ರಾಣಿಬೆನ್ನೂರು ಬಳಿ ಅಲೆಮಾರಿ ಜಾನುವಾರು ದಂಡು

| Published : May 22 2024, 12:45 AM IST

ರಾಣಿಬೆನ್ನೂರು ಬಳಿ ಅಲೆಮಾರಿ ಜಾನುವಾರು ದಂಡು
Share this Article
  • FB
  • TW
  • Linkdin
  • Email

ಸಾರಾಂಶ

ತಾವು ಸಾಕಿದ ಜವಾರಿ ತಳಿಯ ಸಾವಿರಾರು ಆಕಳು ಮತ್ತು ಕರುಗಳೊಂದಿಗೆ ಕೊಪ್ಪಳ ಜಿಲ್ಲೆಯ ಅಲೆಮಾರಿ ಜನರು ಸೋಮವಾರ ಸಂಜೆ ರಾಣಿಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮಕ್ಕೆ ಆಗಮಿಸಿ ಕೌತುಕ ಉಂಟು ಮಾಡಿದ್ದಾರೆ.

ಬಸವರಾಜ ಸರೂರಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ತೀವ್ರ ಬರ ಹಾಗೂ ನೀರಿನ ಸಮಸ್ಯೆಯಿಂದ ಕಂಗೆಟ್ಟ ಕೊಪ್ಪಳ ಜಿಲ್ಲೆಯ ಅಲೆಮಾರಿ ಜನರು ತಾವು ಸಾಕಿದ ಜವಾರಿ ತಳಿಯ (ದೇಶಿಯ) ಸಾವಿರಾರು ಆಕಳು ಮತ್ತು ಕರುಗಳೊಂದಿಗೆ ಸೋಮವಾರ ಸಂಜೆ ರಾಣಿಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮಕ್ಕೆ ಆಗಮಿಸಿ ಕೌತುಕ ಉಂಟು ಮಾಡಿದ್ದಾರೆ.

ಸಾಮಾನ್ಯವಾಗಿ ಕುರಿಗಳನ್ನು ನೂರಾರು, ಸಾವಿರಾರು ಸಂಖ್ಯೆಯಲ್ಲಿ ಮೇಯಲು ಊರಿಂದ ಊರಿಗೆ ಒಯ್ಯುವುದನ್ನು ನೋಡಿದ್ದೇವೆ. ಆದರೆ ಸಾವಿರಾರು ಆಕಳುಗಳನ್ನು ಜಿಲ್ಲೆ ಬಿಟ್ಟು ಜಿಲ್ಲೆಗೆ ಮೇಯಲು ತಂದು ಇವರು ರೈತರ ಹೊಲದಲ್ಲಿ ಬಿಟ್ಟಿದ್ದಾರೆ.

