ಸಾರಾಂಶ
ಮಂಗಳೂರು : ರಾಮಕೃಷ್ಣ ಮಿಷನ್‌ನ ‘ಸ್ವಚ್ಛ ಮಂಗಳೂರು’ ಅಭಿಯಾನದ 2ನೇ ಆವೃತ್ತಿಯ 12ನೇ ತಿಂಗಳ ಸ್ವಚ್ಛತಾ ಅಭಿಯಾನವು ‘ಸ್ವಚ್ಛ ಸಾಗರ ಅಭಿಯಾನ’ ಶೀರ್ಷಿಕೆಯೊಂದಿಗೆ ಭಾನುವಾರ ಬೆಳಗ್ಗೆ ತಣ್ಣೀರುಬಾವಿ ಕಡಲ ತೀರದಲ್ಲಿ ನಡೆಯಿತು.
ಸ್ವಯಂ ಸೇವಕರಾದ ಡಾ. ಕೃಷ್ಣ ಶರಣ್, ಯೋಗೀಶ್ ಕಾಯರ್ತಡ್ಕ, ಅವಿನಾಶ್ ಅಂಚನ್, ಅಚಲ್, ಅಭಿಷೇಕ್ ವಿ., ಸುಧಾಕರ್, ಮುಕೇಶ್ ಆಳ್ವ, ಸಚಿನ್ ಶೆಟ್ಟಿ ನಲ್ಲೂರು, ಸಜಿತ್ ನೇತೃತ್ವದಲ್ಲಿ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವಿದ್ಯಾರ್ಥಿಗಳ ತಂಡ ಕಡಲ ತೀರದಲ್ಲಿದ್ದ ಗಾಜು- ಪ್ಲಾಸ್ಟಿಕ್ ಬಾಟಲಿಗಳು ಮುಂತಾದ ಸುಮಾರು 2 ಟನ್‌ನಷ್ಟು ತ್ಯಾಜ್ಯ ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಿದರು.
ಅಂತಾರಾಷ್ಟ್ರೀಯ ಫಿಸಿಯೋಥೆರಪಿ ದಿನ ವಿಶಿಷ್ಟವಾಗಿ ಆಚರಿಸಿಕೊಂಡ ನಿಟ್ಟೆ ವಿದ್ಯಾರ್ಥಿಗಳು ಸುಮಾರು 400ಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದಿಯಾಗಿ ಉಪನ್ಯಾಸಕ ಉಪನ್ಯಾಸಕೇತರ ವೃಂದದವರೂ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದ್ದರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಹಾಗೂ ನಿಟ್ಟೆ ವಿವಿ ಕುಲಾಧಿಪತಿ ವಿನಯ್ ಹೆಗ್ಡೆ ಅವರು ತಣ್ಣೀರುಬಾವಿ ಕಡಲ ತೀರದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಮಾಜಿ ಎಂಎಲ್ಸಿ ಕ್ಯಾ. ಗಣೇಶ್ ಕಾರ್ಣಿಕ್, ಯೋಜನಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಯೋಜನಾ ನಿರ್ದೇಶಕ ಕೆ.ಪಿ. ಪಣಿಕ್ಕರ್, ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಧನೇಶ್ ಕುಮಾರ್, ಸ್ವಚ್ಛ ಸೇನಾ ತಂಡದ ಸಂಯೋಜಕ ಪ್ರೊ. ರಾಕೇಶ್ ಕೃಷ್ಣ, ನಿವೃತ್ತ ಯೋಧರಾದ ಬೆಳ್ಳಾಲ ಗೋಪಿನಾಥ್ ರಾವ್, ಕಮಲಾಕ್ಷ ಪೈ, ವಿಠಲದಾಸ್ ಪ್ರಭು, ಉಮಾನಾಥ್ ಕೋಟೆಕಾರ್, ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರಕಾಶ್ ಮತ್ತು ಶ್ರೀವತ್ಸ ಇದ್ದರು.