ಕೆಮಿಕಲ್‌ ಕಂಪನಿಯಲ್ಲಿ ಮತ್ತೊಂದು ಅವಘಡ !

| N/A | Published : Jul 13 2025, 01:19 AM IST / Updated: Jul 13 2025, 10:25 AM IST

ಸಾರಾಂಶ

ಹೈಡ್ರೋಕ್ಲೋರಿಕ್‌ ಆ್ಯಸಿಡ್‌ವುಳ್ಳ ಪೈಪ್ ಸ್ಫೋಟಗೊಂಡು, ಕಾರ್ಮಿಕರೊಬ್ಬರ ಕಣ್ಣುಗಳಿಗೆ ಗಂಭೀರ ಗಾಯಗಳಾಗಿದ್ದ ಪ್ರಕರಣ ಶುಕ್ರವಾರ ಇಲ್ಲಿನ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಯಲ್ಲಿ ನಡೆದಿದ್ದ 24 ಗಂಟೆಗಳಲ್ಲೇ ಇಂತಹುದ್ದೇ ಮತ್ತೊಂದು ಪ್ರಕರಣ ಘಟಿಸಿರುವುದು ಆತಂಕ ಮೂಡಿಸಿದೆ.

  ಯಾದಗಿರಿ/ಸೈದಾಪುರ :  ಹೈಡ್ರೋಕ್ಲೋರಿಕ್‌ ಆ್ಯಸಿಡ್‌ವುಳ್ಳ ಪೈಪ್ ಸ್ಫೋಟಗೊಂಡು, ಕಾರ್ಮಿಕರೊಬ್ಬರ ಕಣ್ಣುಗಳಿಗೆ ಗಂಭೀರ ಗಾಯಗಳಾಗಿದ್ದ ಪ್ರಕರಣ ಶುಕ್ರವಾರ ಇಲ್ಲಿನ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಯಲ್ಲಿ ನಡೆದಿದ್ದ 24 ಗಂಟೆಗಳಲ್ಲೇ ಇಂತಹುದ್ದೇ ಮತ್ತೊಂದು ಪ್ರಕರಣ ಘಟಿಸಿರುವುದು ಆತಂಕ ಮೂಡಿಸಿದೆ.

ಶನಿವಾರ, ಇಲ್ಲಿನ ಫಾರ್ಮಾ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದ, ಪಶ್ಚಿಮ ಬಂಗಾಳ ಮೂಲದ ಬಿಸ್ವಜೀತ್‌ ಬೇರ್‌ (35) ಎಂಬಾತನ ಕೈಗಳಿಗೆ ಅಪಾಯಕಾರಿ ರಾಸಾಯನಿಕ ತಗುಲಿ ಗಂಭೀರ ತರಹದ ಗಾಯಗಳಾಗಿವೆ. ಎರಡೂ ಕೈಗಳು ಸುಟ್ಟು ಹೋಗಿವೆ. ಸೈದಾಪುರದ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಗಾಯಾಳು ತೆರಳಿದ್ದಾರೆ. ಘಟನೆಯ ಕುರಿತು ಮಾಧ್ಯಮಗಳೆದುರು ಹೆಚ್ಚಿನ ಮಾಹಿತಿ ನೀಡಲೆತ್ನಿಸಿದ ಆತನನ್ನು ಕಂಪನಿಯ ಕಡೆಯವರು ಎನ್ನಲಾದ ಕೆಲವರು ಬಂದು, ಯಾರಿಗೂ, ಯಾವುದನ್ನೂ ಹೇಳದಂತೆ ಕಟ್ಟಪ್ಪಣೆ ಹೊರಡಿಸಿ, ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಜೊತೆಗೆ, ಕಾರ್ಮಿಕನ ಆಧಾರ್ ಕಾರ್ಡ್ ನೀಡುವಂತೆ ಕೋರಿದಾಗ, ಅದನ್ನು ತಮ್ಮ ಬಳಿಯಿರಿಸಿಕೊಂಡಿರುವ ಕಂಪನಿಯ ಮುಖ್ಯಸ್ಥರು, ಕಾರ್ಮಿಕನ ಮೂಲಸ್ಥಳ ಗೊತ್ತಾಗದಂತೆ ಗೌಪ್ಯವಾಗಿರಿಸಲು ಯತ್ನ ನಡೆಸಿದಂತಿದೆ.

ದಿನೇ ದಿನೇ ಅಲ್ಲಿನ ಕಾರ್ಮಿಕರ ಮೇಲೆ ಘಟಿಸುತ್ತಿರುವ ಇಂತಹ ಪ್ರಕರಣಗಳಿಂದಾಗಿ ಕಾರ್ಮಿಕರ ಸುರಕ್ಷತೆಗೆ ಅನುಮಾನ ಮೂಡಿಸಿದೆಯೆಲ್ಲದೆ, ಅವಘಡ ಹಾಗೂ ಕಾರ್ಮಿಕರ ಮಾಹಿತಿಗಳನ್ನು ಕೆಲವು ಕಂಪನಿಗಳು ಮರೆಮಾಚುತ್ತಿದ್ದಾರೆ ಎಂಬ ಮಾತುಗಳಿವೆ. ಇವೆಲ್ಲ ಪರಿಶೀಲಿಸಬೇಕಾದ ಕಾರ್ಮಿಕ ಇಲಾಖೆ, ನಿದ್ದೆ ಮಾಡುತ್ತಿರುವಂತೆ ವರ್ತಿಸುತ್ತಿದೆ ಎಂಬುದು ಜನರ ಆಕ್ರೋಶವಾಗಿದೆ.

