ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಎಡಿಸಿ ಚಂದ್ರಯ್ಯ ಸಲಹೆ

| Published : Aug 03 2024, 12:38 AM IST

ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಎಡಿಸಿ ಚಂದ್ರಯ್ಯ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಜೋಳಿಗೆ ಹಿಡಿದು ಸಹಸ್ರಾರು ಜನರನ್ನು ದುಶ್ಚಟಗಳಿಂದ ಮುಕ್ತ ಮಾಡಿದ ಬಾಗಲಕೋಟೆಯ ವಿರಕ್ತ ಮಠದ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಸಮಾಜಕ್ಕೆ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಹೇಳಿದರು. ರಾಮನಗರದಲ್ಲಿ ವ್ಯಸನ ಮುಕ್ತ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

-ವ್ಯಸನ ಮುಕ್ತ ದಿನಾಚರಣೆ -ವ್ಯಸನಮುಕ್ತ ಸಮಾಜಕ್ಕಾಗಿ ಶ್ರಮಿಸಿದ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ

ಕನ್ನಡಪ್ರಭ ವಾರ್ತೆ ರಾಮನಗರ

ಜೋಳಿಗೆ ಹಿಡಿದು ಸಹಸ್ರಾರು ಜನರನ್ನು ದುಶ್ಚಟಗಳಿಂದ ಮುಕ್ತ ಮಾಡಿದ ಬಾಗಲಕೋಟೆಯ ವಿರಕ್ತ ಮಠದ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಸಮಾಜಕ್ಕೆ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರಿನ ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 1930ರ ಆ.1ರಂದು ಜನಿಸಿದ ಡಾ.ಮಹಾಂತ ಶಿವಯೋಗಿಗಳು ಸಮಾಜ ಸುಧಾರಕರು. ವ್ಯಸನಮುಕ್ತ ಸಮಾಜಕ್ಕಾಗಿ ಆರಂಭಿಸಿದ ಮಹಾಂತ ಜೋಳಿಗೆ ಯೋಜನೆ ಪ್ರಮುಖವಾದದು. ಕುಡಿತ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸ್ವಾಮೀಜಿ ಮನೆಮನೆಗೆ ತೆರಳಿ ದುಶ್ಚಟಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಟ್ಟರು ಎಂದರು.

ಸ್ವಾಮೀಜಿಯ ಮಾತುಗಳಿಗೆ ಮನ ಪರಿವರ್ತನೆ ಮಾಡಿಕೊಂಡ ಜನರು ದುಶ್ಚಟದ ವಸ್ತುಗಳನ್ನು ಸ್ವಾಮೀಜಿಯವರ ಜೋಳಿಗೆಗೆ ಹಾಕಿ, ಮುಂದೆ ಬಳಸಲ್ಲವೆಂದು ಪ್ರಮಾಣ ಮಾಡಿದರು. ಶರಣ ಸಿದ್ಧಾಂತ ವಿದ್ಯಾಪೀಠದ ಶಿವಾನುಭವ ತರಬೇತಿ ಶಿಬಿರಗಳನ್ನು ಏರ್ಪಡಿಸಿ ನಾಡಿನ ಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು, ಸಾಹಿತಿಗಳು, ಸಮಾಜಿಕ ಕಳಕಳಿಯುಳ್ಳವರು, ಕವಿಗಳು, ಧರ್ಮ ಗುರುಗಳನ್ನು ಆಹ್ವಾನಿಸಿ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗದಂತೆ ಅರಿವು ಮೂಡಿಸುತ್ತಿದ್ದರು ಎಂದರು.

ಮನಃಶಾಸ್ತ್ರಜ್ಞ ಚಂದ್ರಶೇಖರ್ ಉಪನ್ಯಾಸ ನೀಡಿ, ಮದ್ಯವ್ಯಸನಿಗಳನ್ನು ದುಶ್ಚಟಗಳಿಂದ ಹೊರತರುವಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಯತ್ನಿಸುತ್ತಿರುವುದು, ಅದರಲ್ಲೂ ಹೆಚ್ಚಾಗಿ ಹೆಣ್ಣು ಮಕ್ಕಳು ತಂಬಾಕು ವ್ಯಸನಿಗಳನ್ನು ವ್ಯಸನ ಮುಕ್ತರನ್ನಾಗಿಸುತ್ತಿರುವುದು ಉತ್ತಮ ಬೆಳವಣಿಗೆ. ಜಿಲ್ಲಾಸ್ಪತ್ರೆಯಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಮಾನಸಿಕ ಆರೋಗ್ಯ ವಿಭಾಗದ ಪದ್ಮ ರೇಖಾ ಮಾತನಾಡಿ, ತಂಬಾಕು ಉತ್ಪನ್ನಗಳು, ಹಾಲ್ಕೋಹಾಲ್ ಮಿಶ್ರಿತ ಪೇಯಗಳು ಹಾಗೂ ಡ್ರಗ್ಸ್ ಮೊದಲಿಗೆ ಅಭ್ಯಾಸವಾಗಿ ನಂತರ ದುರಭ್ಯಾಸವಾಗಿ ಕೊನೆಯಲ್ಲಿ ವ್ಯಸನಕ್ಕೆ ಕಾರಣವಾಗುತ್ತವೆ, ಹೀಗೆ ವ್ಯಸನಿಗಳಾದವರು ದೈಹಿಕ - ಮಾನಸಿಕ ಆರೋಗ್ಯ ಕಳೆದುಕೊಳ್ಳುತ್ತಾರೆ. ಮಾದಕ ವ್ಯಸನಿಗಳು ಖಿನ್ನತೆಗೆ ಒಳಗಾಗುತ್ತಾರೆ, ಕೊನೆಗೊಂದು ದಿನ ಮಾನಸಿಕ ರೋಗಿಗಳಾಗುತ್ತಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸತೀಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶೈಲಜಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ , ಸಹಾಯಕ ನಿರ್ದೇಶಕ ರಮೇಶ್ ಬಾಬು, ಡಾ. ಅಂಕನಹಳ್ಳಿ ಪಾರ್ಥ, ಕನಕಪುರ ಶ್ರೀನಿವಾಸ್, ಪೊಲೀಸ್ ವೃತ್ತ ನಿರೀಕ್ಷಕರಾದ ಕೃಷ್ಣ, ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪನ್ಯಾಸಕ ಡಾ. ಶಿವಲಿಂಗೇಗೌಡ ಅವರು ಪ್ರತಿಜ್ಞಾ ವಿಧಿ ಭೋದಿಸಿದರು.