ಸಾರಾಂಶ
ಮುಂಡರಗಿ: ಪರಿಸರವನ್ನು ತಾಯಿಯ ಸ್ಥಾನದಲ್ಲಿ ನೋಡಿರುವ ಶ್ರೇಷ್ಠ ಪರಂಪರೆ ನಮ್ಮದು. ಸನಾತನ ಸಂಸ್ಕೃತಿ ಆಚರಿಸುತ್ತಿದ್ದ ನಮ್ಮ ಹಿರಿಯರಿಗೆ ಪರಿಸರ ಒಂದು ವಿಷಯ ಆಗಿರಲಿಲ್ಲ. ಬದಲಾಗಿ ಅದೊಂದು ನಿತ್ಯ ಅನುಷ್ಠಾನದ ಜೀವನ ಪದ್ಧತಿ ಆಗಿತ್ತು ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಹೇಳಿದರು.
ಅವರು ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಸರ ವೇದಿಕೆಯಿಂದ ಆರ್ಯುವೇದದ ಸಸ್ಯಕಾಸಿ ಕಪ್ಪತ್ತಗುಡ್ಡದಲ್ಲಿ ಹಮ್ಮಿಕೊಂಡಿದ್ದ ಪ್ರಕೃತಿ ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪರಿಸರವನ್ನು ನಮ್ಮ ಹಿರಿಯರು ನಾಗ ಬನ, ದೇವರ ಕಾಡು, ನೀರೆಂದರೆ ಪಾವನ ತೀರ್ಥ, ಭೂಮಿ ತುತ್ತು ಕೊಡುವ ತಾಯಿ, ಗಿಡಗಳನ್ನು ದೇವರೆಂದು ಮತ್ತು ಅವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ನೋಡುತ್ತಿದ್ದರು. ಆದರೆ ಇಂದು ದಿನನಿತ್ಯದ ಪ್ರತಿ ಹಂತದಲ್ಲಿ ಭೂಮಿ ಶೋಷಿಸುತ್ತಿದ್ದೇವೆ. ಆಕೆಯ ಒಡಲಿಗೆ ಯಥೇಚ್ಛವಾಗಿ ರಾಸಾಯನಿಕ ಸುರಿಯುತ್ತಿದ್ದೇವೆ. ಮರು ಬಳಕೆ ಆಗದ ಪ್ಲಾಸ್ಟಿಕ್ ಭೂಮಿಗೆ ಮಾಡುವ ಹಾನಿಯ ಕುರಿತು ಗೊತ್ತಿದ್ದರೂ ಅದರ ಬಗ್ಗೆ ಕಾಳಜಿಯಿಲ್ಲ.ರಾಸಾಯನಿಕಯುಕ್ತ ಮಾರ್ಜಕಗಳು, ಜಲಮೂಲ ಸೇರಿ ಉಂಟು ಮಾಡುವ ಹಾನಿ ನಿರ್ಲಕ್ಷಿಸುತ್ತಿದ್ದೇವೆ. ಆಮ್ಲಜನಕ ಕೊಡುವ ಮರಗಿಡ ನಾವು ಎಷ್ಟು ನೆಡುತ್ತಿದ್ದೇವೆ ಮತ್ತು ಪೋಷಣೆ ಮಾಡುತ್ತವೆ ಎಂದು ಪ್ರಶ್ನೆ ಮಾಡಿಕೊಳ್ಳುಬೇಕಾಗಿದೆ ಎಂದರು.
1730ರ ಆಗಸ್ಟ್ 25ರಂದು ರಾಜಸ್ಥಾನದ ಜೋದಪುರ ಖೇಜರ್ಲಿ ಗ್ರಾಮದಲ್ಲಿ ರಾಜ ತನ್ನ ಹೊಸಕೋಟೆ ಕಟ್ಟಲು ದಟ್ಟವಾಗಿ ಬೆಳೆದ ಶಮಿ ಮರ ಕಡಿಯಲು ಮುಂದಾದಾಗ ಮಾತಾ ಅಮೃತಾ ದೇವಿ ಮರ ಕಡಿಯಲು ಬಂದ ಸೈನಿಕರಿಗೆ ತಡೆ ಒಡ್ಡಿದ ಅವರು, ಮರವನ್ನು ಅಪ್ಪಿಕೊಂಡು ನಿಂತರು. ಮರ ಅಪ್ಪಿಕೊಂಡು ನಿಂತ ಅಮೃತಾ ದೇವಿ ಸೇರಿ 363 ಜನರ ಮಾರಣಹೋಮ ನಡೆಯಿತು. ಗಿಡ ಮರಗಳಿಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದು ಇತಿಹಾಸವಾಗಿ ಉಳಿದಿದೆ. ಈ ಭೂಮಿಯ ಮೇಲೆ ಎಲ್ಲಿಯವರೆಗೆ ವನ ಕಾನನ ಇರುತ್ತದೆಯೋ ಅಲ್ಲಿಯವರೆಗೆ ಜೀವಿಗಳ ಅಸ್ತಿತ್ವ ಇರುತ್ತದೆ ಎಂಬ ಮಾತು, ಮರ ಗಿಡಗಳು ನಮಗೆ ಎಷ್ಟು ಅನಿವಾರ್ಯ ಎಂಬುದು ತಿಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಶ್ರೀನಿವಾಸ ಕಟ್ಟಿಮನಿ, ಶೇಖರಗೌಡ ಪಾಟೀಲ, ಚಂದ್ರು ಹಿರೇಮಠ, ಬಸವರಾಜ ಹಕ್ಕಂಡಿ, ಹನುಮಂತ, ರವಿ ಹೊಸಪೇಟೆ, ಶಿವು ನವಲಗುಂದ, ಅಂದಪ್ಪ ಶೀರಿ, ಬಸವರಾಜ ಅಳವಂಡಿ, ಮಂಜುನಾಥ ಮಡಿವಾಳರ, ರಾಜು ಹಂಪಿಹೋಳಿ, ಮುತ್ತಣ್ಣ ಉಪ್ಪಾರ, ಬದರಿನಾಥ ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.