ಕಬ್ಬಿಣ ಅದಿರು, ಮ್ಯಾಂಗನೀಸ್‌ ಗಣಿಗೆ ಒಪ್ಪಿಗೆ

| N/A | Published : May 10 2025, 01:05 AM IST / Updated: May 10 2025, 01:29 PM IST

ಸಾರಾಂಶ

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಏಳು ಮುಖ್ಯ ಖನಿಜ, 157 ಉಪ ಖನಿಜ ಹಾಗೂ 834 ನಿರ್ದಿಷ್ಟವಲ್ಲದ ಉಪ ಖನಿಜಗಳ ಗಣಿಗಾರಿಕೆಗೆ ಗುತ್ತಿಗೆ ನೀಡಲಾಗಿದ್ದು. ಈ ಪೈಕಿ 789 ಹೆಕ್ಟೇರ್‌ನಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್‌ ಅದಿರು ತೆಗೆಯಲು ಅನುಮತಿ ನೀಡಲಾಗಿದೆ.  

  ಬೆಂಗಳೂರು : ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಏಳು ಮುಖ್ಯ ಖನಿಜ, 157 ಉಪ ಖನಿಜ ಹಾಗೂ 834 ನಿರ್ದಿಷ್ಟವಲ್ಲದ ಉಪ ಖನಿಜಗಳ ಗಣಿಗಾರಿಕೆಗೆ ಗುತ್ತಿಗೆ ನೀಡಲಾಗಿದ್ದು. ಈ ಪೈಕಿ 789 ಹೆಕ್ಟೇರ್‌ನಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್‌ ಅದಿರು ತೆಗೆಯಲು ಅನುಮತಿ ನೀಡಲಾಗಿದೆ. ಜೊತೆಗೆ ಪ್ರಸಕ್ತ ಸಾಲಿನಲ್ಲಿ ಬರೋಬ್ಬರಿ 9 ಸಾವಿರ ಕೋಟಿ ರು. ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ.

2023ರಲ್ಲಿ ಬಳ್ಳಾರಿಯಲ್ಲಿ 251.43 ಹೆಕ್ಟೇರ್‌, 2024ರಲ್ಲಿ 417.49 ಹೆಕ್ಟೇರ್‌ ಸೇರಿ ಒಟ್ಟು 697 ಹೆಕ್ಟೇರ್‌, ಚಿತ್ರದುರ್ಗದಲ್ಲಿ 60 ಮತ್ತು ವಿಜಯನಗರದಲ್ಲಿ 32 ಹೆಕ್ಟೇರ್‌ ಸೇರಿ 789 ಹೆಕ್ಟೇರ್‌ನಲ್ಲಿ ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್‌ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಹಿತಿ ನೀಡಿದೆ.

ಗಣಿಗಾರಿಕೆಗೆ ಅರಣ್ಯ ಸಂರಕ್ಷಣೆ ಕಾಯ್ದೆ, ಅರಣ್ಯ ಸಂರಕ್ಷಣಾ ಕಾನೂನು ಹಾಗೂ ಕೇಂದ್ರ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಪಡೆದ ಬಳಿಕ ಗುತ್ತಿಗೆ ಆಧಾರದಲ್ಲಿ ನಿರ್ದಿಷ್ಟ (20 ವರ್ಷ ಗುತ್ತಿಗೆ) ಹಾಗೂ ನಿರ್ದಿಷ್ಟವಲ್ಲದ (30 ವರ್ಷ ಗುತ್ತಿಗೆ) ಎಂದು 2 ವಿಧದಲ್ಲಿ ಉಪ ಖನಿಜಗಳಿಗೆ ಅನುಮತಿ ನೀಡಲಾಗುತ್ತಿದೆ. ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಚಿಕ್ಕಬಳ್ಳಾಪುರ ಸೇರಿ ವಿವಿಧ ಜಿಲ್ಲೆಗಳಲ್ಲಿ ಪಿಂಕ್ ಪಾರ್ಫೆರ್ರಿ, ಗ್ರೇ ಗ್ರಾನೈಟ್‌, ಪಿಂಕ್ ಗ್ರಾನೈಟ್, ಡೋಲೋಮೈಟ್, ