ಸಾರಾಂಶ
ಹಿರೇಗುಂಟನೂರು ಹೋಬಳಿ ವಿವಿಧ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಕೀಟ ಶಾಸ್ತ್ರಜ್ಞರು
ಕನ್ನಡಪ್ರಭ ವಾರ್ತೆ ಚಿತ್ರದುರ್ಗಲದ್ದಿಹುಳು ಬಾಧೆಯಿಂದ ಬೇಸತ್ತ ರೈತರ ನೆರವಿಗೆ ಧಾವಿಸಿರುವ ಕೃಷಿ ಇಲಾಖೆ ಅಧಿಕಾರಿಗಳು ಈ ಸಂಬಂಧ ತಾಂತ್ರಿಕ ಮಾಹಿತಿ ನೀಡಿದ್ದಾರೆ. ಮೆಕ್ಕೆಜೋಳ ಜೊತೆ ಅಂತರ ಬೆಳೆಯಾಗಿ ತೊಗರಿ ನಾಟಿ ಮಾಡಿದರೆ ಲದ್ದಿ ಹುಳುಗಳ ಕಾಟ ನಿಯಂತ್ರಿಸಬಹುದು ಎಂದು ಹಿರಿಯೂರು ತಾಲೂಕಿನ ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ ಡಾ.ಎಸ್.ಓಂಕಾರಪ್ಪ ಸಲಹೆ ನೀಡಿದ್ದಾರೆ.
ತಾಲೂಕಿನ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯ ವಿಜಾಪುರ ಗ್ರಾಮದ ರೈತ ಮಂಜುನಾಥ್ ರವರ ಮೆಕ್ಕೆಜೋಳ ತಾಕಿಗೆ ಭೇಟಿ ನೀಡಿ, ಲದ್ದಿ ಹುಳುಗಳ ಹತೋಟಿ ಕ್ರಮಗಳ ಕುರಿತು ರೈತರಿಗೆ ಸಲಹೆ ನೀಡಿದರು.ಮೆಕ್ಕೆಜೋಳ ನಾಟಿ ಮಾಡದೇ ಇರುವವರು ಮೆಕ್ಕೆಜೋಳ ಬೆಳೆಯಲ್ಲಿ ತಲಾ ಎಂಟು ಸಾಲಿಗೆ ಒಂದರಂತೆ ತೊಗರಿ ಬೆಳೆ ಹಾಕುವುದರಿಂದ ಲದ್ದಿಹುಳು ಕೀಟ ಬಾಧೆ ನಿಯಂತ್ರಿಸಬಹುದು ಎಂದು ಹೇಳಿದರು.
ಈಗಾಗಲೇ ಮೆಕ್ಕೆಜೋಳ ಬಿತ್ತಿರುವ ರೈತರು ಲದ್ದಿಹುಳ ಕಾಣಿಸಿಕೊಂಡಿದ್ದರೆ ಅಂತಹವರು ಕ್ಲೊರಾಂಟ್ರನಿಲಿಪ್ರೋಲ್ 18.5 ಎಸ್.ಸಿ ಕೀಟನಾಶಕವನ್ನು 0.3 ಮಿಲಿಯಷ್ಟು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ಎಮಾಮೆಕ್ಟಿನ್ ಬೆಂಜೊಯೇಟ್ 5ಎಸ್.ಜಿ ಕೀಟನಾಶಕವನ್ನು 0.3 ಗ್ರಾಂ ನಷ್ಟು ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯೊಳಗೆ ಸಿಂಪಡಣೆ ಮಾಡಿದಾಗ ಮಾತ್ರ ಪರಿಣಾಮಕಾರಿಯಾಗಿ ಹುಳಗಳ ಹತೋಟಿ ಮಾಡಬಹುದು ಎಂದು ಹೇಳಿದರು.ಸೈನಿಕ ಹುಳುಗಳ ಪತಂಗಳು ಎಲೆ ಕೆಳಗೆ ಗುಂಪು ಗುಂಪಾಗಿ ಮೊಟ್ಟೆ ಇಟ್ಟಿರುತ್ತವೆ, ಇವುಗಳನ್ನು ಗುರುತಿಸಿ ಔಷಧಿ ಸಿಂಪಡಣೆ ಮಾಡುವುದು ಸೂಕ್ತ, ಅಲ್ಲದೆ ಎಕರೆಗೆ 5 ಮೋಹಕ ಬಲೆಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು. ರೈತರು ನಿರಂತರವಾಗಿ ಮೆಕ್ಕೆಜೋಳ ಬೆಳೆಯುತ್ತಿದ್ದರೆ ಮಾಗಿ ಉಳುಮೆ ಮಾಡಿದರೆ ಮಣ್ಣಿನಲ್ಲಿ ಕೋಶಗಳನ್ನು ನಾಶಪಡಿಸಬಹುದು, ಅಥವಾ ಬೆಳೆ ಪರಿವರ್ತನೆ ಮಾಡುವುದು ಸೂಕ್ತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರೇಗುಂಟನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಎನ್.ಧನರಾಜ್, ರೈತರಾದ ವಿಜಾಪುರದ ಎಸ್.ಎಂ.ತಿಪ್ಪೇಸ್ವಾಮಿ, ಅಜ್ಜಣ್ಣ, ಈಶ್ವರಪ್ಪ, ಮಂಜುನಾಥ್, ಮತ್ತಿತರರು ಉಪಸ್ಥಿತರಿದ್ದರು.-----
ಪೋಟೋ ಕ್ಯಾಪ್ಸನ್: 23 ಸಿಟಿಡಿ 2ಚಿತ್ರದುರ್ಗ ತಾಲೂಕಿನ ವಿಜಾಪುರ ಗ್ರಾಮದ ರೈತ ಮಂಜುನಾಥ್ ರವರ ಮೆಕ್ಕೆಜೋಳ ತಾಕಿಗೆ ಹಿರಿಯೂರು ಕೆವಿಕೆ ಕೀಟ ಶಾಸ್ತ್ರಜ್ಞ ಡಾ.ಎಸ್.ಓಂಕಾರಪ್ಪ ರವರು ಭೇಟಿ ನೀಡಿ, ಲದ್ದಿ ಹುಳು ಹತೋಟಿ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.