ಸಾರಾಂಶ
ದೊಡ್ಡಬಳ್ಳಾಪುರ: ಬೆಂಗಳೂರು ಕೃಷಿ ಮಹಾವಿದ್ಯಾಲಯ ಜಿಕೆವಿಕೆಯ ಅಂತಿಮ ವರ್ಷದ ಕೃಷಿ, ಕೃಷಿ ವ್ಯವಹಾರ ನಿರ್ವಹಣೆ ಮತ್ತು ಕೃಷಿ ಎಂಜಿನಿಯರಿಂಗ್ ವಿಭಾಗದ ಸ್ನಾತಕ ಪದವಿ ವಿದ್ಯಾರ್ಥಿಗಳ ಮೂರು ತಿಂಗಳ ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರಕ್ಕೆ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ, ಕೃಷಿ ವಿದ್ಯಾರ್ಥಿಗಳು ನಿರ್ಮಿಸಿರುವ ''''''''ಹಸಿರು ಸಿರಿ'''''''' ಬೆಳೆಗಳ ತಾಕು ಮತ್ತು ಪೌಷ್ಟಿಕ ಕೈ ತೋಟವನ್ನು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ ಸುರೇಶ ಉದ್ಘಾಟಿಸಿದರು.ಅವರು ಮಾತನಾಡಿ, ಕೃಷಿ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಕಾರ್ಯಾನುಭವದ ಮೂಲಕ ಮೂಲ ವ್ಯವಸಾಯ ಪದ್ದತಿಗಳ ಬಗ್ಗೆ ಅರಿವು ಮೂಡಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಎಲ್ಲ ವಿದ್ಯಾರ್ಥಿಗಳೂ ಅಂತಿಮ ವರ್ಷದ ಪದವಿ ವೇಳೆ ಮೂರು ತಿಂಗಳ ಕಾರ್ಯಾನುಭವ ಶಿಬಿರದಲ್ಲಿ ಪಾಲ್ಗೊಳ್ಳುವುದು ಅತ್ಯಗತ್ಯ ಎಂದರು.
ಶಿಬಿರಾರ್ಥಿಗಳು ರೈತರೊಂದಿಗೆ ಹಲವು ಬಗೆಯ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿ, ಹಲವಾರು ರೈತ ಸಹಕಾರಿ ಕಾರ್ಯಕ್ರಮಗಳನ್ನು ಮಾಡಿದ್ದು, ರೈತರ ಜಮೀನಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬಿಡುಗಡೆಗೊಳಿಸಿರುವ ವಿವಿಧ ರೀತಿಯ ನೂತನ ತಳಿಗಳು ಹಾಗೂ ಕೃಷಿ ತಂತ್ರಜ್ಞಾನಗಳೊಂದಿಗೆ ವೈವಿಧ್ಯಮಯ ಬೆಳೆ ಪದ್ಧತಿಗಳಿಗೆ ಅನುಗುಣವಾಗಿ ರೈತರ ಸಹಭಾಗಿತ್ವದಲ್ಲಿ ಬೆಳೆಗಳನ್ನು ಬೆಳೆಸಿ ಸುತ್ತಮುತ್ತಲಿನ ರೈತರುಗಳಿಗೆ ಪರಿಚಯಿಸಲಾಯಿತು.ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ಪೌಷ್ಟಿಕ ಕೈತೋಟ, ಸಮಗ್ರ ಬೇಸಾಯ ಕೃಷಿ ಪದ್ಧತಿಗಳು, ಕುರಿ, ಕೋಳಿ, ಮೇಕೆ ಸಾಕಾಣಿಕೆ, ವಿವಿಧ ಬಗೆಯ ಔಷಧೀಯ ಸಸಿಗಳು, ಜಲಕೃಷಿ, ಸಮಗ್ರ ಕೀಟ ನಿರ್ವಹಣೆ, ಸಾವಯವ ಕೃಷಿ ಕುರಿತಾದ ಮಾಹಿತಿ, ಜೈವಿಕ ಇಂಧನ ಸಸ್ಯಗಳ ತಾಕು, ಕಿರು ಜಲಾನಯನ ಮಾದರಿ ಹಾಗೂ ಕೃಷಿ ಯಂತ್ರೋಪಕರಣಗಳು ರೈತ ಸಹಭಾಗಿತ್ವ ತಂತ್ರಜ್ಞಾನ ಪ್ರಾತ್ಯಕ್ಷಿಕಗಳ ತಾಕಿನ ವಿಶೇಷ ಆಕರ್ಷಣೆಗಳಾಗಿವೆ.
ಕಾರ್ಯಕ್ರಮದಲ್ಲಿ, ಕೃಷಿ ವಿಸ್ತರಣೆ ನಿರ್ದೇಶಕರಾದ ಡಾ.ವೈ.ಎನ್. ಶಿವಲಿಂಗಯ್ಯ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ. ಜಿ ಹನುಮಂತರಾಯ, ಗ್ರಾಮಪಂಚಾಯತಿ ಅಧ್ಯಕ್ಷ ಎಂ.ಶ್ರೀನಿವಾಸ್ ಮತ್ತು ಶಿಬಿರಾಧಿಕಾರಿ ಡಾ.ಹೆಚ್. ಕೆ ಪಂಕಜ, ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಉಪಸ್ಥಿತರಿದ್ದರು.5ಕೆಡಿಬಿಪಿ1-
ದೊಡ್ಡಬಳ್ಳಾಪುರ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ಕೃಷಿ ಅಧ್ಯಯನ ವಿಭಾಗದಿಂದ ನಡೆಯುತ್ತಿರುವ ಕಾರ್ಯಾನುಭವ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮಾಹಿತಿ ನೀಡಲಾಯಿತು.