ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬರೋಬ್ಬರಿ 2744 ಆಸ್ತಿಗಳನ್ನು ಲೀಸ್ ಮೇಲೆ ಕೊಡಲಾಗಿದೆ. ಎಲ್ಲ ಆಸ್ತಿ ಸೇರಿಸಿದರೆ 255 ಎಕರೆಗೂ ಹೆಚ್ಚು ಜಾಗೆ ಆಗುತ್ತದೆ. ಕಳೆದ 11 ವರ್ಷಗಳಿಂದ ಈ ಆಸ್ತಿಗಳಿಗೆ ತೆರಿಗೆ ಕೂಡ ಹಾಕಿಲ್ಲ..!
ಪಾಲಿಕೆಯ ಆಸ್ತಿಗಳನ್ನು ದಶಕಗಳ ಹಿಂದೆಯೇ ಲೀಸ್ ಕೊಡಲಾಗಿದೆ. ಇಷ್ಟೊಂದು ಆಸ್ತಿ ಇದ್ದರೂ ಪಾಲಿಕೆಯ ದುಡ್ಡಿಗಾಗಿ ಪರದಾಡುವುದು ತಪ್ಪುತ್ತಿಲ್ಲ. ಹೀಗಾಗಿ ತನ್ನ ಆದಾಯ ಕ್ರೋಡೀಕರಣದ ಉದ್ದೇಶದಿಂದ ಇದೀಗ ಲೀಸ್ ಕೊಟ್ಟಂತಹ ಆಸ್ತಿಗಳ ಸಮೀಕ್ಷೆ ಮಾಡಲಾಗುತ್ತಿದೆ.
ಲೀಸ್ ಕೊಟ್ಟಿದ್ದು ಹೇಗೆ?
2013ರ ಮುಂಚೆ ತನ್ನ ಆಸ್ತಿಗಳನ್ನು ಲೀಸ್ ಕೊಡುವ ಅಧಿಕಾರ ಪಾಲಿಕೆಗೆ ಇತ್ತು. ಸಾಮಾನ್ಯಸಭೆ, ಸ್ಥಾಯಿ ಸಮಿತಿ ಸಭೆಗಳಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬಹುದಿತ್ತು. ದಶಕಗಳಿಂದಲೂ ಇದೇ ಪದ್ಧತಿ ಇತ್ತು. ಹೀಗಾಗಿ ಹಲವಾರು ದಶಕಗಳಿಂದಲೇ ಅಂದರೆ ಪುರಸಭೆ, ನಗರಸಭೆ ಇದ್ದಾಗಿನಿಂದಲೂ ಪಾಲಿಕೆಯೂ ತನ್ನ ಆಸ್ತಿಗಳನ್ನು ಆಗಾಗ ಲೀಸ್ ಮೇಲೆ ಕೊಡುತ್ತಲೇ ಬಂದಿತು.
ಎಷ್ಟು ಆಸ್ತಿ:
50 ಚದರಡಿಯ ಆಸ್ತಿಯಿಂದ ಹಿಡಿದು ಹತ್ತಾರು ಗುಂಟೆಗಳ ಆಸ್ತಿಗಳವರೆಗೂ ಲೀಸ್ ಮೇಲೆ ಕೊಡಲಾಗಿದೆ. ಪಾಲಿಕೆಯ 12 ವಲಯಗಳಲ್ಲಿ ಲೆಕ್ಕ ಹಾಕಿದರೆ ಬರೋಬ್ಬರಿ 2744 ಆಸ್ತಿಗಳನ್ನು ಲೀಸ್ ಮೇಲೆ ಕೊಡಲಾಗಿದೆ. ಎಲ್ಲ ಆಸ್ತಿ ಲೆಕ್ಕ ಹಾಕಿದರೆ 255 ಎಕರೆಯಷ್ಟು ಜಾಗೆ ಆಗುತ್ತದೆ ಎಂದು ಅಂದಾಜಿಸಲಾಗುತ್ತಿದೆ.
