ಸಾರಾಂಶ
ಕೇಶವ ಕುಲಕರ್ಣಿ
ಕನ್ನಡಪ್ರಭ ವಾರ್ತೆ ಜಮಖಂಡಿಸರ್ಕಾರದ ನಿಯಮಾವಳಿಗಳ ಪ್ರಕಾರ ಸಿ ದರ್ಜೆ ನೌಕರರಿಗೆ ಸ್ಥಳ ನಿಯುಕ್ತಿಗೊಳಿಸದೆ ವರ್ಗಾಯಿಸುವಂತಿಲ್ಲ. ಆದಾಗ್ಯೂ ನಿಯಮ ಗಾಳಿಗೆ ತೂರಿದ ಶಿಕ್ಷಣ ಇಲಾಖೆ 55 ಜನ ಪ್ರೌಢಶಾಲೆಯ ಸಹ ಶಿಕ್ಷಕರನ್ನು ಬೋಧಕೇತರ ಹುದ್ದೆಗೆ ವರ್ಗಾಯಿಸಿ ಆದೇಶಿಸಿತ್ತು. ಈ ಪೈಕಿ ರಾಜ್ಯದ 22 ಜನ ಶಿಕ್ಷಕರಿಗೆ ಸ್ಥಳ ನಿಯುಕ್ತಿಗೊಳಿಸಿಲ್ಲ. ಎರಡು ತಿಂಗಳು ಕಳೆದರೂ ಸಂಬಳ ಹಾಗೂ ಸ್ಥಳ ನಿಯುಕ್ತಿ ಇಲ್ಲದೆ ಶಿಕ್ಷಕರು ಪ್ರತಿನಿತ್ಯ ಆಯುಕ್ತರ ಕಚೇರಿಗಳಿಗೆ ಅಲೆಯುತ್ತಿದ್ದಾರೆ.
ಸರ್ಕಾರದ ಆದೇಶ ಸಂಖ್ಯೆ ಇಪಿ 284 ಎಸ್‌ಇಎಸ್ 2025 ಆಗಸ್ಟ್ 22ರಂತೆ 55 ಜನ ಪ್ರೌಢಶಾಲಾ ಸಹ ಶಿಕ್ಷಕರನ್ನು ಬೋಧಕೇತರ ಹುದ್ದೆಗೆ ವರ್ಗಾಯಿಸಿ ಆದೇಶಿಸಲಾಗಿತ್ತು. ಬೋಧಕೇತರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರಿಗೆ ಸ್ಥಳ ನಿಯುಕ್ತಿಗಾಗಿ ಸಂಬಂಧಪಟ್ಟ ಆಯುಕ್ತರು ಹಾಗೂ ಅಪರ ಆಯುಕ್ತರ ಕಚೇರಿಗೆ ಹಾಜರಾಗಲು ಆದೇಶಿಸಲಾಗಿತ್ತು. ಆಯುಕ್ತರ ಕಚೇರಿಯವರು ಆಗಸ್ಟ್ 21ರಂದು ಚಾಲನಾ ಆದೇಶ ನೀಡಿ ಕೈತೊಳೆದುಕೊಂಡಿದ್ದಾರೆ. ಆಗಸ್ಟ್ 22 ರಂದು ಕಚೇರಿಗೆ ಹಾಜರಾದ ಶಿಕ್ಷಕರಿಗೆ ಈವರೆಗೂ ಸ್ಥಳ ನಿಯುಕ್ತಿಗೊಳಿಸಿಲ್ಲ. ಶಿಕ್ಷಣ ಇಲಾಖೆ ವಿಳಂಬ ಧೋರಣೆ:ಶಿಕ್ಷಕರ ಸಾಮಾನ್ಯ ವರ್ಗಾವಣೆ, ಹೆಚ್ಚುವರಿ ಮತ್ತು ಮರು ಹೊಂದಾಣಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಸ್ಥಳ ನಿಯುಕ್ತಿಗೊಳಿಸುವುದಾಗಿ ಆಯುಕ್ತರ ಕಚೇರಿಯಿಂದ ಮಾಹಿತಿ ನೀಡಲಾಗಿದೆ. ಈ ಪ್ರಕ್ರಿಯೆ ಸೆಪ್ಟೆಂಬರ್ 18ರಂದು ಪೂರ್ಣಗೊಂಡಿದೆ. ಗಣತಿ ಕಾರ್ಯದಿಂದಾಗಿ ವರ್ಗಾವಣೆ ವೇಳಾಪಟ್ಟಿ ಮುಂದೂಡಲಾಗಿದೆ. ಹೀಗಿದ್ದರೂ ಸ್ಥಳ ನಿಯುಕ್ತಿಗಾಗಿ ಹಾಜರಾದ ಶಿಕ್ಷಕರಿಗೆ ಸ್ಥಳ ನಿಯುಕ್ತಿಗೊಳಿಸದೆ ಶಿಕ್ಷಣ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಇದರಿಂದಾಗಿ ಬೆಂಗಳೂರು ವಿಭಾಗದಲ್ಲಿ 14, ಬೆಳಗಾವಿ ವಿಭಾಗದಲ್ಲಿ 7, ಕಲಬುರಗಿ ವಿಭಾಗದ ಒಬ್ಬ ಶಿಕ್ಷಕರು ಸೇರಿ ಒಟ್ಟು 22 ಜನ ಸಹ ಶಿಕ್ಷಕರು ಸ್ಥಳ ನಿಯುಕ್ತಿಗಾಗಿ ಪ್ರತಿನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ. ಒಂದು ಕಡೆ ಶಿಕ್ಷಕರ ಕೊರತೆ ಮತ್ತು ಎಸ್ಸೆಸೆಲ್ಸಿ ಫಲಿತಾಂಶ ಕಡಿಮೆಯಾಗುತ್ತಿದ್ದರೆ, ಇತ್ತ ಶಿಕ್ಷಕರಿದ್ದರೂ ಸ್ಥಳ ನಿಯುಕ್ತಿ ಇಲ್ಲದೆ ಇಲಾಖೆಯ ಆಯುಕ್ತರ ಕಚೇರಿಗೆ ಅಲೆದಾಡುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಬಡ ಹಾಗೂ ರೈತ ಕುಟುಂಬದಿಂದ ಬಂದವರಾದ ನಾವು ಕಷ್ಟಪಟ್ಟು ಸರ್ಕಾರಿ ನೌಕರಿ ಸಂಪಾದಿಸಿದ್ದೇವೆ. ನಮ್ಮ ಗ್ರಾಮಗಳನ್ನು ಬಿಟ್ಟು ಶಹರಗಳಲ್ಲಿ ಬಾಡಿಗೆ ಮನೆ ಪಡೆದು ನೌಕರಿ ಮಾಡುತ್ತಿದ್ದೇವೆ. ಸ್ಥಳ ನಿಯುಕ್ತಿ ಇಲ್ಲದೇ ಎರಡು ತಿಂಗಳ ಸಂಬಳವೂ ಇಲ್ಲದೇ ಮನೆ ಸಂಸಾರ ಕಠಿಣವಾಗಿದೆ. ಮೇಲಾಗಿ ಆಯುಕ್ತರ ಕಚೇರಿಗೆ ಅಲೆದಾಟ ನಡೆಸುತ್ತಿದ್ದು ಹಿರಿಯ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು ಎಂದು ಮನವಿ ಮಾಡುತ್ತೇವೆ.- ಹೆಸರು ಹೇಳಲು ಇಚ್ಛಿಸದ ಶಿಕ್ಷಕ