಿಚಕ್ರವಾಹನ ಚಾಲಕರನ್ನು ಅಟ್ಟಾಡಿಸುವ ಈ ಶ್ವಾನ ಸಂಕುಲದ ಬಗ್ಗೆ ಹಲವು ಬಡಾವಣೆಗಳಲ್ಲಿ ಭಯದ ವಾತಾವರಣವಿದೆ. ಒಂದು ಲೆಕ್ಕಾಚಾರದ ಪ್ರಕಾರ ಕಳೆದ ಐದು ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಶ್ವಾನ ದಾಳಿಗೆ ಒಳಗಾಗಿದ್ದಾರೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಾಯಿ ಕಾಟವಿದ್ದರೂ ಅದರ ಬಗ್ಗೆ ಚಕಾರವೆತ್ತದ ಬೆಂಗಳೂರು ಮಹಾನಗರ ಪಾಲಿಕೆಯು ಉತ್ತರ ಭಾರತೀಯರ ಪ್ರಭಾವಕ್ಕೆ ಸಿಲುಕಿ ಹಿಂದಿ ಸಂಸ್ಕೃತಿಯ ಕುಕುರ್ ತಿಹಾರ್ ಹೆಸರಿನಲ್ಲಿ ಶ್ವಾನ ಉತ್ಸವ ಆಯೋಜಿಸಿದ್ದು ನಾಗರಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ರಸ್ತೆ, ಪಾರ್ಕ್, ಆಟದ ಮೈದಾನ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಜನರು ನಿರ್ಭಯವಾಗಿ ಓಡಾಡುವುದು ಕಷ್ಟವಾಗಿದ್ದು, ಎಲ್ಲಿ ಯಾವಾಗ ನಾಯಿಗಳು ದಾಳಿ ನಡೆಸುತ್ತವೆ ಎಂಬ ಆತಂಕದಲ್ಲಿಯೇ ಓಡಾಡಬೇಕಿದೆ. ಕೇವಲ ನಡೆದುಕೊಂಡು ಓಡಾಡುವವರಿಗೆ ಮಾತ್ರವಲ್ಲ. ಬೈಕ್, ಸೈಕಲ್‌ನಲ್ಲಿ ಸಂಚರಿಸುವವರ ಮೇಲೆಯೂ ಬೀದಿ ನಾಯಿಗಳು ಬೆನ್ನಟ್ಟಿ ದಾಳಿ ನಡೆಸಿ ಅಪಾಯ ಉಂಟು ಮಾಡುತ್ತಿರುವ ಹಲವು ಪ್ರಕರಣ ಕಣ್ಮುಂದಿವೆ. ಕೆಲವರ ಪ್ರಾಣಕ್ಕೂ ಬೀದಿ ನಾಯಿಗಳ ಕಂಟಕ ತಂದೊಡ್ಡಿವೆ.
ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಬಿಬಿಎಂಪಿ ಅಧಿಕಾರಿಗಳು, ಬೀದಿ ನಾಯಿಗಳಿಗೆ ಆಹಾರ ನೀಡುವ ‘ಕುಕುರ್ ತಿಹಾರ್’ ಎಂಬ ಪರಭಾಷೆ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಿಕೊಂಡು ಬೆಂಗಳೂರಿನ ಜನರ ಜೀವಗಳ ಚಲ್ಲಾಟವಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತವಾಗಿದೆ.
ಐದು ವರ್ಷದಲ್ಲಿ 1 ಲಕ್ಷ ಮಂದಿಯ ಮೇಲೆ ದಾಳಿ
ಬಿಬಿಎಂಪಿಯ ವ್ಯಾಪ್ತಿಯಲ್ಲಿ 2020-21ರಿಂದ 2024-25ನೇ ಸಾಲಿನ ಸೆಪ್ಟಂಬರ್ ಅಂತ್ಯದ ವರೆಗೆ ಬರೋಬ್ಬರಿ 1.01 ಲಕ್ಷ ಮಂದಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಇನ್ನು ಪ್ರಸಕ್ತ 2024-25ನೇ ಸಾಲಿನಲ್ಲಿಯೇ ಜನವರಿಯಿಂದ ಸೆಪ್ಟಂಬರ್‌ವರೆಗೆ ಬರೋಬ್ಬರಿ 20,800 ನಾಯಿ ಕಡಿತ ಪ್ರಕರಣ ಕಂಡು ಬಂದಿವೆ. ಈ ಪೈಕಿ ಪೂರ್ವ ಮತ್ತು ಪಶ್ಚಿಮ ವಲಯದ ವಾರ್ಡ್‌ಗಳಲ್ಲಿಯೇ ಹೆಚ್ಚಾಗಿ ದಾಳಿ ಕಂಡು ಬಂದಿವೆ. ಪಶ್ಚಿಮ ವಲಯದಲ್ಲಿ ಈವರೆಗೆ 4,247 ಹಾಗೂ ಪೂರ್ವದಲ್ಲಿ 2,486 ಬೀದಿ ನಾಯಿಗಳು ಕಡಿತ ಉಂಟಾಗಿದೆ.
