ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 97 ಲಕ್ಷ ರು. ವೆಚ್ಚದ ಕಬ್ಬು ಕಟಾವು ಯಂತ್ರವನ್ನು ಹಾರ್ವೆಸ್ಟ್ ಹಬ್ ಎಂಬ ಯೋಜನೆಯಡಿ ರೈತ ಮಹಿಳೆ ಖರೀದಿಸಿದ್ದು, 39,86,000 ರು.ಸಬ್ಸಿಡಿ ಸರ್ಕಾರದಿಂದ ದೊರೆಯುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ತಾಲೂಕಿನ ಬೆಳತೂರು ಗೇಟ್(ಮದ್ದೂರು-ಕೊಪ್ಪ ರಸ್ತೆ)ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಕೊತ್ತನಹಳ್ಳಿಯ ಜ್ಯೋತಿ ಎಂಬ ರೈತ ಮಹಿಳೆಗೆ ಕಬ್ಬು ಕಟಾವು ಯಂತ್ರ ವಿತರಿಸಿ ಮಾತನಾಡಿದರು.
ಕೃಷಿಯನ್ನು ಮಾಡಲು ಜಿಲ್ಲೆಯಲ್ಲಿ ಬಹಳ ಜನ ಆಸಕ್ತಿ ಹೊಂದಿದ್ದೀರಾ. ಬಹಳಷ್ಟು ಜನ ಕೃಷಿ ಇಲಾಖೆಯಿಂದ ದೊರೆಯುವ ಸಂಪನ್ಮೂಲ, ಸೌಲಭ್ಯ ಪಡೆದುಕೊಳ್ಳುತ್ತಿದ್ದೀರಾ. ಜೊತೆಗೆ ಕೃಷಿ ಬಗ್ಗೆ ತರಬೇತಿ ಪಡೆಯುವುದು, ಸಂಶೋಧನ ಕೇಂದ್ರದಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.ಅಮೆರಿಕ ಹಾಗೂ ಇನ್ನಿತರೆ ದೇಶಗಳಲ್ಲಿ ಕೃಷಿ ಪದ್ದತಿಯು ಸಂಪೂರ್ಣ ಯಂತ್ರದಿಂದ ಕೂಡಿರುವುದನ್ನು ನೋಡಿದಾಗ ನಮ್ಮ ದೇಶದ ರೈತರು ಕೃಷಿಯಲ್ಲಿ ಬಹಳ ಆಸಕ್ತಿಯಿಂದ ಯಂತ್ರಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಹಲವು ಕಾರಣಗಳಿಂದ ಕೃಷಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಕೃಷಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಬೇಕಿದೆ. ಇದರ ಬಗ್ಗೆ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ನಡೆಸುವ ತರಬೇತಿಯಲ್ಲಿ ಹೆಚ್ಚು ಜನರು ಭಾಗವಹಿಸಬೇಕು ಎಂದರು.97 ಲಕ್ಷ ರು ಗಳ ಕಬ್ಬು ಕಟಾವು ಯಂತ್ರವನ್ನು ಪರಿಶಿಷ್ಟ ಜಾತಿ ಪಂಗಡದವರಿಗೆ ಇದೆ. ಈ ಯಂತ್ರ ನೀಡಿದರೆ 49 ಲಕ್ಷ ರು. ಸಬ್ಸಿಡಿ ನೀಡಲಾಗುವುದು. ಸರ್ಕಾರ ಸದಾ ರೈತರ ಪರವಾಗಿ ಕೆಲಸ ಮಾಡುತ್ತಿದ್ದು, ಕೃಷಿ ಯಂತ್ರೋಪಕರಣಗಳ ಬಳಕೆಯಿಂದ ರೈತರಿಗೆ ಹೆಚ್ಚಿನ ಇಳುವಾರಿ ಹಾಗೂ ಲಾಭ ಬರಲಿದೆ. ಇದನ್ನು ರೈತರು ಮನಗಂಡು ಹೆಚ್ಚು ಉಪಯೋಗಿಸಿಕೊಳ್ಳಬೇಕು ಎಂದರು.