"ಕಳೆದ ಮೂರು ವರ್ಷಗಳಿಂದ ನಾನು ಇಲ್ಲಿ ಕೆಲಸ ಮಾಡುತ್ತಿರುವೆ. ಸದ್ಯ, ಪಾರ್ಮ ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ ಪಶ್ಚಿಮ ಬಂಗಾಳದಿದ ಬಂದೆನ್ನಲಾದ ಕಾರ್ಮಿಕ ಬಿಸ್ವಜೀತ್‌, ಅಪಾಯಕಾರಿ ರಾಸಾಯನಿಕ ಬಳಸುವ ವೇಳೆ ಕೈಗವಸು (ಗ್ಲೌಸ್ ) ಕೇಳಿದರೆ ಕಂಪನಿಯವರು ನೀಡುವುದಿಲ್ಲ ಎಂದು ನೋವು ತೋಡಿಕೊಂಡರು. "ನನಗೆ ತುಂಬಾ ನೋವಾಗುತ್ತಿದೆ, ಏನಾದರೂ ಮಾಡಿ ಎಂದು ಆರೋಗ್ಯ ಸಿಬ್ಬಂದಿ ಮುಂದೆ ಗೋಗರೆಯುತ್ತಿದ್ದ ಗಾಯಳುವಿನ ಸ್ಥಿತಿಗತಿ ಆಘಾತ ಮೂಡಿಸುವಂತಿತ್ತು.

ಹೆಚ್ಚಿನ ಚಿಕಿತ್ಸೆಗೆ ಅವರಿಗೆ ಜಿಲ್ಲಾಸ್ಪತ್ರೆಗೆ ಹೋಗಿ ಎಂದು ತಿಳಿಸಿತ್ತಾದರೂ, ಅಷ್ಟರಲ್ಲೇ ಕಂಪನಿಯ ಕೆಲವರ್ಯಾರೋ ತಮ್ಮ ಸಿಬ್ಬಂದಿಗಳ ಕಳುಹಿಸಿ, ಬಿಸ್ವಜೀತ್‌ನನ್ನು ಕಂಪನಿಗೆ ಹಿಂತಿರಿಗಿಸಿ ಕೊಂಡಿದ್ದಾರೆ ಎಂದು ಹೇಳಲಾಯಿತು. ತನ್ನ ಆಧಾರ್‌ ಕಾರ್ಡನ್ನು ಯಾರಿಗೂ ತೋರಿಸದಂತೆ, ತನ್ನ ಬಗ್ಗೆ ಯಾರಿಗೂ ಹೇಳದಂತೆ ಕಂಪನಿಯವರು ಸೂಚಿಸಿದ್ದಾರೆ. ಅನೇಕ ಕಾರ್ಮಿಕರ ಆಧಾರ್‌ ಕಾರ್ಡ್‌ಗಳನ್ನು ಕಂಪನಿಯವರೇ ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ ಎಂದು ಬಿಸ್ವಜೀತ್‌ ಕನ್ನಡಪ್ರಭದೆದುರು ಅಲವತ್ತುಕೊಂಡ.

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತವಾಗಿರುವಂತ ರಾಸಾಯನಿಕ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಬಹುತೇಕ ಉತ್ತರ ಭಾರತದ ರಾಜ್ಯಗಳ ಜನರಾಗಿದ್ದಾರೆ. ಕಾರ್ಮಿಕರಿಗೆ ಯಾವುದೇ ರೀತಿಯ ಸುರಕ್ಷಾ ಕವಚಗಳು ನೀಡದಿರುವುದರಿಂದ ಮೇಲಿಂದ ಮೇಲೆ ಅನೇಕ ದುರ್ಘಟನೆಗಳ ಸಂಭವಿಸುತ್ತಿವೆ. ಈ ಬಗ್ಗೆ ಅನೇಕ ಬಾರಿ ಸ್ಥಳೀಯರು ಕಾರ್ಮಿಕ ಇಲಾಖೆಯವರಿಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಳ್ಳದಿರುವುದು ಇದಕ್ಕೆಲ್ಲ ಕಾರಣವಾಗಿದೆ.

  ಮಹೇಶ ಕಣೇಕಲ್,

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿದ ಬಹುತೇಕ ರಾಸಾಯನಿಕ ಕಂಪನಿಗಳು ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿವೆ ಇದರಿಂದಾಗಿ ಇಲ್ಲಿನ ಜಲಚರಗಳ ಜೊತೆಗೆ ಜನರ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಹಾಗೂ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಜೀವಕ್ಕೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಮತ್ತು ಉತ್ತರ ಭಾರತದ ರಾಜ್ಯದ ಕಾರ್ಮಿಕರಿಗೆ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಈ ಬಗ್ಗೆ ಕಾರ್ಮಿಕ ಸಚಿವರು, ಇಲಾಖೆ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಅಧಿಕಾರಿಗಳು ವಿಶೇಷ ಗಮನ ಹರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ.

 ದೇವರಾಜ್ ನಾಯಕ್ ಕೂಡಲೂರು

Read more Articles on