ಶಿಕಾರಿಪುರದಲ್ಲಿ 3750 ಹೆಕ್ಟೇರ್ ಮೆಕ್ಕೆಜೋಳ ಬೆಳೆ ಹಾನಿ

| Published : Oct 23 2024, 12:55 AM IST

ಶಿಕಾರಿಪುರದಲ್ಲಿ 3750 ಹೆಕ್ಟೇರ್ ಮೆಕ್ಕೆಜೋಳ ಬೆಳೆ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅಂದಾಜು 19500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಮತ್ತು 10500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಜುಲೈ ತಿಂಗಳು ಸುರಿದ ಸತತ ಮಳೆಯಿಂದಾಗಿ ಅಂದಾಜು 3750 ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ ಎಂದು ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಕಿರಣ್‌ ಕುಮಾರ್‌ ಹರ್ತಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅಂದಾಜು 19500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಮತ್ತು 10500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಜುಲೈ ತಿಂಗಳು ಸುರಿದ ಸತತ ಮಳೆಯಿಂದಾಗಿ ಅಂದಾಜು 3750 ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ ಎಂದು ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಕಿರಣ್‌ ಕುಮಾರ್‌ ಹರ್ತಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರಸ್ತುತ ಮೆಕ್ಕೆಜೋಳ ಕಟಾವಿಗೆ ಬಂದಿದ್ದು, ಭತ್ತದ ಬೆಳೆಯು ತೆನೆ ಬರುವ ಹಂತದಿಂದ ಹೂವಾಡುವ ಹಂತದಲ್ಲಿದೆ. ಅಕ್ಟೋಬರ್ ನಿಂದ ಇದುವರೆಗೆ ವಾಡಿಕೆ 254 ಮಿ.ಮೀ. ಮಳೆಯಾಗಿದೆ. ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದೆ. ಕಳೆದ ವಾರದಲ್ಲಿಯೇ 96 ಮಿ.ಮೀ. ಮಳೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇನ್ನು 3-4 ದಿನ ಇದೇ ರೀತಿ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಇದರಿಂದಾಗಿ ಮೆಕ್ಕೆಜೋಳದ ತೆನೆ ಹಸಿಯಾಗಿರುವುದರಿಂದ ಕಟಾವು ಮಾಡಲು ಹಾಗೂ ಒಣಗಿಸಲು ತೊಂದರೆಯಾಗುತ್ತದೆ. ಅಂದಾಜು 12000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಕಟಾವಿಗೆ ಬಂದಿದ್ದು, ಮಳೆಯ ಕಾರಣದಿಂದ ಕಟಾವು ಸಾಧ್ಯವಾಗದೇ ತೆನೆಯಲ್ಲಿಯೇ ಕಾಳುಗಳು ಮೊಳಕೆ ಬರುವ ಎಲ್ಲಾ ಲಕ್ಷಣಗಳು ಕಂಡುಬಂದಿದೆ. ಇದರಿಂದ ಮೆಕ್ಕೆಜೋಳ ಬೆಳೆದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು. ಬೆಳೆ ವಿಮೆ ಮಾಡಿಸಿದ ರೈತರು ಅತಿಯಾದ ಮಳೆಯಿಂದಾಗಿ ಮೆಕ್ಕೆಜೋಳ ಅಥವಾ ಭತ್ತದ ಬೆಳೆ ಹಾನಿಯಾಗಿದ್ದಲ್ಲಿ ಒರಿಯಂಟಲ್ ಇನ್ಸುರೆನ್ಸ್ ವಿಮಾ ಸಂಸ್ಥೆಯಲ್ಲಿ ವೈಯಕ್ತಿಕ ಬೆಳೆ ಹಾನಿಗೆ ಪರಿಹಾರ ಕೋರಿ ಇನ್ನೆರಡು ದಿನದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಹಿಂದೆ ಜುಲೈ ಮಾಹೆಯಲ್ಲಿ ಅತಿವೃಷ್ಟಿಯಿಂದ ಆದ ಬೆಳೆಹಾನಿಗೆ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿರುವ ರೈತರನ್ನು ಹೊರತುಪಡಿಸಿ, ಉಳಿದವರು ಅರ್ಜಿ ಸಲ್ಲಿಸಬಹುದು. ಅಥವಾ ಒರಿಯಂಟಲ್ ಇನ್ಸುರೆನ್ಸ್ ಸಂಸ್ಥೆಯ ಸಹಾಯವಾಣಿ 1800118485 ಅಥವಾ ಕೃಷಿರಕ್ಷಕ ಪೋರ್ಟಲ್ ಸಂಖ್ಯೆ 14447 ಗೆ ಕರೆಮಾಡಿ ಪರಿಹಾರದ ದೂರನ್ನು ನೊಂದಣಿ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಭತ್ತದ ಬೆಳೆಯಲ್ಲಿ ಕಂಡುಬಂದಿದ್ದ ಕಂದುಜಿಗಿ ಹುಳುವಿನ ಹಾವಳಿ ಮಳೆಯಿಂದಾಗಿ ಕಡಿಮೆಯಾಗಿತ್ತು. ಆದರೇ ಮಳೆ ಕಡಿಮೆಯಾದ ನಂತರ ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ರೈತರು ಭತ್ತದ ಗದ್ದೆಗಳಲ್ಲಿ ಬುಡವನ್ನು ಪರಿಶೀಲಿಸುತ್ತಿರಬೇಕು. ಹುಳುಗಳ ಹಾವಳಿ ಕಂಡುಬಂದಲ್ಲಿ 0.5 ಗ್ರಾಂ ಪೈಮೆಟ್ರೊಜಿನ್ ಅನ್ನು ಪ್ರತಿ ಲೀಟರ್ ನೀರಿಗೆ, ಅಸಿಫೇಟ್+ಇಮಿಡಾಕ್ಲೊಪ್ರಿಡ್ 1 ಗ್ರಾಂ, ಅಥವಾ ಬುಪ್ರೊಫೆಜಿನ್ 1.5 ಮಿಲೀ ಪ್ರತಿ ಲೀಟರ್ ಅಥವಾ ಇಮಿಡಾಕ್ಲೋಪ್ರಿಡ್ 0.6 ಮಿಲೀ ಪ್ರತಿ ಲೀಟರ್ ಅಥವಾ ಟ್ರೈಫ್ಲುಮೆಜೊಪೈರಿಮ್ 0.5 ಮಿಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಬುಡಭಾಗ ಚೆನ್ನಾಗಿ ನೆನೆಯುವಂತೆ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.

ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಭತ್ತದಲ್ಲಿ ಬೆಂಕಿ ರೋಗ, ಕಾಡಿಗೆ ರೋಗ, ಊದುಬತ್ತಿ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ 2 ಗ್ರಾಂ ಪ್ರತಿ ಲೀಟರ್ ಗೆ ಕಾರ್ಬನ್ಡೇಜಿಮ್+ ಮ್ಯಾಂಕೊಜೆಬ್, ಅಥವಾ 1 ಗ್ರಾಂ ಪ್ರತಿ ಲೀಟರ್ ಟ್ರೈಸೈಕ್ಲಾಜೋಲ್ ಅನ್ನು ನೀರಿಗೆ ಬೆರೆಸಿ ಎಲೆಗಳಿಗೆ ಸಿಂಪಡಿಸಬೇಕಾಗುತ್ತದೆ. ಪೀಡೆನಾಶಕಗಳನ್ನು ಸಿಂಪರಣೆ ಮಾಡುವಾಗ ಗದ್ದೆಯ ನೀರನ್ನು ಒಂದು ವಾರದವರೆಗೆ ಸಂಪೂರ್ಣವಾಗಿ ಬಸಿದು ಹಾಕಬೇಕು ಎಂದು ತಿಳಿಸಿದ್ದಾರೆ.