ನರೇಗಾದಡಿ ಜೀವಕಳೆ ಪಡೆದ ಅಕ್ಕನಾಗಮ್ಮ ಕೆರೆ!

| Published : Jun 17 2024, 01:31 AM IST

ಸಾರಾಂಶ

ಗ್ರಾಮೀಣ ಭಾಗದ ಜನರಿಗೆ ನರೇಗಾ ವರವಾಗಿ ಪರಿಣಮಿಸಿದೆ. ದುಡಿಯಲು ಗೂಳೆ ಹೋಗುತ್ತಿದ್ದ ಜನರಿಗೆ ಕೆಲಸ ನೀಡಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದೆ. ಅಲ್ಲದೇ ನರೇಗಾದಡಿಯಲ್ಲಿ ಹಾಳಾದ, ಅಸ್ವಚ್ಛತೆಯಿಂದ ಕೂಡಿರುವ ಕೆರೆಗಳಿಗೆ ಕಾಯಕಲ್ಪ ನೀಡುವ ಕೆಲಸ ಕೂಡ ಆಗುತ್ತಿದೆ. ಹೀಗಾಗಿಯೇ ಅಕ್ಕನಾಗಮ್ಮ ಕೆರೆಗೆ ಇದೀಗ ಜೀವಕಳೆ ಬಂದಿದ್ದು, ಪ್ರಾಣಿಗಳಿಗೆ ಆಸರೆಯಾಗಿ, ಅಂತರ್ಜಲ ವೃದ್ಧಿಗೆ ಕಾರಣವಾಗಿದೆ.

ಬಸವರಾಜ ನಂದಿಹಾಳ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಗ್ರಾಮೀಣ ಭಾಗದ ಜನರಿಗೆ ನರೇಗಾ ವರವಾಗಿ ಪರಿಣಮಿಸಿದೆ. ದುಡಿಯಲು ಗೂಳೆ ಹೋಗುತ್ತಿದ್ದ ಜನರಿಗೆ ಕೆಲಸ ನೀಡಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದೆ. ಅಲ್ಲದೇ ನರೇಗಾದಡಿಯಲ್ಲಿ ಹಾಳಾದ, ಅಸ್ವಚ್ಛತೆಯಿಂದ ಕೂಡಿರುವ ಕೆರೆಗಳಿಗೆ ಕಾಯಕಲ್ಪ ನೀಡುವ ಕೆಲಸ ಕೂಡ ಆಗುತ್ತಿದೆ. ಹೀಗಾಗಿಯೇ ಅಕ್ಕನಾಗಮ್ಮ ಕೆರೆಗೆ ಇದೀಗ ಜೀವಕಳೆ ಬಂದಿದ್ದು, ಪ್ರಾಣಿಗಳಿಗೆ ಆಸರೆಯಾಗಿ, ಅಂತರ್ಜಲ ವೃದ್ಧಿಗೆ ಕಾರಣವಾಗಿದೆ.

ತಾಲೂಕಿನ ಇಂಗಳೇಶ್ವರ ಗ್ರಾಮದಿಂದ ಒಂದು ಕಿಮೀ ಅಂತರದಲ್ಲಿರುವ ಮೂರು ಎಕರೆ ವಿಶಾಲವಾದ ಅಕ್ಕನಾಗಮ್ಮ ಕೆರೆಯಲ್ಲಿ ಈಗ ಜಲ ಕಳೆ ಬಂದಿದೆ. ಸುತ್ತಮುತ್ತ ಗುಡ್ಡ ಪ್ರದೇಶ, ತಗ್ಗು-ದಿನ್ನೆ ಏರಿಳಿತ ಪ್ರದೇಶದಿಂದ ಆವರಿಸಿ ಚಿಕ್ಕದಾದ ಅರಣ್ಯ ಪ್ರದೇಶದಂತೆ ಕಾಣುತ್ತಿದ್ದ ಈ ಕೆರೆ ಇದೀಗ ನರೇಗಾ ಯೋಜನೆಯಡಿ ಅಮೃತ ಸರೋವರ ಅಭಿಯಾನದಡಿ ಅಭಿವೃದ್ಧಿಯಾಗಿದೆ. ಇದರಿಂದ ಕೆರೆಯಲ್ಲಿ ನೀರು ತುಂಬಿಕೊಂಡು ನಳನಳಿಸುತ್ತಿದೆ.

