ಸಕಲೇಶಪುರದಲ್ಲಿ ಮಳೆಯಲ್ಲಿ ಸೋರುವ ಪಾರಂಪರಿಕ ಎಸಿ ನಿವಾಸ

| Published : Jul 11 2025, 01:48 AM IST

ಸಾರಾಂಶ

ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರಿರುವ ಸಕಲೇಶಪುರ ಉಪವಿಭಾಗಾಧಿಕಾರಿ ನಿವಾಸ ದುಸ್ಥಿತಿಗೀಡಾಗಿದ್ದು ಉನ್ನತ ಅಧಿಕಾರಿಯೆ ಜೀವಭಯದಲ್ಲಿ ದಿನ ಕಳೆಯುವಂತಾಗಿದೆ.

ಕಾಂತರಾಜ್‌ ಹೊನ್ನೇಕೋಡಿ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರಿರುವ ಸಕಲೇಶಪುರ ಉಪವಿಭಾಗಾಧಿಕಾರಿ ನಿವಾಸ ದುಸ್ಥಿತಿಗೀಡಾಗಿದ್ದು ಉನ್ನತ ಅಧಿಕಾರಿಯೆ ಜೀವಭಯದಲ್ಲಿ ದಿನ ಕಳೆಯುವಂತಾಗಿದೆ.

ಅರಕಲಗೂಡು, ಬೇಲೂರು, ಆಲೂರು ಹಾಗೂ ಸಕಲೇಶಪುರ ತಾಲೂಕಿನ ಉಪ ವಿಭಾಗಾಧಿಕಾರಿಯಾಗಿರುವ ಈ ಹಿರಿಯ ಅಧಿಕಾರಿ ನಿವಾಸ ಈಗ ಮಳೆ ನೀರಿನಿಂದ ಸೋರುತ್ತಿದ್ದು, ಮೇಲ್ಛಾವಣಿಗೆ ಟಾರ್ಪಲ್ ಹೊದಿಕೆ ಹಾಕುವ ಮೂಲಕ ಕಳೆದ ಅರ್ಧ ದಶಕಗಳಿಂದ ರಕ್ಷಣೆ ಮಾಡಲಾಗುತ್ತಿದೆ. ೨೦ನೇ ಶತಮಾನದ ಆರಂಭದಲ್ಲಿ ಬ್ರಿಟಿಷರಿಂದ ನಿರ್ಮಿಸಲಾಗಿರುವ ಉಪ ವಿಭಾಗಾಧಿಕಾರಿ ಕಚೇರಿ ಅಂದಿನ ಬ್ರಿಟಿಷ್ ಅಧಿಕಾರಿಗಳ ವಾಸ ಸ್ಥಾನವಾಗಿತ್ತು. ಈ ನಿವಾಸ ಹಲವು ಕೌತುಕಗಳನ್ನು ಒಳಗೊಂಡಿದೆ. ಸ್ವಾತಂತ್ರ್ಯ ಚಳವಳಿಗಾರರ ಬೆದರಿಕೆ ಎದುರಿಸುತ್ತಿದ್ದ ಬ್ರಿಟಿಷರು ಚಳವಳಿಗಾರರ ಸಂಭಾವ್ಯ ದಾಳಿಗಳಿಂದ ತಪ್ಪಿಸಿಕೊಳ್ಳಲು ಈ ನಿವಾಸದಲ್ಲಿ ಹಲವು ದ್ವಾರ ಹಾಗೂ ಅಡಗುತಾಣಗಳನ್ನು ನಿರ್ಮಿಸಿದ್ದಾರೆ. ಅಡಗುತಾಣದಿಂದ ನೇರವಾಗಿ ಕುದರೆ ಲಾಯಕ್ಕೆ ಸಂಪರ್ಕ ಕಲ್ಪಿಸಲಾಗಿದೆ.

ಇಂದು ಯಾವ ಸೌಲಭ್ಯವು ಇಲ್ಲ:

ಅಂದು ಉಪ ವಿಭಾಗಾಧಿಕಾರಿಗಳಿಗೆ ಸೇವೆ ಸಲ್ಲಿಸಲು ಸರ್ಕಾರ ನಿಯೋಜಿಸುತ್ತಿದ್ದ ಭದ್ರತಾ ಸಿಬ್ಬಂದಿ, ಅಡುಗೆಯವರು ಹಾಗೂ ಕಾರು ಚಾಲಕರ ವಾಸಕ್ಕೆ ಉಪ ವಿಭಾಗಾಧಿಕಾರಿಗಳ ನಿವಾಸದ ಸುತ್ತ ಮನೆಗಳನ್ನು ನಿರ್ಮಿಸಲಾಗಿದ್ದರೆ ಮತ್ತೊಂದು ಬದಿಯಲ್ಲಿ ಕುದರೆ ಲಾಯ ನಿರ್ಮಿಸಲಾಗಿದೆ. ಆದರೆ, ಇಂದು ಇಂತಹ ಯಾವುದೇ ಕೆಲಸಗಾರರು ನಿಯೋಜನೆ ಇಲ್ಲದ ಕಾರಣ ಈ ಕಟ್ಟಡಗಳು ಪಾಳು ಬಿದ್ದಿವೆ. ಅದರೆ ಉಪವಿಭಾಗಾಧಿಕಾರಿಗಳ ನಿವಾಸವನ್ನು ಪ್ರತಿವರ್ಷ ಲಕ್ಷಾಂತರ ರು. ವ್ಯಯಿಸಿ ದುರಸ್ತಿ ನಡೆಸಲಾಗುತ್ತಿದ್ದರೂ ಮಳೆ ನೀರು ಸೋರಿಕೆ ತಡೆಯಲು ಸಾಧ್ಯವಾಗುತ್ತಿಲ್ಲ.

ಉಪ ವಿಭಾಗಾಧಿಕಾರಿಗಳ ನಿವಾಸ ವಿಶಾಲ ಕೊಠಡಿಗಳನ್ನು ಹೊಂದಿದ್ದು ನಿವಾಸದ ಎಲ್ಲ ಕೊಠಡಿಗಳು ಇಂದಿಗೂ ಬಳಕೆಯಾಗಿಲ್ಲ. ಈ ಕಟ್ಟಡದಲ್ಲಿ ಉಪ ವಿಭಾಗಾಧಿಕಾರಿಗಳು ಒಬ್ಬರೇ ವಾಸಿಸುವುದು ಕಷ್ಟಕರ. ಈ ಅಧಿಕಾರಿಯ ನಿವಾಸದ ಸುತ್ತಮುತ್ತ ಯಾವುದೇ ವಾಸಯೋಗ್ಯ ಮನೆ, ಜನಸಂಚಾರ ಇಲ್ಲ. ಟಾರ್ಪಲ್ ಹೊದಿಕೆ ಹಾಕಿದ್ದರೂ ಹಲವೆಡೆ ಸೋರುತ್ತಿರುವುದರಿಂದ ನಿವಾಸದಲ್ಲಿ ನೆಮ್ಮದಿಯಾಗಿ ನಿದ್ರೆ ಮಾಡುವುದು ದುಸ್ಥರವಾಗಿದೆ.

ಪಾರಂಪರಿಕ ಕಟ್ಟಡ:

ಬ್ರಿಟಿಷರು ವಿಶೇಷ ವಿನ್ಯಾಸದ ಮೂಲಕ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಸಾಕಷ್ಟು ಉಪ ವಿಭಾಗಾಧಿಕಾರಿಗಳು ವಾಸ್ತವ್ಯ ಇದ್ದರು. ಸುಮಾರು ಎರಡು ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ಈ ನಿವಾಸವಿದೆ. ಉಪ ವಿಭಾಗಾಧಿಕಾರಿ ನಿವಾಸಕ್ಕೆ ಹೊಂದಿಕೊಂಡಂತೆ ತಹಸೀಲ್ದಾರ್ ನಿವಾಸವಿದ್ದು ಮೂರು ಬದಿಯಲ್ಲಿ ರಸ್ತೆಗಳಿಗೆ ಈ ಎರಡು ನಿವಾಸಗಳು ಹೊಂದಿಕೊಂಡಿವೆ. ಈ ಆಯಕಟ್ಟಿನ ಪ್ರದೇಶದಲ್ಲಿರುವ ಪ್ರದೇಶ ಬಸ್ ನಿಲ್ದಾಣಕ್ಕೆ, ಸಾರ್ವಜನಿಕ ಆಸ್ಪತ್ರೆ ಹಾಗೂ ರೈಲ್ವೆ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವುದರಿಂದ ಇಲ್ಲಿ ಕಂದಾಯ ಇಲಾಖೆ ಕಟ್ಟಡ ನಿರ್ಮಿಸಿದರೆ ಗ್ರಾಮೀಣ ಭಾಗದಿಂದ ಬರುವ ರೈತಾಪಿ ಜನರಿಗೆ ಅನುಕೂಲವಾಗಲಿದೆ ಎಂದು ೨೦೦೨ರಲ್ಲಿ ಅಂದಿನ ಶಾಸಕ ಬಿ.ಬಿ.ಶಿವಪ್ಪ ಈ ಕಟ್ಟಡಗಳನ್ನು ನೆಲಸಮಗೊಳಿಸಿ ಮಿನಿವಿಧಾನಸೌಧ ನಿರ್ಮಾಣಕ್ಕೆ ಚಿಂತನೆ ನಡೆಸಿ ಸರ್ವೇಕಾರ್ಯ ಪೂರ್ಣಗೊಳಿಸಿದ್ದರು. ಈ ಯೋಜನೆ ಕಾರ್ಯಗತಗೊಳ್ಳುವ ಮುನ್ನ ೨೦೦೩ರಲ್ಲಿ ಸಕಲೇಶಪುರ ಉಪವಿಭಾಗಕ್ಕೆ ಉಪ ವಿಭಾಗಾಧಿಕಾರಿ ಏಕ್‌ರೂಪ್ ಕೌರ್ ಈ ಎರಡು ನಿವಾಸಗಳನ್ನು ಪರಾಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸಿ ಈ ಕಟ್ಟಡಗಳನ್ನು ಎಂದಿಗೂ ನೆಲಸಮಗೊಳಿಸದಂತೆ ಮಾಡಿದರು. ಇದರಿಂದಾಗಿ ಇಂದಿಗೂ ಕಟ್ಟಡವನ್ನು ಮೂಲ ಸ್ಥಿತಿಯಲ್ಲಿ ಉಳಿಸಿಕೊಂಡು ದುರಸ್ತಿ ಮಾಡಬಹುದೇ ಹೊರತು ಈ ಕಟ್ಟಡವನ್ನು ನೆಲಸಮ ಮಾಡಲಾಗದು.

ನಾಲ್ಕು ತಾಲೂಕುಗಳ ನಿಯಂತ್ರಿಸುವ ಉಪ ವಿಭಾಗಾಧಿಕಾರಿಗಳ ವಾಸಸ್ಥಳವೇ ಹಲವು ಸಮಸ್ಯೆಗಳಿಂದ ಕೂಡಿರುವುದು ದುರದೃಷ್ಟಕರ. ಮಳೆ ನೀರು ಒಳಪ್ರವೇಶಿಸಿರುವುದನ್ನು ತಡೆಯಲು ಟಾರ್ಪಲ್ ಹಾಕುವಂತಹ ದುಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ.

ಮೆಹೆಬೂಬ್‌. ಸಾಮಾಜಿಕ ಹೋರಾಟಗಾರ

ಉಪ ವಿಭಾಗಾಧಿಕಾರಿಗಳ ನಿವಾಸದ ಕಟ್ಟಡ ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಲಾಗಿದ್ದು, ಅದನ್ನು ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರ್ಪಡೆ ಮಾಡಿರುವುದರಿಂದ ಕೇವಲ ಸಣ್ಣಪುಟ್ಟ ರಿಪೇರಿ ಮಾಡಬಹುದೇ ವಿನ: ಈ ಕಟ್ಟಡವನ್ನು ಹೆಚ್ಚೇನು ಬದಲಾವಣೆ ಮಾಡಲಾಗುವುದಿಲ್ಲ.

ಶೃತಿ. ಉಪ ವಿಭಾಗಾಧಿಕಾರಿ.