ಇವುಗಳಲ್ಲಿ ಕೆಲವೊಂದಿಷ್ಟು ಆಸ್ತಿ ಸರ್ಕಾರದ ವಿವಿಧ ಇಲಾಖೆಗಳ ಪಾಲಾಗಿದ್ದರೆ, ಕೆಲವೊಂದಿಷ್ಟು ಮಠ-ಮಂದಿರ, ಸಮುದಾಯ ಭವನಕ್ಕೆ ಹೋಗಿವೆ. ಕೆಲವೊಂದಿಷ್ಟನ್ನು ರೆಸಿಡೆನ್ಸಿಯಲ್, ವಾಣಿಜ್ಯ ಉಪಯೋಗಕ್ಕೆ ಬೇರೆ ಬೇರೆಯವರಿಗೆ ಲೀಸ್ ಮೇಲೆ ಕೊಡಲಾಗಿದೆ. ಪ್ರಭಾವಿಗಳು ತಮ್ಮ ಪ್ರಭಾವ ಬಳಸಿಕೊಂಡು ತಾವೇ ಲೀಸ್ ಪಡೆದುಕೊಂಡು ಪಾಲಿಕೆ ಆಸ್ತಿಯನ್ನು ಅನುಭವಿಸುತ್ತಿರುವ ಉದಾಹರಣೆಗಳು ಸಾಕಷ್ಟಿವೆ.
ಇನ್ನು 1, 2, 50, 99, 200, 999 ಹೀಗೆ ತಮ್ಮ ತಮ್ಮ ಪ್ರಭಾವದಿಂದ ಎಷ್ಟೆಷ್ಟು ವರ್ಷ ಬೇಕೋ ಅಷ್ಟಷ್ಟು ವರ್ಷ ಲೀಸ್ ಪಡೆದುಕೊಂಡಿದ್ದಾರೆ. ಲೀಸ್ ಅವಧಿ ಮುಕ್ತಾಯವಾದ ಬಳಿಕ ಆಗಾಗ ನವೀಕರಣ ಕೂಡ ಮಾಡಿಕೊಟ್ಟಿದ್ದುಂಟು.
ಇದೀಗ ಏನಿದೆ ಪರಿಸ್ಥಿತಿ?
2013ರ ವರೆಗೂ ಇದೇ ರೀತಿ ಆಗುತ್ತಿತ್ತು. ತದನಂತರ ಸರ್ಕಾರ ನಿಮ್ಮ ಯಾವುದೇ ಆಸ್ತಿಯನ್ನು ಲೀಸ್ ಮೇಲೆ ಯಾರಿಗೂ ಕೊಡುವಂತಿಲ್ಲ. ಅವುಗಳನ್ನು ಮಾರಾಟ ಮಾಡಬೇಕಿದ್ದರೆ, ಲೀಸ್ ಮಾಡಬೇಕಿದ್ದರೆ ಅದಕ್ಕೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ಆದೇಶಿಸಿತು. ಆಗಿನಿಂದಲೂ ಯಾವ ಆಸ್ತಿಯನ್ನೂ ಲೀಸ್ ನೀಡಿಲ್ಲ. ಜತೆಗೆ ಲೀಸ್ ನೀಡಿದಂತಹ ಆಸ್ತಿಗಳಿಂದ ತೆರಿಗೆ ಕೂಡ ವಸೂಲಿ ಮಾಡಿಲ್ಲ. ಹೀಗಾಗಿ 11 ವರ್ಷದಿಂದ ಈ ಲೀಸ್ ಕೊಟ್ಟಂತಹ ಆಸ್ತಿಗಳಿಂದ ಕರ ಆಕರಿಸಿಲ್ಲ. ಆದರೆ ಈ ಆಸ್ತಿಗಳಿಂದ 2013ರ ಮುಂಚೆ ₹ 2.95 ಕೋಟಿ ತೆರಿಗೆ ಬರಬೇಕಿದೆ. ಅದನ್ನಷ್ಟೇ ವಸೂಲಿ ಮಾಡಲು ಪಾಲಿಕೆ ಹರಸಾಹಸ ಪಡುತ್ತಿದೆ. 11 ವರ್ಷವಾದರೂ ಹಿಂದಿನ ತೆರಿಗೆಯನ್ನೂ ವಸೂಲಿ ಮಾಡಲು ಪಾಲಿಕೆ ಆಗುತ್ತಿಲ್ಲ ಎಂಬುದು ವಿಪರ್ಯಾಸ.
ಸಮೀಕ್ಷೆ: ಇದೀಗ ಲೀಸ್ ಕೊಟ್ಟಿರುವ ಪಾಲಿಕೆಯ ಆಸ್ತಿಗಳೆಷ್ಟು? ಯಾರ್‍ಯಾರಿಗೆ, ಎಷ್ಟೆಷ್ಟು ಲೀಸ್ ಕೊಡಲಾಗಿದೆ. ಆಸ್ತಿಗಳ ಈಗಿನ ಮೌಲ್ಯವೆಷ್ಟು? ಇವುಗಳನ್ನು ಪಾಲಿಕೆ ಹಿಂಪಡೆಯಲು ಸಾಧ್ಯವೇ? ಈ ಆಸ್ತಿಗಳಿಂದ ಆದಾಯ ಹೆಚ್ಚಿಸಿಕೊಳ್ಳಬಹುದೆಂದರೆ ಏನು ಮಾಡಬೇಕು ಎಂಬುದನ್ನು ಪತ್ತೆ ಹಚ್ಚಲು ಇದೀಗ 1 ತಿಂಗಳಿಂದ ಸಮೀಕ್ಷೆ ನಡೆಸಲಾಗುತ್ತಿದೆ.
2744 ಆಸ್ತಿಗಳ ಪೈಕಿ 1649 ಆಸ್ತಿಗಳ ಸಮೀಕ್ಷೆ ಪೂರ್ಣವಾಗಿದೆ. ಇನ್ನು 1095 ಆಸ್ತಿಗಳ ಸಮೀಕ್ಷೆ ನಡೆಸುವುದು ಬಾಕಿಯಿದೆ. ಇದಕ್ಕೆ ಮೂಲ ದಾಖಲೆಗಳ ಕೊರತೆಯೂ ಕಾಡುತ್ತಿದೆ. ಬಿಲ್ ಕಲೆಕ್ಟರ್, ವಲಯ ಕಚೇರಿಗಳಲ್ಲಿ ಕಂದಾಯ ನಿರೀಕ್ಷಕರು, ಸಿಟಿ ಸರ್ವೆ ಸಿಬ್ಬಂದಿಗಳ ನೆರವಿನಿಂದ ದಾಖಲೆಗಳ ಶೋಧ, ಆಸ್ತಿಗಳ ಹುಡುಕಾಟ ಪಾಲಿಕೆ ಮಾಡುತ್ತಿದೆ.
ಇನ್ನೊಂದು ತಿಂಗಳೊಳಗೆ ಸಮೀಕ್ಷೆ ಪೂರ್ಣಗೊಳ್ಳಲಿದ್ದು, ತದನಂತರ ಆಸ್ತಿ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಿದೆ. ಈ ಮೂಲಕ ಲೀಸ್ ಆಸ್ತಿಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಇರಾದೆ ಪಾಲಿಕೆಯದ್ದು, ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಪಾಲಿಕೆಯ 2744 ಆಸ್ತಿಗಳನ್ನು ದಶಕಗಳ ಹಿಂದೆಯೇ ಲೀಸ್ ಮೇಲೆ ಕೊಡಲಾಗಿದೆ. ಇದೀಗ ಸಮೀಕ್ಷೆ ನಡೆಸಲಾಗುತ್ತಿದೆ. 2013ರಿಂದ ಸರ್ಕಾರದ ನಿರ್ದೇಶನದಂತೆ ಇವುಗಳಿಗೆ ತೆರಿಗೆ ಹಾಕಿಲ್ಲ. ಇನ್ನೊಂದು ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದೆ. ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ (ಕಂದಾಯ) ವಿಶ್ವನಾಥ ಹೇಳಿದರು.