ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಕಾರ್ಯ ಶ್ಲಾಘನೀಯ:ರಮೇಶ ಚವ್ಹಾಣ

| Published : Oct 17 2025, 01:04 AM IST

ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಕಾರ್ಯ ಶ್ಲಾಘನೀಯ:ರಮೇಶ ಚವ್ಹಾಣ
Share this Article
  • FB
  • TW
  • Linkdin
  • Email

ಸಾರಾಂಶ

ಬೀಳಗಿಯ ಹೋಲಿಸೆಂಟ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿಜ್ಞಾನ ಪಿಯು ಕಾಲೇಜು ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹೋಲಿಸೆಂಟ್ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿದ್ದ ಎಂಬಿಬಿಎಸ್ ಹಾಗೂ ಬಿಇ ಇತರೆ ಉನ್ನತ ಕೋರ್ಸ್ ಗಳಿಗೆ ಆಯ್ಕೆಯಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು.

ಕನ್ನಡಪ್ರಭ ವಾರ್ತೆ ಬೀಳಗಿ

ಜಿಲ್ಲೆಯಲ್ಲಿ ಹತ್ತು ವರ್ಷಗಳಿಂದ ನಾಲ್ಕು ಖಾಸಗಿ ಶಾಲೆಗಳನ್ನು ಪ್ರತಿಷ್ಠಿತ ಶಾಲೆಗಳಾಗಿ ಸರ್ಕಾರ ಘೋಷಣೆ ಮಾಡಿತ್ತು. ಅಂತಹ ಪ್ರತಿಷ್ಠಿತ ಶಾಲೆಯಲ್ಲಿ ಕಲಿತ ಮಕ್ಕಳಿಗೆ ಉತ್ತಮ ಭವಿಷ್ಯ ಸಿಗುವಂತೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಮೇಶ ಚವ್ಹಾಣ ತಿಳಿಸಿದರು.

ಇಲ್ಲಿನ ಹೋಲಿಸೆಂಟ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿಜ್ಞಾನ ಪಿಯು ಕಾಲೇಜು ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹೋಲಿಸೆಂಟ್ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿದ್ದ ಎಂಬಿಬಿಎಸ್ ಹಾಗೂ ಬಿಇ ಇತರೆ ಉನ್ನತ ಕೋರ್ಸ್ ಗಳಿಗೆ ಆಯ್ಕೆಯಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯ್ಕೆಯಾದ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ನೇಮಕ ಮಾಡಲಾಗುವುದು, ಮಕ್ಕಳ ವರ್ಷದ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಇಲಾಖೆ ಭರಿಸಲಿದ್ದು, ವೆಚ್ಚವನ್ನು ₹೫೦ ಸಾವಿರದಿಂದ ₹೭೫ ಸಾವಿರಕ್ಕೆ ಹೆಚ್ಚಳ ಮಾಡಿದ್ದು, ಪ. ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳು ಎಂಬಿಬಿಎಸ್ ಹಾಗೂ ಇತರೆ ಉನ್ನತ ಕೋರ್ಸ್ ಗಳಿಗೆ ಸರ್ಕಾರಿ ಸೀಟು ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಿದೆ ಎಂದ ಅವರು, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳಿದ್ದು, ಅವುಗಳನ್ನು ಸದುಪಯೋಗ ಮಾಡಿಕೊಂಡು ಸದೃಢ ಬದುಕು ಸಾಗಿಸಬೇಕು ಎಂದು ಹೇಳಿದರು.

ಹೋಲಿ ಸೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಎಂ. ಸೋಲಾಪುರ ಮಾತನಾಡಿ, ಮಕ್ಕಳಿಗೆ ಅಂಕಗಳಿಗೆ ಮಾತ್ರ ಶಿಕ್ಷಣ ನೀಡದೇ ಗುಣಮಟ್ಟದ ಶಿಕ್ಷಣ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಮಕ್ಕಳು ಭಾಗವಹಿಸಿ ಎಲ್ಲ ರಂಗದಲ್ಲೂ ಮಕ್ಕಳು ಮುಂದೆ ಬರುವಂತೆ ಮಾಡಲಾಗುತ್ತಿದೆ. ಈ ಸಂಸ್ಥೆ ಕಳೆದ ಮೂರು ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ತಾಲೂಕಿಗೆ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಪಪಂ ಸದಸ್ಯರಾದ ಬಸವರಾಜ ಹಳ್ಳದಮನಿ, ಪುರಸ್ಕಾರ ಪಡೆದ ಮಕ್ಕಳು ಮಾತನಾಡಿದರು. ಪಪಂ ಸದಸ್ಯರಾದ ಸಿದ್ದು ಸಾರಾವರಿ, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಸೋಮನಗೌಡ ಪಾಟೀಲ, ಬಸವರಾಜ ಸೊಕನಾದಗಿ, ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್. ಗಡ್ಡದೇವರಮಠ, ಕಾರ್ಯದರ್ಶಿ ಎ.ಎ. ಸೋಲಾಪುರ, ಪ್ರಾಂಶುಪಾಲರಾದ ಭಾರತಿ ಬಿಕ್ಷಾವತಿಮಠ ಸೇರಿದಂತೆ ಇತರರು ಇದ್ದರು.