ಸಾರಾಂಶ
ಅಂಗಡಿ ಮುಂಗಟ್ಟುಗಳ ನಾಮ ಫಲಕದಲ್ಲಿ ಶೇ. 60 ಕನ್ನಡ ಭಾಷೆ ಬಳಸಬೇಕು. ಉದ್ಯಮಿಗಳು, ವ್ಯಾಪಾರಸ್ಥರು, ಶಿಕ್ಷಣ ಸಂಸ್ಥೆಗಳಿಗೆ ಇದು ಕೊನೆಯ ಎಚ್ಚರಿಕೆಯಾಗಿದ್ದು, ಎಲ್ಲರೂ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಬೇಕು ಎಂದು ಕೊಡಗು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡಿದೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕೊಡಗು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಟ್ಟಣದಲ್ಲಿ ನಾಮಫಲಕದಲ್ಲಿ ಶೇ. 60 ರಷ್ಟು ಕನ್ನಡ ಬಳಸುವಂತೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜನಜಾಗೃತಿ ಆಂದೋಲನ ನಡೆಸಿತು.ಈ ಸಂದರ್ಭ ಕರವೇ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ, ಅನ್ಯ ರಾಜ್ಯಗಳಲ್ಲಿ ಅಲ್ಲಿಯ ಮಾತೃ ಬಾಷೆಯಲ್ಲಿಯೇ ನಾಮಫಲಕಗಳನ್ನು ಹಾಕಲು ಅವಕಾಶ ಇದೆ. ಆದರೆ, ಕರ್ನಾಟಕದದಲ್ಲಿ ಮಾತ್ರ ಇಂಗ್ಲಿಷ್ ಸೇರಿದಂತೆ ಅನ್ಯ ಭಾಷೆ ಹೆಚ್ಚಾಗಿ ಬಳಸುತ್ತಿದ್ದಾರೆ. ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಆಗಿದ್ದೇ ಆಯಾ ಭಾಗದ ನುಡಿ ಪರಂಪರೆ ರಕ್ಷಿಸಲು, ಗೌರವಿಸಲು. ಕನ್ನಡದಲ್ಲಿ ನಾಮಫಲಕ ಅಭಿಯಾನವನ್ನು ಕರ್ನಾಟಕ ರಕ್ಷಣಾ ವೇದಿಕೆ ಇಡಿ ರಾಜ್ಯಾದ್ಯಂತ ಮಾಡುತ್ತಿದೆ. ಕನ್ನಡ ವಿಧೇಯಕದ ಕುರಿತು ಎಲ್ಲರಿಗೂ ಅರಿವು ಮೂಡಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು.ಅಂಗಡಿ ಮುಂಗಟ್ಟುಗಳ ನಾಮ ಫಲಕದಲ್ಲಿ ಶೇ. 60 ಕನ್ನಡ ಭಾಷೆ ಬಳಸಬೇಕು. ಉದ್ಯಮಿಗಳು, ವ್ಯಾಪಾರಸ್ಥರು, ಶಿಕ್ಷಣ ಸಂಸ್ಥೆಗಳಿಗೆ ಇದು ಕೊನೆಯ ಎಚ್ಚರಿಕೆಯಾಗಿದ್ದು, ಎಲ್ಲರೂ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಬೇಕು. ಕನ್ನಡ ನಾಮ ಫಲಕ ಅಳವಡಿಸಲು ಮಾ. 14 ಕೊನೆಯ ದಿನವಾಗಿದ್ದು, ನಂತರವೂ ಕಾನೂನು ಪಾಲಿಸದ ಅಂಗಡಿ ನಾಮಫಲಕಕ್ಕೆ ಕಪ್ಪು ಮಸಿ ಬಳಿಯಲಾಗುವುದು ಎಂದು ತಿಳಿಸಿದರು.
ಕರವೇ ನಗರ ಘಟಕದ ಅಧ್ಯಕ್ಷ ಬಿ.ಎಸ್. ಮಂಜುನಾಥ್, ತಾಲೂಕು ಘಟಕದ ಉಪಾಧ್ಯಕ್ಷ ಚಂದ್ರು, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್, ಪ್ರಮುಖರಾದ ವೆಂಕಿ ಹಾನಗಲ್ಲು, ರಾಘವೇಂದ್ರ ಕರ್ಕಳ್ಳಿ, ಬಿ.ಎಂ. ದಾಮೋದರ್, ನಿತನ್, ಐಗೂರು ವಸಂತ ಮತ್ತಿತರರು ಇದ್ದರು.