ನೌಕರರ ಸಂಘ ಸದಾ ಕ್ರಿಯಾಶೀಲವಾಗಿರಲಿ

| Published : Jul 16 2025, 12:45 AM IST

ಸಾರಾಂಶ

ಇಲ್ಲಿ ನೌಕರರಷ್ಟೇ ಅಲ್ಲದೆ ಉದ್ಯಮಿಗಳು, ಖಾಸಗಿಯವರು ಇದ್ದಾರೆ ಎಲ್ಲರನ್ನ ಒಟ್ಟುಗೂಡಿಸಿಕೊಂಡು ಮುಂದೆ ಸಾಗುತ್ತಿದ್ದೇವೆ

ಕನ್ನಡಪ್ರಭ ವಾರ್ತೆ ಸರಗೂರುಅಖಿಲ ನಾಮಧಾರಿಗೌಡ ನೌಕರರ ಸಂಘ ಎಚ್‌.ಡಿ. ಕೋಟೆ ಮತ್ತು ಸರಗೂರು ಎರಡೂ ತಾಲೂಕುಗಳಲ್ಲಿ ಸದಾ ಕ್ರಿಯಾಶೀಲವಾಗಿದ್ದು, ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ ವಿದ್ಯಾರ್ಥಿಗಳಿಗೆ, ನಿವೃತ್ತರಿಗೆ, ಮುಖಂಡರಿಗೆ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಾಲೂಕು ಅಖಿಲ ನಾಮಧಾರಿಗೌಡ ಸಮಾಜದ ಅಧ್ಯಕ್ಷ ಎಂ.ಎನ್. ಭೀಮರಾಜು ಪ್ರಶಂಸೆ ವ್ಯಕ್ತಪಡಿಸಿದರು. ಪಟ್ಟಣದ ಅಖಿಲ ನಾಮಧಾರಿ ಸಮುದಾಯ ಭವನದಲ್ಲಿ ಸಂಘದ ಮಹಾಸಭೆ ಮತ್ತು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತರಿಗೆ, ಮುಖಂಡರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಘ ಅನೇಕ ಹೆಜ್ಜೆ ಗುರುತುಗಳನ್ನು ಮೂಡಿ ಸುತ್ತ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಖಿಲ ನಾಮಧಾರಿಗೌಡ ನೌಕರರ ಸಂಘದ ಅಧ್ಯಕ್ಷ ಎಸ್. ನಾಗೇಂದ್ರ ಮಾತನಾಡಿ, ಇಲ್ಲಿ ನೌಕರರಷ್ಟೇ ಅಲ್ಲದೆ ಉದ್ಯಮಿಗಳು, ಖಾಸಗಿಯವರು ಇದ್ದಾರೆ ಎಲ್ಲರನ್ನ ಒಟ್ಟುಗೂಡಿಸಿಕೊಂಡು ಮುಂದೆ ಸಾಗುತ್ತಿದ್ದೇವೆ ಎಂದರು.ನಾಮಧಾರಿಗೌಡ ಸಮಾಜದ ಕಾರ್ಯದರ್ಶಿ ಎ. ಅಂಕಪ್ಪ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿಕೊಟ್ಟರು.ನಿವೃತ್ತ ಪಿಡಿಒ ಬಿ.ಎಸ್. ರೂಪೇಶ್, ನಿವೃತ್ತ ಶಿಕ್ಷಕ ಡಿ. ಶಂಕರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಬಿ.ಎಂ. ನಾಗೇಶ್, ಹಿರೇಹಳ್ಳಿ ಗ್ರಾಪಂ ಅಧ್ಯಕ್ಷ ಆರ್. ಜಯರಾಮ್, ಸಂಘದ ಖಜಾಂಚಿ ದಿನೇಶ್, ಸಿದ್ದರಾಮೇಗೌಡ ಅವರನ್ನು ಸನ್ಮಾನಿಸಿತು.ಸಮುದಾಯ ಭವನದ ಆವರಣದಲ್ಲಿ ಕಾಳಿಹುಂಡಿಯ ಶಿಕ್ಷಕ ದಿ.ಕೆ.ಎಂ. ವೀರಭದ್ರಯ್ಯ ಅವರ ಸ್ಮರಣಾರ್ಥ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡೆ ಇನ್ನಿತರ ಸ್ಪರ್ಧೆಗಳನ್ನು ದೈಹಿಕ ಶಿಕ್ಷಣ ನಿರ್ದೇಶಕ ಕೆ.ವಿ. ರಾಘವೇಂದ್ರ ಮತ್ತವರ ತಂಡ ನಡೆಸಿಕೊಟ್ಟಿತು. ಸಂಘದ ಕಾರ್ಯಕಾರಿ ಮಂಡಳಿ ನಿರ್ದೇಶಕರಾದ ವಿಶ್ವನಾಥ್, ನಾಗರಾಜ್, ಅಭಿನಾಶ್ ಮುಂತಾದವರು ಭಾಗವಹಿಸಿದ್ದರು.ಚಿರಶ್ರೀ ಮತ್ತು ಧೃತಿ ಪ್ರಾರ್ಥಿಸಿದರು. ಬಿ.ಎಸ್. ಸುಂದರ್ ರಾಜ್ ಸ್ವಾಗತಿಸಿದರು. ಬಿ.ಎಂ. ನಾಗೇಶ್ ಮಾತನಾಡಿದರು. ಕಾರ್ಯದರ್ಶಿ ಪ್ರಸನ್ನ ವಾರ್ಷಿಕ ವರದಿ ಮಂಡಿಸಿದರು. ಡಿ. ಪ್ರಕಾಶ್ ನಿರೂಪಿಸಿದರು. ಎ.ವಿ. ವಿಜಯ್ ವಂದಿಸಿದರು.