ಸಾರಾಂಶ
ಹುಬ್ಬಳ್ಳಿ: ಕೇಂದ್ರ ಸರ್ಕಾರದಿಂದ ಅನುದಾನ ತರಬೇಕೆಂದರೆ ಸುತ್ತಾಡಿ ಸುತ್ತಾಡಿ 4-5 ಜತೆ ಚಪ್ಪಲಿ ಹರಿಯುತ್ತವೆ. ಕೇಂದ್ರ ಸಚಿವರ ಮನೆಗೆ ಹೋಗಿ ಅನುದಾನ ತರುವುದು ಸುಲಭವಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ವಿಷಾಧಿಸಿದರು.
ಇಲ್ಲಿನ ದೇವರಗುಡಿಹಾಳ ರಸ್ತೆಯ ವಿಶಾಲನಗರದಲ್ಲಿ ಪಶ್ಚಿಮ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 34ರಲ್ಲಿ ₹10 ಕೋಟಿ ವೆಚ್ಚದಲ್ಲಿ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಹಾಗೂ ಹೆಸ್ಕಾಂ ಕಾಮಗಾರಿಗೆ ಶಂಕುಸ್ಥಾಪನೆ, ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬೇರೆ ದೇಶಕ್ಕೆ ಹೋಲಿಸಿದರೆ, ಭಾರತದ ಆರ್ಥಿಕ ಪರಿಸ್ಥಿತಿ ಬಹಳಷ್ಟು ಹದಗೆಟ್ಟು ಹೋಗಿದೆ. ಇದು ಹೀಗೆಯೇ ಮುಂದುವರಿದಲ್ಲಿ, ಬರುವ ದಿನಗಳಲ್ಲಿ ದೇಶದ ಜನರು ಪ್ರಧಾನಿ ಮೋದಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಬಿಹಾರದಲ್ಲಿ ಚುನಾವಣೆ ಬಂದಿದೆ ಎಂದು ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ವಿಶೇಷ ಅನುದಾನ ನೀಡುತ್ತಿದೆ. ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ವಾರ್ಷಿಕ ಆದಾಯ ಎಷ್ಟಿದೆ ಎಂದು ಅವರು ಹೇಳಲಿ? ಎಂದು ಸವಾಲು ಹಾಕಿದರು.
ಜನಸಂಖ್ಯೆಗೆ ಅನುಗುಣವಾಗಿ ನಮ್ಮ ರಾಜ್ಯದ ಆರ್ಥಿಕ ಸ್ಥಿತಿ ಬಹಳಷ್ಟು ಸುಧಾರಿಸಿದೆ. ಬಿಹಾರದಲ್ಲಿ ಬಿಜೆಪಿಯಿಂದ ಆದ ಪ್ರಗತಿ ಏನು? ಬಿಹಾರ ಆರ್ಥಿಕ ಪರಿಸ್ಥಿತಿ ಏನಾಗಿದೆ? ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಬಿಜೆಪಿಗರು ಚರ್ಚೆ ಮಾಡಲಿ. ಜಿಎಸ್‌ಟಿ ಕಡಿತದ ಬಗ್ಗೆ ದೊಡ್ಡ ಭಾಷಣ ಮಾಡುವ ಬಿಜೆಪಿಯವರು, ಮೊದಲು ತಾವೇ ಜಿಎಸ್‌ಟಿ ಏರಿಕೆ ಮಾಡಿ, ಈಗ ಕಡಿಮೆ ಮಾಡಿದ್ದೇವೆ ಎಂದು ವಿಜಯೋತ್ಸವ ಆಚರಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಜಿಎಸ್‌ಟಿ ಕಡಿಮೆ ಮಾಡಿದ್ದಾರೆ. ದೇಶದ ಸೈನಿಕರು ಮಾಡಿದ ಶೌರ್ಯದ ಕೆಲಸವನ್ನು ಮೋದಿ ಅವರು ಆಪರೇಶನ್ ಸಿಂದೂರ ಎಂದು ಹೇಳಿ ಮತ ಕೇಳುತ್ತಿದ್ದಾರೆ ಎಂದು ಟೀಕಿಸಿದರು.ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ₹ 60 ಸಾವಿರ ಕೋಟಿ ವ್ಯಯಿಸುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಿಸಿದೆ ಎಂದ ಅವರು, 500 ಕೋಟಿಗೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡಿದ್ದಾರೆ. ಆ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮಗಳು ಒಂದೇ. ಭಾವೈಕ್ಯತೆಯಿಂದ ಕೂಡಿದ ದೇಶ ನಮ್ಮದಾಗಿದೆ. ನಮ್ಮ ದೇಶದ ಏಕತೆ ಕಾಪಾಡಿಕೊಳ್ಳಬೇಕು ಎಂದು ಇದೇ ವೇಳೆ ಕರೆ ನೀಡಿದರು.
ಪಾಲಿಕೆಯ ಸದಸ್ಯೆ ಮಂಗಳಮ್ಮ ಗೌರಿ, ಜಿಪಂ ಸಿಇಒ ಭುವನೇಶ ಪಾಟೀಲ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ತಾಪಂ ಇಒ ಡಾ. ರಾಮಚಂದ್ರ ಹೊಸಮನಿ, ಮುಖಂಡರಾದ ಅಲ್ತಾಫ್ ಹಳ್ಳೂರ, ಚನ್ನವೀರ ಮುಂಗೂರಮಠ, ಅನಿಲಕುಮಾರ ಪಾಟೀಲ, ನಾಗರಾಜ ಗೌರಿ, ದೀಪಾ ಗೌರಿ ಪಾಲ್ಗೊಂಡಿದ್ದರು.ಆಜಾನ್: ಭಾಷಣ ನಿಲ್ಲಿಸಿದ ಲಾಡ್
ಸಚಿವ ಸಂತೋಷ ಲಾಡ್ ಭಾಷಣ ಮಾಡುವಾಗ ಸಮೀಪದ ಮಸೀದಿಯಿಂದ ಅಜಾನ್ ಕೂಗು ಕೇಳಿತು. ಈ ಕೂಗು ಕೇಳುತ್ತಿದ್ದಂತೆ ಮಾತು ನಿಲ್ಲಿಸಿದ ಲಾಡ್, ಅದು ಮುಗಿದ ನಂತರ ಮತ್ತೆ ಭಾಷಣ ಆರಂಭಿಸಿದರು.