ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಬಸವಾದಿ ಶರಣರ ಸಂದೇಶ ಸಾರುವ ಉದ್ದೇಶದಿಂದ ಆರಂಭವಾಗಿರುವ ಅನುಭವ ಮಂಟಪ ವೈಭವ ರಥಯಾತ್ರೆಯೂ ವಿಜಯಪುರಕ್ಕೆ ಆಗಮಿಸಿದ್ದು, ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಿಇಒ ರಿಷಿ ಆನಂದ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವ ಮೂಲಕ ಸಂಭ್ರಮದಿಂದ ಸ್ವಾಗತಿಸಿದರು.ವಿಶ್ವಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆ ಪ್ರಚುರಪಡಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಅನುಭವ ಮಂಟಪ-ಶರಣರ ವೈಭವ ರಥಯಾತ್ರೆ ಶುಕ್ರವಾರ ಬಸವ ಜನ್ಮಸ್ಥಳ ಇಂಗಳೇಶ್ವರದಿಂದ ಸಾಗಿ ಬಸವನಬಾಗೇವಾಡಿ ಮೂಲಕ ಇಂದು ಸಂಜೆ ನಗರಕ್ಕೆ ಆಗಮಿಸಿತು. ಕೂಡಲ ಸಂಗಮದಲ್ಲಿ ಆಯೋಜಿಸಿರುವ ಬಸವ ಜಯಂತಿ ಅಂಗವಾಗಿ ಅನುಭವ ಮಂಟಪ- ಬಸವಾದಿ ಶರಣರ ವೈಭವ ಕಾರ್ಯಕ್ರಮದ ಅಂಗವಾಗಿ ಈ ರಥಯಾತ್ರೆ ರಾಜ್ಯದಾದ್ಯಂತ ಸಂಚಾರ ಮಾಡುತ್ತಿದೆ.
ವಿಜಯಪುರಕ್ಕೆ ಆಗಮಿಸಿದ ರಥಯಾತ್ರೆಯು ಅಂಬೇಡ್ಕರ್ ವೃತ್ತದಿಂದ ಸಾಗಿ ಬಸವೇಶ್ವರ ವೃತ್ತ, ಗಾಂಧಿವೃತ್ತ, ಶಿವಾಜಿ ಸರ್ಕಲ್ ಮೂಲಕ ಸಾಗಿದ ರಥಯಾತ್ರೆಯು ಮುಂದೆ ತಿಕೋಟಾ ಮಾರ್ಗವಾಗಿ ಬೆಳಗಾವಿ ಜಿಲ್ಲೆಯತ್ತ ತೆರಳಿತು.ಈ ವೇಳೆ ಮಾತನಾಡಿದ ಸಿಇಒ ರಿಷಿ ಆನಂದ್, ಅನುಭವ- ಮಂಟಪದ ಮಾದರಿ ರಥದಲ್ಲಿ ಜಗಜ್ಯೋತಿ ಬಸವೇಶ್ವರ, ಗೌತಮ ಬುದ್ಧ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಶಿವಶರಣೆ ಅಕ್ಕ ಮಹಾದೇವಿ, ಸಂತ ಶಿಶುನಾಳ ಶರೀಫ, ಗುರುನಾನಕ, ಭಗವಾನ ಮಹಾವೀರ, ನಾರಾಯಣ ಗುರು, ಏಸು ಕ್ರಿಸ್ತರ ಪ್ರತಿಮೆಗಳು ಗಮನ ಸೆಳೆಯುತ್ತಿವೆ. ಇಲ್ಲಿ ಮಹಾತ್ಮರ ಚಿಂತನೆಗಳಿಗೆ, ಏಕತೆಯ ವಿಚಾರಗಳಿಗೆ, ಸಮಾಜ ಸುಧಾರಣೆಯ ತತ್ವಗಳ ಸಂಗಮದಂತೆ ಈ ರಥವನ್ನು ಅತ್ಯಂತ ಮನೋಜ್ಞವಾಗಿ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಚುನಾವಣಾ ತಹಸೀಲ್ದಾರ್ ಪ್ರೇಮಸಿಂಗ್ ಪವಾರ, ತಹಸೀಲ್ದಾರ್ ಐ.ಎಚ್.ತುಂಬಗಿ, ವಿ.ಸಿ.ನಾಗಠಾಣ, ಅಭಿಷೇಕ ಚಕ್ರವರ್ತಿ, ವಿದ್ಯಾವತಿ ಅಂಕಲಗಿ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ, ರವಿ ಕಿತ್ತೂರ ಸೇರಿದಂತೆ ಇನ್ನು ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.