ಸಾರ್ಥಕವಾದ ಶ್ರಮ:

ಅಕ್ಕನಾಗಮ್ಮ ಕೆರೆ ಪ್ರದೇಶದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಿಂದ ನಿತ್ಯ ನೂರಾರು ದನಕರು, ಕುರಿಗಳು ಮೇಯಲು ಬರುತ್ತವೆ. ಈ ಪ್ರದೇಶದಲ್ಲಿ ಸಾಕಷ್ಟು ಹಸಿರಿದ್ದರೂ ನೀರಿನ ದಾಹ ನೀಗಿಸಿಕೊಳ್ಳುವ ನೀರು ಮಾತ್ರ ಇಲ್ಲಿ ಇರಲಿಲ್ಲ. ಈ ಪ್ರದೇಶದಲ್ಲಿ ಎಷ್ಟೇ ಮಳೆಯಾದರೂ ನೀರು ನಿಲ್ಲದೇ ಪಕ್ಕದಲ್ಲಿರುವ ಹಳ್ಳಕ್ಕೆ ಹರಿದು ಹೋಗುತ್ತಿತ್ತು. ಇದರಿಂದಾಗಿ ಮೇವು ಅರಸಿ ಬರುವ ಜಾನುವಾರು-ಕುರಿಗಳಿಗೆ ಕುಡಿಯಲು ನೀರು ಸಿಗದೇ ಬಳಲುವ ಪರಿಸ್ಥಿತಿಯಿತ್ತು. ಇದನ್ನರಿತ ಗ್ರಾಮಸ್ಥರು, ಗ್ರಾಪಂನವರು ಅಕ್ಕನಾಗಮ್ಮ ಗುಹೆ ಹತ್ತಿರವಿರುವ ಈ ತೆಗ್ಗು ಪ್ರದೇಶದಲ್ಲಿರುವ ಕೆರೆ ಅಭಿವೃದ್ಧಿ ಮಾಡಲು ನಿರ್ಧರಿಸಿದರು.

ಮಳೆ ನೀರನ್ನು ತಡೆಯುವ ಯೋಜನೆ ರೂಪಿಸಿದರು. ನರೇಗಾ ಯೋಜನೆಯಡಿ ಅಮೃತ ಸರೋವರ ಅಭಿಯಾನದಡಿ ಕೆರೆ ಅಭಿವೃದ್ಧಿ ಮಾಡುವ ಕುರಿತು ಗಮನ ಹರಿಸಿ ಅಂದಾಜು ಮೊತ್ತ ₹೯.೮೦ ಲಕ್ಷ ವೆಚ್ಚದಲ್ಲಿ ೨೦೨೩ ವರ್ಷದ ಮೇ ತಿಂಗಳಲ್ಲಿ ಕಾಮಗಾರಿ ಆರಂಭಿಸಿದರು. 2024ರ ಜನವರಿಯಲ್ಲಿ ಕೆರೆ ಕಾಮಗಾರಿ ಸಂಪೂರ್ಣ ಮುಗಿದು ಲೋಕಾರ್ಪಣೆಗೊಂಡಿತು. ಗ್ರಾಮಸ್ಥರ, ಅಧಿಕಾರಿಗಳ ಶ್ರಮವೆಂಬಂತೆ ಈ ವರ್ಷ ಉತ್ತಮ ಮಳೆಯಾಗ ತೊಡಗಿದೆ. ಹೀಗಾಗಿ ಅಕ್ಕನಾಗಮ್ಮನ ಕೆರೆಗೆ ನೀರು ಹರಿದು ಬಂದು ಜಲರಾಶಿ ಮೈದಳದಿದೆ.

ಪ್ರಾಣಿಗಳಿಗೆ ಕೆರೆಯೇ ಆಸರೆ:

ಜಲಸಂರಕ್ಷಣೆ, ಅಂತರ್ಜಲಮಟ್ಟ ವೃದ್ಧಿಸುವುದು, ಜನ-ಜಾನುವಾರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಮೃತ ಸರೋವರ ಯೋಜನೆಯಡಿಯಲ್ಲಿ ಅಭಿವೃದ್ಧಿಗೊಂಡ ಈ ಕೆರೆ ಇದೀಗ ಇಂಗಳೇಶ್ವರ ಗ್ರಾಮದ ಜೀವನಾಡಿಯಾಗಿ ಮೈದಳೆದು ನಿಂತಿದೆ. ಸರ್ಕಾರಿ ಪಾಳುಬಿದ್ದ ಜಮೀನಿನಲ್ಲಿ ಮೇಯಲು ಹೋಗುವ ದನ-ಕರುಗಳಿಗೆ, ಕುರಚಲುಗುಡ್ಡದಲ್ಲಿ ವಾಸವಾಗಿರುವ ನರಿ, ಮೊಲ, ನವಿಲು, ಪಕ್ಷಿಗಳಿಗೆ ಈ ಕೆರೆ ಆಶ್ರಯ ತಾಣವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ನಿರೀಕ್ಷೆಯಂತೆ ನೀರು ಸಂಗ್ರಹಗೊಂಡರೆ ಸುತ್ತಮುತ್ತಲಿನ ರೈತರಿಗೆ ತುಂಬಾ ಆಸರೆಯಾಗಲಿದೆ. ಸುತ್ತಮುತ್ತಲಿನ ಜಮೀನಿನಲ್ಲಿರುವ ಬೋರವೆಲ್‌ಗಳ ಅಂತರ್ಜಲಮಟ್ಟ ವೃದ್ದಿಗೂ ಪೂರಕವಾಗಲಿದೆ.