ಕಬ್ಬು ಕಟಾವು ಯಂತ್ರವನ್ನು ಬಾಡಿಗೆಗೆ ನೀಡಿ ಕೆಲವು ವರ್ಷಗಳ ನಂತರ ಯಂತ್ರದಿಂದ ಲಾಭ ಬರಲಿದೆ. ಈ ಯಂತ್ರವನ್ನು ಬೆಳಗಾವಿಯಲ್ಲಿ ಹೆಚ್ಚು ಜನರು ಬಳಸುತ್ತಿದ್ದಾರೆ. ಮೊದಲ ಬಾರಿಗೆ ಬೆಳಗಾವಿಯಲ್ಲಿ 20 ಯಂತ್ರವನ್ನು ನೀಡಲಾಗಿತ್ತು. ಈ ಬಾರಿ ಕಬ್ಬು ಕಟಾವು ಯಂತ್ರಕ್ಕೆ ಬೇಡಿಕೆ ಹೆಚ್ಚಾಗಿದ್ದು, 100 ಯಂತ್ರಗಳಿಗೆ 500 ಅರ್ಜಿಗಳು ಬಂದಿವೆ ಎಂದರು.ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಕಟಾವಿಗಾಗಿ ಹೊರ ಜಿಲ್ಲೆಯಿಂದ ಅವರಿಗೆ ಮುಂಗಡ ನೀಡಿ ಕರೆತರಲಾಗುತ್ತದೆ. ಇಂತಹ ಯಂತ್ರ ಖರೀದಿಗೆ ರೈತರನ್ನು ಸಕ್ಕರೆ ಕಾರ್ಖಾನೆಗಳು ಪ್ರೋತ್ಸಾಹಿಸಬೇಕು ಎಂದರು.
ಭತ್ತ ಹಾಗೂ ರಾಗಿ ಬೆಳೆಯ ನಾಟಿಯನ್ನು ಮಾಡುವ ರೈತರು ನೀರನ್ನು ಸಮ ಪ್ರಮಾಣದಲ್ಲಿ ಹಾಯಿಸಬೇಕು. ನೀರನ್ನು ಹೆಚ್ಚಾಗಿ ಹಾಯಿಸಿದಲ್ಲಿ ಬೆಳೆ ಇಳುವರಿ ಕಡಿಮೆಯಾಗುವುದು. ವೈಜ್ಞಾನಿಕ ವಿಧಾನವನ್ನು ತಿಳಿದು ಕೃಷಿ ಮಾಡುವುದು ಸೂಕ್ತ. ಭತ್ತ ರಾಗಿಯ ಬಿತ್ತನೆ, ಗೊಬ್ಬರ ಹಾಗೂ ಔಷಧಿಯನ್ನು ಸರ್ಕಾರದಿಂದ ರೈತರಿಗೆ ಯಾವುದೇ ಕೊರತೆ ಬಾರದಂತೆ ನೀಡಲಾಗುತ್ತಿದೆ. ಇನ್ನೂ ಹಲವು ಹೊಸ ಕಾರ್ಯಕ್ರಮಗಳನ್ನು ರೈತರಿಗೆ ನೀಡುವ ಸಲುವಾಗಿ ಸರ್ಕಾರವು ಚಿಂತಿಸುತ್ತಿದೆ ಎಂದರು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ರೈತರ ಜಮೀನಿನಲ್ಲಿ ಯಾಂತ್ರಿಕೃತ ಬೇಸಾಯ ಪದ್ಧತಿ ಪ್ರಾತ್ಯಕ್ಷತೆ ಕುರಿತು ಮಂಡ್ಯ ವಿ.ಸಿ.ಫಾರ್ಮ್ ನ ಕೇಂದ್ರ ವಲಯ ಜಾಗರಿ ಪಾರ್ಕ್ ನ ವಿಜ್ಞಾನಿ ಡಾ.ಸ್ವಾಮಿಗೌಡ ಕಬ್ಬಿನ ಸುಧಾರಣೆ ತಳಿಗಳ ಬೇಸಾಯ ಪದ್ಧತಿ, ವಿ.ಸಿ.ಫಾರ್ಮ್ ನ ಪ್ರಾಧ್ಯಾಪಕ ಕೇಶವಯ್ಯ ಕಬ್ಬಿನ ಹನಿನೀರಾವರಿ ಘಟಕ ಅಳವಡಿಕೆ ಮಹತ್ವ, ಕಬ್ಬಿನಲ್ಲಿ ಕೂಳೆ ಬೆಳೆ ನಿರ್ವಹಣೆ ಹಾಗೂವಿ.ಸಿ.ಫಾರ್ಮ್ ಕೃಷಿ ವಿಜ್ಞಾನಿ ಡಾ.ಶ್ರೀದೇವಿ ಕಬ್ಬಿನ ಯಾಂತ್ರಿಕೃತ ಬೇಸಾಯ ಪದ್ಧತಿ ಕುರಿತು ರೈತರೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಂ.ಉದಯ್, ಪಿ.ರವಿಕುಮಾರ್, ದಿನೇಶ್ ಗೂಳಿಗೌಡ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ , ಸಹಾಯಕ ಕೃಷಿ ನಿರ್ದೇಶಕಿ ಎಚ್ .ಜಿ.ಪ್ರತಿಭಾ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.