ರಾಜ್ಯಾದ್ಯಂತ ಭೂ ಕಬಳಿಕೆಯಾಗಿದ್ದ 224.4 ಎಕರೆ ಒತ್ತುವರಿ ಜಮೀನನ್ನು ಮರಳಿ ಸರ್ಕಾರದ ಸುಪರ್ದಿಗೆ ವಹಿಸಿ ಆದೇಶ

| Published : Sep 01 2024, 02:03 AM IST / Updated: Sep 01 2024, 12:19 PM IST

ರಾಜ್ಯಾದ್ಯಂತ ಭೂ ಕಬಳಿಕೆಯಾಗಿದ್ದ 224.4 ಎಕರೆ ಒತ್ತುವರಿ ಜಮೀನನ್ನು ಮರಳಿ ಸರ್ಕಾರದ ಸುಪರ್ದಿಗೆ ವಹಿಸಿ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಕುರಿತು ಆಯೋಜಿಸಲಾದ ಕಾರ್ಯಾಗಾರವನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎ ಪಾಟೀಲ್ ಉದ್ಘಾಟಿಸಿದರು.

 ಚಿತ್ರದುರ್ಗ :  ಕಳೆದ ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ಭೂ ಕಬಳಿಕೆಯಾಗಿದ್ದ 224.4 ಎಕರೆ ಒತ್ತುವರಿ ಜಮೀನನ್ನು ಮರಳಿ ಸರ್ಕಾರದ ಸುಪರ್ದಿಗೆ ವಹಿಸಿ ಆದೇಶ ನೀಡಲಾಗಿದೆ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎ. ಪಾಟೀಲ್ ಹೇಳಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಕುರಿತು ಆಯೋಜಿಸಲಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಿಗಳ ಪ್ರಯತ್ನದ ಫಲವಾಗಿ 224.4 ಎಕರೆ ಜಮೀನು ಸರ್ಕಾರಕ್ಕೆ ಮರಳಿ ದೊರಕಿದೆ. ಸ್ಮಶಾನ ಹಾಗೂ ಸಾರ್ವಜನಿಕ ಉಪಯೋಗಕ್ಕೆ ಜಾಗ ಬೇಕು ಎಂದರೆ, ಸರ್ಕಾರ ಹಣ ನೀಡಿ ಭೂಮಿ ಕೊಂಡುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಒತ್ತುವರಿಗಳು ತೆರವಾದರೆ ಬಳಕೆಗೆ ಭೂಮಿ ಲಭ್ಯವಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಬಲಿಷ್ಠ ಹಾಗೂ ಪರಿಣಾಮಕಾರಿಯಾಗಿದೆ. ಅಧಿಕಾರಿಗಳು ಕಾಯ್ದೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು, ಸರ್ಕಾರಿ ಭೂಮಿಯ ರಕ್ಷಣೆಗೆ ಕಾರ್ಯ ಪ್ರವೃತ್ತರಾಗಬೇಕು. ಭೂ ಕಬಳಿಕೆ ಅಥವಾ ಒತ್ತುವರಿ ಗಮನಕ್ಕೆ ಬಂದರೆ, ವಿಶೇಷ ನ್ಯಾಯಾಲಯಕ್ಕೆ ಫಾರಂ 1 ರಲ್ಲಿ ಅರ್ಜಿ ಸಲ್ಲಿಸಿದರೆ ಸಾಕು, ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಯಾವುದೇ ಒತ್ತಡ ಹಾಗೂ ಪ್ರಭಾವಗಳಿಗೆ ಮಣಿಯುವ ಅವಶ್ಯಕತೆ ಇಲ್ಲ. ಭೂ ಕಬಳಿಕೆಯ ಬಗ್ಗೆ ಮಾಹಿತಿ ಬಂದರೂ ಸಹ, ವಿಶೇಷ ನ್ಯಾಯಾಲಯ ಸ್ವಇಚ್ಛೆಯಿಂದ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಿದೆ. ಒಂದು ವೇಳೆ ಭೂ ಒತ್ತುವರಿ ಕಂಡು ಬಂದರೂ ಸಹ ಅಧಿಕಾರಿಗಳು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಎಚ್ಚರಿಸಿದರು.