----

ಕೋಟ್‌

ಪಾಳುಬಿದ್ದ ಅಕ್ಕನಾಗಮ್ಮಕೆರೆಗೆ ನೀರು ಬಂದರೆ ಜಾನುವಾರುಗಳಿಗೆ ಕುಡಿಯಲು ನೀರು ಸಿಗುವ ಜೊತೆಗೆ ಸುತ್ತಮುತ್ತಲೂ ಅಂತರ್ಜಲ ಮಟ್ಟಕ್ಕೆ ಪೂರಕವಾಗುತ್ತದೆ ಎಂಬ ಉದ್ದೇಶದಿಂದ ಸುಮಾರು ೧.೫ ಕಿಮೀ ದೂರದಲ್ಲಿರುವ ಮುಳವಾಡ ಏತನೀರಾವರಿಯ ಕುದರಿಸಾಲವಾಡಗಿ ಮುಖ್ಯ ಕಾಲುವೆಯಿಂದ ೧೨೦ ಪೈಪ್ ಜೋಡಿಸಿ ಕಾಲುವೆಯಿಂದ ಕೆರೆ ತುಂಬಿಸಲಾಗಿದೆ. ಈ ಕಾರ್ಯದಲ್ಲಿ ಗ್ರಾಮದ ಯುವಕರು, ಗ್ರಾಮಸ್ಥರು ಕೈಜೋಡಿಸಿದರು. ಈ ಪ್ರದೇಶವನ್ನು ಸೌಂದರ್ಯಿಕರಿಸಿ ಬೋಟಿಂಗ್ ಮಾಡಿದರೆ ಇದೊಂದು ಪ್ರವಾಸಿ ತಾಣವಾಗುವದಲ್ಲಿ ಸಂದೇಹವಿಲ್ಲ.

-ಅರವಿಂದ ಕುಲಕರ್ಣಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ

---

ಗ್ರಾಮದ ಕೂಲಿ ಕುಟುಂಬಗಳಿಗೆ ಈ ಕಾಮಗಾರಿಯಲ್ಲಿ ನಿತ್ಯ ಕೆಲಸ ಕೊಡಲಾಗಿದೆ. ಮಹಿಳೆಯರು ಹೆಚ್ಚಾಗಿ ಭಾಗವಹಿಸುವ ಮೂಲಕ ಮಹಿಳಾ ಸಬಲೀಕರಣ ದ್ವಿಗುಣಗೊಂಡಿದೆ. ಕೆರೆಯ ನಿರ್ಮಾಣ ಕಾಮಗಾರಿಯಿಂದ ಸಮತಟ್ಟ ಅಭಿವೃದ್ಧಿಯಾಗಿ ಕಾಲುವೆ ಮೂಲಕ ಬಿಟ್ಟ ನೀರು, ಮಳೆ ನೀರು ಸೇರಿಕೊಂಡು ನೀರು ಸಂಗ್ರಹಗೊಂಡು ರೈತರಿಗೆ ಅನುಕೂಲವಾಗಲಿದೆ. ಇದರ ಸುತ್ತಮುತ್ತಲಿನ ರೈತರ ಬೋರ್‌ವೆಲ್‌ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ.

-ಬನ್ನೆಪ್ಪ ಡೋಣೂರ, ಗ್ರಾಮ ಪಂಚಾಯಿತಿ ಅಧ್ಯಕ್ಷ

---

ನರೇಗಾ ಯೋಜನೆಯ ಮೂಲ ಆಶಯದಂತೆ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಜೊತೆಗೆ ಆಸ್ತಿಗಳ ಸೃಜನೆಗೆ ಮುನ್ನಡಿ ಬರೆದ ಇಂಗಳೇಶ್ವರ ಗ್ರಾಮ ಪಂಚಾಯಿತಿ ನರೇಗಾ ಕೂಲಿಕಾರರ ಹಿತದೃಷ್ಟಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆಸ್ತಿಗಳ ಸೃಜನೆ ಜೊತೆಗೆ ಬೇಡಿಕೆಗೆ ತಕ್ಕಂತೆ ನರೇಗಾ ಕೂಲಿಕಾರರಿಗೆ ಕೆಲಸ ಒದಗಿಸಿ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿದೆ. ಈ ಕೆರೆಯ ನಿರ್ಮಾಣ ಮಾಡುವ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಒದಗಿಸಿ ಗೂಳೆ ತಪ್ಪಿಸಲಾಗಿದೆ.

-ಜೆ.ಎಸ್.ದೇವರನಾವದಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