ಆಲೂರು ಸಿದ್ದಾಪುರ: ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಸನ್ಮಾನ

| Published : Jul 11 2025, 01:49 AM IST

ಆಲೂರು ಸಿದ್ದಾಪುರ: ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ನಿವೃತ್ತಿ ಪಡೆದು ಗ್ರಾಮಕ್ಕೆ ಆಗಮಿಸಿದ ಯೋಧನನ್ನು ಮೈಲಾತಪುರ ಗ್ರಾಮಸ್ಥರು ಬರಮಾಡಿಕೊಂಡು ಗೌರವಿಸಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕೇಂದ್ರಿಯ ಮೀಸಲು ಪಡೆಯಲ್ಲಿ 37 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ, ನಿವೃತ್ತಿ ಪಡೆದು ಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧನನ್ನು ಮೈಲಾತಪುರ ಗ್ರಾಮಸ್ಥರು ಬರಮಾಡಿಕೊಂಡು ಗೌರವಿಸಿದರು. ಆಲೂರು ಸಿದ್ದಾಪುರ ಸಮೀಪದ ಮೈಲಾತಪುರ ಗ್ರಾಮದ ನಿವೃತ್ತ ಯೋಧ ಮಂಜುನಾಥ್ ಮತ್ತು ಅವರ ಪತ್ನಿಯನ್ನು ಸನ್ಮಾನಿಸಲಾಯಿತು. ಇವರೊಂದಿಗೆ ಅಕ್ಕ ಪಕ್ಕದ ಗ್ರಾಮಗಳ ಮಾಜಿ ಸೈನಿಕರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಮಂಜುನಾಥ್, ದೇಶ ಸೇವೆ ಮಾಡುವ ಭಾಗ್ಯ ನನಗೆ ಸಿಕ್ಕಿರುವುದಕ್ಕೆ ಹೆಮ್ಮೆ ಪಡುತ್ತೇನೆ. 37 ವರ್ಷಗಳಲ್ಲಿ ಹಲವು ಭಾರಿ ಪ್ರಾಣ ಕಳೆದು ಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗಿತ್ತು. ನಮ್ಮ ಕಣ್ಣ ಎದುರಿಗೆ ಹಲವು ಸಹೋದ್ಯೋಗಿಗಳು ಜೀವತೆತ್ತಿದ್ದಾರೆ. ಇವೆಲ್ಲಾ ನನ್ನ ವೃತ್ತಿ ಬದುಕಿನ ಅತ್ಯಂತ ದುಃಖದ ಕ್ಷಣಗಳು ಎಂದು ಭಾವುಕರಾಗಿ ನುಡಿದರು. ತಮ್ಮ ಬಾಲ್ಯ ಸ್ನೇಹಿತರು, ಗ್ರಾಮಸ್ಥರು ವೃತ್ತಿ ಬದುಕಿನ ಸಿಹಿ, ಕಹಿ ಘಟನೆಗಳನ್ನು ಮೆಲುಕು ಹಾಕಿದರು.

ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ.ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಈ ದೇಶದ ಸೈನಿಕರ ತ್ಯಾಗದಿಂದ ನಾವುಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಆದ್ದರಿಂದ ನಾವು ಸೈನಿಕರು ಮತ್ತು ಮಾಜಿ ಸೈನಿಕರನ್ನು ಗೌರವ ಭಾವನೆಯಿಂದ ಕಾಣಬೇಕು ಎಂದರು. ಮೈಲಾತ್ಪುರ ಸಣ್ಣೆಗೌಡರ ಕುಟುಂಬ ರಾಷ್ಟ್ರ ರಕ್ಷಣೆಗೆ ಮಂಜುನಾಥ್ ಹಾಗು ಧರ್ಮದ ರಕ್ಷಣೆಗೆ ಶಿಡಿಗಳಲೆ ಮಠದ ಸ್ವಾಮೀಜಿಯಂತಹ ಎರಡು ಜನರನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಶ್ಲಾಘಿಸಿದರು.ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ ಮಾತನಾಡಿ, ಅನ್ನದಾತ ರೈತರು ಹಾಗು ಸೈನಿಕರು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಇಬ್ಬರಿಗೂ ಯಾವುದೇ ಚ್ಯುತಿ ಬಾರದಂತೆ ಗೌರವ ಸಲ್ಲಬೇಕೆಂದರು.ಇದೇ ಸಂದರ್ಭ ಮಾಜಿ ಸೈನಿಕರಾದ ಅಂಕನಹಳ್ಳಿ ಮಹೇಶ್, ಸೋಮಣ್ಣ, ಶೆಟ್ಟಿಹಳ್ಳಿ ಜಗದೀಶ್ ಹಾಗು ನಿವೃತ್ತ ಶಿಕ್ಷಕ ಬಡುಬನಹಳ್ಳಿಯ ಷಣ್ಮುಖಯ್ಯ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಆಯೋಜಕರಾದ ಪರಮೇಶ್, ಕೃಷಿಕ ಬಸಪ್ಪ, ಶಿಕ್ಷಕರಾದ ಕುಮಾರ್, ಸುರೇಶ್ ಇದ್ದರು.