ವಿಶೇಷ ನ್ಯಾಯಾಲಯದಲ್ಲಿ ಮಾಧ್ಯಮ ವರದಿಗಳನ್ನು ಆಧರಿಸಿ ಸಾಕಷ್ಟು ಭೂ ಕಬಳಿಕೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಹೀಗೆ ದಾಖಲಾದ ಹಲವು ಪ್ರಕರಣಗಳಲ್ಲಿ ಭೂ ಒತ್ತುವರಿಯನ್ನು ಸಹ ತೆರವುಗೊಳಿಸಲಾಗಿದೆ. ಮಲಪ್ರಭಾ ನದಿ ದಂಡೆ ಒತ್ತುವರಿ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು. ಇದನ್ನು ಆಧರಿಸಿ ನ್ಯಾಯಾಲಯ ಸ್ವ ಇಚ್ಛೆಯಿಂದ ಪ್ರಕರಣ ಕೈಗೆತ್ತಿಕೊಂಡಿದೆ, ಈ ಬಗ್ಗೆ ಒಟ್ಟು 1800 ಹೆಚ್ಚು ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು ಜಿಲ್ಲೆಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಒತ್ತುವರಿ ಸಂಬಂಧ ಮಾಧ್ಯಮ ವರದಿ ಆಧಿರಿಸಿ 17 ಪ್ರಕರಣಗಳನ್ನು ದಾಖಲಿಸಲಾಗಿದೆ. ನ್ಯಾಯಾಂಗ, ಕಂದಾಯ, ಭೂ ಸರ್ವೇ, ಪೊಲೀಸ್ ಹಾಗೂ ಅರಣ್ಯ ಇಲಾಖೆಗಳು ಒಟ್ಟಾಗಿ ಬಿಗಿ ಮುಷ್ಠಿಯಿಂದ ಸರ್ಕಾರಿ ಭೂಮಿಯನ್ನು ರಕ್ಷಿಸಿದರೆ, ಯಾವ ವ್ಯಕ್ತಿ ಅಥವಾ ಸಮೂಹಗಳಿಂದಲೂ ಭೂ ಕಬಳಿಕೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಬಿ.ಎ.ಪಾಟೀಲ್ ತಿಳಿಸಿದರು.

ಚಿತ್ರದುರ್ಗ ಜಿಲ್ಲೆ ಬರ ಪೀಡಿತ ಪ್ರದೇಶವಾಗಿದ್ದು, ಕೆರೆಗಳ ಒತ್ತುವರಿ ಮೋಜಿಣಿ ಮಾಡುವುದು ಅಗತ್ಯವಿದೆ. ಕೆರೆ ಒತ್ತುವರಿ ನಿರ್ವಹಣೆ ಸಮಿತಿ ಅಧ್ಯಕ್ಷನಾಗಿ ಸದ್ಯದಲ್ಲೇ ಕೆರೆಗಳ ಮೋಜಿಣಿ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಧೀಶ ರೋಣ್ ವಾಸುದೇವ್ ಹೇಳಿದರು.

ಈ ವೇಳೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಭೂ ಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಅಪರ ನಿರ್ದೇಶಕ ಕೆ.ಜಯಪ್ರಕಾಶ್, ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಲಯದ ಕಂದಾಯ ಸದಸ್ಯರಾದ ಎಸ್.ಪಾಲಯ್ಯ, ಅಶ್ವತ್ಥನಾರಾಯಣ ಗೌಡ ಕೆ.ಎಚ್, ವಿಲೇಖನಾಧಿಕಾರಿ ಎಚ್.ಕೆ.ನವೀನ್, ಪೊಲೀಸ್ ಅಧೀಕ್ಷಕ ರಂಜೀತ್ ಕುಮಾರ್ ಬಂಡಾರು, ಹೆಚ್ಚುವರು ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸ್ವಾಗತಿಸಿದರು. ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ವಂದನೆ ಸಲ್ಲಿಸಿದರು. ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ, ಕಂದಾಯ, ಅರಣ್ಯ, ನಗರಾಭಿವೃದ್ಧಿ, ಪೊಲೀಸ್, ಶಿಕ್ಷಣ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.