ಪ್ರಾಚೀನ ನಾಗರಿಕತೆ ಜ್ಞಾನ ವ್ಯವಸ್ಥೆಯ ಮೇಲೆ ನಿಂತಿದೆ: ಡಾ. ರಾಜ್ ವೇದಂ

| Published : Feb 10 2024, 01:50 AM IST

ಪ್ರಾಚೀನ ನಾಗರಿಕತೆ ಜ್ಞಾನ ವ್ಯವಸ್ಥೆಯ ಮೇಲೆ ನಿಂತಿದೆ: ಡಾ. ರಾಜ್ ವೇದಂ
Share this Article
  • FB
  • TW
  • Linkdin
  • Email

ಸಾರಾಂಶ

13 ಸಾವಿರ ವರ್ಷ ಪೂರ್ವಜರ ಇತಿಹಾಸ ಉಳ್ಳ ಭಾರತೀಯ ಪ್ರಾಚೀನ ನಾಗರಿಕತೆಯು ಇತರ ನಾಗರಿಕತೆಗಳ ಮೇಲೆ ಪ್ರಭಾವ ಬೀರಿದ ಜ್ಞಾನ ವ್ಯವಸ್ಥೆಯನ್ನೊಳಗೊಂಡಿದೆ ಎಂದು ಅಮೆರಿಕ ಹಿಂದೂ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ರಾಜ್ ವೇದಂ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

13 ಸಾವಿರ ವರ್ಷ ಪೂರ್ವಜರ ಇತಿಹಾಸ ಉಳ್ಳ ಭಾರತೀಯ ಪ್ರಾಚೀನ ನಾಗರಿಕತೆಯು ಇತರ ನಾಗರಿಕತೆಗಳ ಮೇಲೆ ಪ್ರಭಾವ ಬೀರಿದ ಜ್ಞಾನ ವ್ಯವಸ್ಥೆಯನ್ನೊಳಗೊಂಡಿದೆ ಎಂದು ಅಮೆರಿಕ ಹಿಂದೂ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ರಾಜ್ ವೇದಂ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯವು ದಿ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭಾರತೀಯ ಜ್ಞಾನ ಪರಂಪರೆ’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.

ಭಾರತೀಯರ ಮೇಲಿರುವ ಆರ್ಯ-ದ್ರಾವಿಡ ಆಕ್ರಮಣ, ವಲಸೆ ಸಿದ್ಧಾಂತಗಳು ಬ್ರಿಟಿಷ್‌ ಕಾಲದಲ್ಲಿ ಬರೆದ ಕಟ್ಟು ಕತೆಯಾಗಿದೆ. ಭಾರತೀಯರು ಬ್ಯಾಬಿಲೋನ್, ಗ್ರೀಸ್ ನಾಗರಿಕತೆಯಿಂದ ಜ್ಞಾನ ವ್ಯವಸ್ಥೆಗಳನ್ನು ಅಳವಡಿಕೊಂಡರು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಬದಲಿಗೆ, ಮಾನವೀಯ, ಪ್ರಬುದ್ಧ ತತ್ತ್ವಗಳನ್ನೊಳಗೊಂಡ ಸ್ವತಂತ್ರ ಅಭಿವೃದ್ಧಿ ಜ್ಞಾನ ವ್ಯವಸ್ಥೆಗಳಿಂದಾಗಿ ಭಾರತ ಅಭಿವೃದ್ಧಿಯಾಯಿತು ಎಂದು ಪುರಾತತ್ತ್ವಶಾಸ್ತ್ರ ಹೇಳುತ್ತದೆ ಎಂದರು.

ಅಸಂಸ್ಕೃತ, ಆಕ್ರಮಣಕಾರಿ, ಅಮಾನವೀಯ ತತ್ತ್ವಚಿಂತನೆಗಳನ್ನು ಭಾರತೀಯರು ಅನುಸರಿಸುತ್ತಿದ್ದರು ಎಂಬುದು ಬ್ರಿಟಿಷ್ ನಿರ್ಮಿತ ನಕಲಿ ಇತಿಹಾಸವಾಗಿದೆ. ಇತ್ತೀಚಿನ ನಾಗರಿಕತೆಯ ಒಳಹರಿವಿನೊಂದಿಗೆ ಭಾರತ ಅಭಿವೃದ್ಧಿಗೊಂಡಿತು ಎಂಬುದು ಕಪೋಕಲ್ಪಿತಕತೆಯಾಗಿದ್ದು, ಭಾರತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ತನ್ನದೇ ನಾಗರಿಕ ವ್ಯವಸ್ಥೆಯಲ್ಲಿ, ಪರಂಪರೆಯಲ್ಲಿ ಅಭಿವೃದ್ಧಿಯಾಯಿತು ಎಂದರು.

ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಡಾ. ಅನಂತ್‌ ಜಾಂಡೇಕರ್‌ ಮಾತನಾಡಿ, ಇತಿಹಾಸ ಸಂಸ್ಕೃತಿಯ ಸಂಕೇತ. ಇತಿಹಾಸದಿಂದ ನಮ್ಮ ಪರಂಪರೆಯನ್ನು ಕಾಣಬಹುದು. ಭಾರತದ ಸಂಸ್ಕೃತಿಯ ಬೇರನ್ನು ಅರ್ಥಮಾಡಿಕೊಂಡರೆ ಇತಿಹಾಸ ಸೃಷ್ಟಿಸಬಹುದು ಎಂದು ಹೇಳಿದರು.

ಬೆಂಗಳೂರಿನ ದಿ ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ರವಿ ಎಸ್. ಮಾತನಾಡಿ, ಭಾರತೀಯ ಇತಿಹಾಸದ ನೈಜತೆಯನ್ನು ಅರಿಯಲು ಪರಂಪರೆಯ ಆಳಕ್ಕೆ ಇಳಿಯಬೇಕು. ಬ್ರಿಟಿಷ್ ಆಡಳಿತಾವಧಿಯಲ್ಲಿ ತಿರುಚಿ ಬರೆದ ಇತಿಹಾಸವನ್ನು ಸಮಾಜಕ್ಕೆ ತಿಳಿಸಿ, ವೈಜ್ಞಾನಿಕ ಪುರಾವೆಗಳೊಂದಿಗೆ ಭಾರತೀಯಇತಿಹಾಸದ ಅವಲೋಕನ ಮಾಡಿ, ಸಮಾಜಕ್ಕೆ ಭಾರತದ ವೈಭವವನ್ನು ತಿಳಿಸುವ ವಿದ್ಯಾರ್ಥಿ ರಾಯಭಾರಿಗಳಾಗಬೇಕು ಎಂದರು.

ಬೆಂಗಳೂರಿನ ದಿ ಮಿಥಿಕ್ ಸೊಸೈಟಿಯ ಎಂ. ಸಿ. ಸದಸ್ಯ ಪ್ರಸನ್ನಕುಮಾರ್ ಎಂ.ಆರ್‌. ಮಾತನಾಡಿ, ಜಾಗತೀಕರಣ, ಉದಾರೀಕರಣ, ಖಾಸಗೀಕರಣದಿಂದಾಗಿ ಕಲೆ, ಶಿಕ್ಷಣ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆಗೆ ತೆರೆದುಕೊಳ್ಳಬೇಕಾದ ಅವಕಾಶ ಉಂಟಾಯಿತು. ರಾಷ್ಟ್ರೀಯ ಶಿಕ್ಷಣ ನೀತಿ ಭಾರತೀಯಜ್ಞಾನ ಪರಂಪರೆಯ ಬೇರನ್ನು ಹುಡುಕಿ, ಸಾಂಸ್ಕೃತಿಕ ವೈಭವವನ್ನುಅರಿಯಲು, ಗುಲಾಮಗಿರಿಯ ಮಾನಸಿಕತ್ವವೂ ದೂರಾಗಲು ಸಹಕಾರಿಯಾಯಿತು ಎಂದರು.

ಲೇಖಕ ಡಾ. ಹರೀಶ ಜಿ. ಬಿ. ಮಾತನಾಡಿ, ಜ್ಞಾನದೊಂದಿಗೆ ಕರುಣೆಯಿರಬೇಕು. ಆಗ ಮಾತ್ರ ಪಾಂಡಿತ್ಯಕ್ಕೆ ಬೆಲೆ ಬರುವುದು. ಜ್ಞಾನಿಯ ಪಾಂಡಿತ್ಯವೆಂದರೆ ಸಮಾಜದ ಕಷ್ಟ, ನೋವು, ದುಃಖಗಳಿಗೆ ಸ್ಪಂದಿಸುವುದು. ಜ್ಞಾನದ ಸಂಕೇತ ಅಲ್ಲಮ ಪ್ರಭುವಾದರೇ, ಕರುಣೆಯ ಸಂಕೇತ ಬುದ್ಧ, ಬಸವಣ್ಣ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಪ್ರೊ. ಕೊಟ್ರೇಶ್ ಎಂ., ಸಮ್ಮೇಳನದ ಸಂಚಾಲಕ ಡಾ. ಸುರೇಶ್ ಡಿ., ಡಾ. ದೇವರಾಜಪ್ಪ ಎಸ್. ಉಪಸ್ಥಿತರಿದ್ದರು.