ಉಳಿದಂತೆ ಮಹದೇವಪುರದಲ್ಲಿ 1704, ರಾಜರಾಜೇಶ್ವರಿನಗರದಲ್ಲಿ 1682, ದಕ್ಷಿಣದಲ್ಲಿ 1538, ಬೊಮ್ಮನಹಳ್ಳಿಯಲ್ಲಿ 973, ಯಲಹಂಕದಲ್ಲಿ 741 ಹಾಗೂ ದಾಸರಹಳ್ಳಿಯಲ್ಲಿ 631 ಬೀದಿ ನಾಯಿಗಳ ದಾಳಿ ಆಗಿದೆ.
ಸಾಕು ನಾಯಿಗಳಿಂದಲೂ ದಾಳಿ
ಬೀದಿ ನಾಯಿಗಳೊಂದಿಗೆ ಸಹಭಾಳ್ವೆಯಿಂದ ದಾಳಿ ಕಡಿಮೆ ಮಾಡಬಹುದೆಂಬ ಮೊಂಡ ವಾದವಿಟ್ಟುಕೊಂಡು ಕುಕುರ್ ತಿಹಾರ್ ಕಾರ್ಯಕ್ರಮವನ್ನು ಬಿಬಿಎಂಪಿ ಅಧಿಕಾರಿಗಳು ರೂಪಿಸಿಕೊಂಡಿದ್ದಾರೆ. ಆದರೆ, ಕಳೆದ ಜನವರಿಯಿಂದ ಸೆಪ್ಟಂಬರ್ ಅವಧಿಯ 9 ತಿಂಗಳಿನಲ್ಲಿ ನಗರದಲ್ಲಿ ಸಾಕು ನಾಯಿಗಳಿಂದ 6,798 ಮಂದಿ ಕಚ್ಚಿಸಿಕೊಂಡಿದ್ದಾರೆ. ಈ ಪೈಕಿ ಪಶ್ಚಿಮ ವಲಯದಲ್ಲಿ 2,062 ಸಾಕು ನಾಯಿಗಳಿಂದ ದಾಳಿ ಆಗಿವೆ. ಪೂರ್ವದಲ್ಲಿ 1,195, ಆರ್.ಆರ್.ನಗರದಲ್ಲಿ 954, ಮಹದೇವಪುರದಲ್ಲಿ 803, ದಕ್ಷಿಣದಲ್ಲಿ 599, ಬೊಮ್ಮನಹಳ್ಳಿಯಲ್ಲಿ 436, ಯಲಹಂಕದಲ್ಲಿ 430 ಹಾಗೂ ದಾಸರಹಳ್ಳಿಯಲ್ಲಿ 319 ಸಾಕು ನಾಯಿಗಳಿಂದ ದಾಳಿ ಆಗಿವೆ.
2 ವರ್ಷದಲ್ಲಿ ಕೇವಲ 20 ಮಂದಿಗೆ ಪರಿಹಾರ
ಬೀದಿ ನಾಯಿಗೆ ದಾಳಿಗೆ ಒಳಗಾದವರಿಗೆ ಬಿಬಿಎಂಪಿಯಿಂದ ಪರಿಹಾರ ನೀಡಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ. ಆದರೆ, ಈ ಬಗ್ಗೆ ಬಿಬಿಎಂಪಿಯ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಿಲ್ಲ. ಹಾಗಾಗಿ, ಕಳೆದ ಎರಡು ವರ್ಷದಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದರೂ ಈವರೆಗೆ ಕೇವಲ 20 ಮಂದಿಗೆ ಮಾತ್ರ ಬಿಬಿಎಂಪಿಯಿಂದ ಪರಿಹಾರ ನೀಡಲಾಗಿದೆ. 2023-24ನೇ ಸಾಲಿನಲ್ಲಿ 12 ಮಂದಿಗೆ ಒಟ್ಟಾರೆ ₹1.52 ಲಕ್ಷ ಪರಿಹಾರ ನೀಡಲಾಗಿದೆ. 2024-25ರ ಸೆಪ್ಟಂಬರ್‌ವರೆಗೆ 8 ಮಂದಿಗೆ ಒಟ್ಟರೆ ₹1.17 ಲಕ್ಷ ಪರಿಹಾರ ನೀಡಲಾಗಿದೆ.
₹1 ಲಕ್ಷವರೆಗೆ ಪರಿಹಾರನಾಯಿ ಕಡಿತದಿಂದ ತರಚಿದ ಗಾಯವಾದರೆ ಪ್ರತಿ ಗಾಯಕ್ಕೆ ತಲಾ ₹2 ಸಾವಿರ, ಆಳವಾದ ಗಾಯವಾದರೆ ತಲಾ ₹3 ಸಾವಿರ, ಗಾಯಗಳ ಸಂಖ್ಯೆ ಹೆಚ್ಚಾಗಿದ್ದರೆ ₹10 ಸಾವಿರ ಹಾಗೂ ಬಿಬಿಎಂಪಿಯಿಂದ ವೈದ್ಯಕೀಯ ಚಿಕಿತ್ಸೆ ವೆಚ್ಚ ಭರಿಸುವುದಕ್ಕೆ ಅವಕಾಶವಿದೆ. ಒಂದು ವೇಳೆ ನಾಯಿ ದಾಳಿಯಿಂದ ಮಕ್ಕಳು ಮೃತಪಟ್ಟರೆ ₹50 ಸಾವಿರ, ವಯಸ್ಕರರು ಮೃತಪಟ್ಟರೆ ₹1 ಲಕ್ಷ ಪರಿಹಾರ ನೀಡುವುದಕ್ಕೆ ಅವಕಾಶವಿದೆ.ಬೀದಿ ನಾಯಿಗಳ ಕಾಟ ಮಿತಿ ಮೀರಿದೆ. ಬೀದಿಗಳಲ್ಲಿ ಮಕ್ಕಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ಮತ್ತೊಂದೆಡೆ ಉದ್ಯಾನಗಳಲ್ಲಿ ವಾಕಿಂಗ್, ಜಾಗಿಂಗ್ ಮಾಡುವಲ್ಲಿ ಯತೇಚ್ಛವಾಗಿ ನಾಯಿಗಳು ಇರುತ್ತವೆ. ಓಡುವಾಗ ಅಚಾನಕ್ಕಾಗಿ ಕಚ್ಚಿ ಗಾಯಗೊಳಿಸುತ್ತಿವೆ. ಪಾರ್ಕುಗಳಿಗೆ ವಾಕಿಂಗ್ ಬರುವ ಕೆಲವರು ರಾತ್ರಿ ಉಳಿದ ಆಹಾರ ಹಾಕುತ್ತಿರುವುದರಿಂದ ಈ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಂಗಳು ಊಟ ಹಾಕಿ ಪುಕ್ಕಟೆ ನಾಯಿ ಪ್ರೀತಿ ತೋರುವವರಿಂದ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಬೇಕಿದೆ.
-ರಾಜಶೇಖರ, ಅಮೃತಹಳ್ಳಿ ನಿವಾಸಿ. ನಗರದಲ್ಲಿರುವ ಪರಭಾಷಿಗರ ಮೇಲಿನ ಪ್ರೀತಿಗೆ ಬಿಬಿಎಂಪಿಯ ಅಧಿಕಾರಿಗಳು ಕುಕುರ್ ತಿಹಾರ್ ಹೆಸರಿನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಕಾರ್ಯಕ್ರಮ ಮಾಡಿದ್ದಾರೆ. ಆದರೆ, ಬೀದಿ ನಾಯಿಗಳ ಮೇಲೆ ತೋರುವ ಕಾಳಜಿಯ ಒಂದು ಪಾಲನ್ನು ಅವುಗಳಿಂದ ಸಂಕಷ್ಟಕ್ಕೆ ಒಳಗಾದವರಿಗೆ ತೋರಿಸಿದರೆ ಹೆಚ್ಚು ಅನುಕೂಲವಾಗಲಿದೆ. ಬೀದಿ ನಾಯಿಗಳಿಗೆ ಆಹಾರ ನೀಡುವ ಈ ಕಾರ್ಯಕ್ರಮದ ಹಿಂದೆ ಸಂಘಟಿತ ಹುನ್ನಾರವಿದೆ.
ಎಸ್.ಕೆ.ಮಂಜುನಾಥ್, ಬನಶಂಕರಿ ನಿವಾಸಿ.