ಹೊಲಗಳಲ್ಲಿ ಜಾನುವಾರು ದಡ್ಡಿ: ಕೊಪ್ಪಳ ಜಿಲ್ಲೆ ಮತ್ತು ತಾಲೂಕಿನ ನಾಗೇನಹಳ್ಳಿ ಗ್ರಾಮದ ಯಂಕಮ್ಮ ಬಾಳಪ್ಪ ಗೊಲ್ಲರ, ನಿಂಗಪ್ಪ ಕುರುಬರ, ಗಂಗಾವತಿ ತಾಲೂಕಿನ ಬಮ್ಮಸಾಗರ ಗ್ರಾಮದ ಕೃಷ್ಣಪ್ಪ ಲಮಾಣಿ ಮೂವರದ್ದೂ (ತಲಾ 365) ರಂತೆ ಸೇರಿ ಸುಮಾರು 1100 ಆಕಳುಗಳನ್ನು ಹೊಂದಿದ್ದಾರೆ. ಅವುಗಳನ್ನು ರೈತರ ಹೊಲದಲ್ಲಿ ವಾಸ್ತವ್ಯ ಮಾಡಿಸಿ (ದಡ್ಡಿ ಹಾಕಿ) ಅವರು ಕೊಡುವ ಹಣ ಪಡೆದು ಜೀವನ ಸಾಗಿಸುತ್ತಿದ್ದಾರೆ. ನದಿ ದಡದ ಗ್ರಾಮ, ಮೇವು ಇರುವ ಸ್ಥಳವನ್ನು ನೋಡಿ ಇವರು ಬರುತ್ತಿದ್ದಾರೆ. ಆರು ತಿಂಗಳ ಹಿಂದೆಯೇ ವಲಸೆ:ಇವರೆಲ್ಲ ತಮ್ಮ ಜಾನುವಾರುಗಳ ಸಮೇತ ಆರು ತಿಂಗಳುಗಳ ಹಿಂದೆಯೇ ಕೊಪ್ಪಳ ಜಿಲ್ಲೆಯಿಂದ ಹೊರಟಿದ್ದು ದಾರಿಯುದ್ದಕ್ಕೂ ಸಿಗುವ ಊರುಗಳಲ್ಲಿ ವಾಸ್ತವ್ಯ ಮಾಡುತ್ತಾ ವಿಜಯನಗರ ತಾಲೂಕಿಗೆ ಬಂದು ಸೇರಿದ್ದಾರೆ. ಸೋಮವಾರ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಮಾರ್ಗವಾಗಿ ಕುರವತ್ತಿ ಬಳಿ ತುಂಗಭದ್ರಾ ನದಿಯನ್ನು ದಾಟಿಕೊಂಡು ರಾಣಿಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ ಮೂಲಕ ಹಿರೇಬಿದರಿ ಗ್ರಾಮದ ಡಿಳ್ಳೆಪ್ಪ ಬಿರಾಳ ಎಂಬುವರ ಹೊಲದಲ್ಲಿ ದಡ್ಡಿ ಹಾಕಿದ್ದಾರೆ. ಈ ಬಾರಿ ಸ್ಥಳ ಬದಲು: ಪ್ರತಿ ವರ್ಷ ರಾಯಚೂರ ಜಿಲ್ಲೆಯ ಸಿಂಧನೂರ ಭಾಗದ ಭತ್ತದ ಬೆಳೆಯುವ ಪ್ರದೇಶದಲ್ಲಿನ ಹೊಲಗಳಲ್ಲಿ ಜಾನುವಾರುಗಳೊಂದಿಗೆ ವಾಸ್ತವ್ಯ ಹೂಡುತ್ತಿದ್ದರು. ಆದರೆ ಈ ವರ್ಷ ಮಳೆ ಕೊರತೆಯಿಂದ ಅಲ್ಲಿ ಭತ್ತದ ನಾಟಿ ಮಾಡಿರದ ಕಾರಣ ಇತ್ತ ಕಡೆಗೆ ಆಗಮಿಸಿದ್ದಾರೆ. ಮಳೆಗಾಲದಲ್ಲಿ ಗುಡ್ಡ ಪ್ರದೇಶಕ್ಕೆ: ಮಳೆಗಾಲ ಸಮಯದಲ್ಲಿ ರೈತರು ಹೊಲದಲ್ಲಿ ಬಿತ್ತನೆ ಕೆಲಸ ಮಾಡುವುದರಿಂದ ಇವರು ತಮ್ಮ ಜಾನುವಾರುಗಳನ್ನು ಗುಡ್ಡ ಪ್ರದೇಶಕ್ಕೆ ಕಳುಹಿಸಿಬಿಡುತ್ತಾರೆ. ಅಲ್ಲಿ ವನ್ಯಮೃಗಗಳಿಂದ ಉಂಟಾಗುವ ಸಂಭಾವ್ಯ ದಾಳಿಯ ತಡೆಗಾಗಿ ಪ್ರತಿಯೊಂದು ಆಕಳಿನ ಕಿವಿಯನ್ನು ಅಲ್ಪ ಪ್ರಮಾಣದಲ್ಲಿ ಕತ್ತರಿಸಿದ್ದಾರೆ. ಹೀಗೆ ಮಾಡುವುದರಿಂದ ಯಾವುದಾದರೂ ವನ್ಯಮೃಗ ದಾಳಿ ಮಾಡುವ ಮುನ್ಸೂಚನೆಯನ್ನು ಜಾನುವಾರುಗಳು ಮುಂಚಿತವಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಆಗ ಎಲ್ಲವೂ ಗುಂಪಾಗಿ ವನ್ಯಮೃಗಗಳನ್ನು ಹಿಮ್ಮೆಟ್ಟಿಸುತ್ತವೆ ಎಂದು ಯಂಕಮ್ಮ ಮಾಹಿತಿ ನೀಡಿದರು. ರೈತರಿಗೆ ಅನುಕೂಲ: ಹೊಲದಲ್ಲಿ ಜಾನುವಾರುಗಳನ್ನು ನಿಲ್ಲಿಸುವುದರಿಂದ ರೈತರಿಗೆ ಸ್ಥಳದಲ್ಲಿಯೇ ಅಗತ್ಯ ಪ್ರಮಾಣದ ಹಾಗೂ ಗುಣಮಟ್ಟದ ಸಾವಯವ ಗೊಬ್ಬರ ಲಭಿಸುತ್ತದೆ. ಇದಕ್ಕೆ ಪ್ರತಿಯಾಗಿ ರೈತರು ಅವರಿಗೆ ಒಂದು ದಿನಕ್ಕೆ ಇಂತಿಷ್ಟು ಎಂದು ಹಣ ನೀಡಬೇಕಾಗುತ್ತದೆ. ಇದನ್ನು ಅರಿತ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಸಾಕಷ್ಟು ರೈತರು ಮಂಗಳವಾರ ಬೆಳಗ್ಗೆ ಹಿರೇಬಿದರಿ ಗ್ರಾಮಕ್ಕೆ ದೌಡಾಯಿಸಿದ್ದರು.

ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಸಾವಿರಾರು ಸಂಖ್ಯೆಯ ಜಾನುವಾರುಗಳು ಬೀಡು ಬಿಟ್ಟಿರುವ ಸುದ್ದಿ ತಿಳಿದು ಪೊಲೀಸ್ ಹಾಗೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಾನುವಾರುಗಳ ಮಾಲೀಕರನ್ನು ವಿಚಾರಿಸಿ ಮಾಹಿತಿ ಪಡೆದುಕೊಂಡರು. ಗ್ರಾಮೀಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪ್ರವೀಣಕುಮಾರ ಹಾಗೂ ಸಿಬ್ಬಂದಿ ವರ್ಗ ಸ್ಥಳದಲ್ಲಿದ್ದರು. ಕೊಪ್ಪಳ ಜಿಲ್ಲೆಯಿಂದ ಬಂದವರಿಂದ ಇವರು ತಾವೇ ಸಾಕಿದ ಜಾನುವಾರುಗಳನ್ನು ತಂದು ಬೀಡು ಬಿಟ್ಟಿದ್ದಾರೆ. ಇದರ ಬಗ್ಗೆ ಯಾವುದೇ ಆತಂಕ ಇಲ್ಲ. ಬದಲಾಗಿ ಇವರಿಂದ ರೈತರಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಗ್ರಾಮೀಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪ್ರವೀಣಕುಮಾರ ಹೇಳಿದರು.ಇವರು ಜಾನುವಾರುಗಳನ್ನು ಯಾವುದೇ ಕಾರಣಕ್ಕೂ ಕಸಾಯಿಖಾನೆಗೆ ಕಳುಹಿಸುವುದಿಲ್ಲ. ಹೋರಿ ಕರುಗಳನ್ನು (ಗಂಡು) ಮಾತ್ರ ಕೃಷಿ ಕಾರ್ಯಗಳಿಗೆ ಬಳಸುವಂತಿದ್ದರೆ ರೈತರಿಗೆ ಮಾರಾಟ ಮಾಡುತ್ತಾರೆ. ಜಾನುವಾರುಗಳಿಗೆ ಅಗತ್ಯ ಬಿದ್ದರೆ ಇಲಾಖೆ ಲಸಿಕೆ ನೀಡಲಾಗುವುದು ರಾಣಿಬೆನ್ನೂರು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ನೀಲಕಂಠ ಅಂಗಡಿ ಹೇಳಿದರು.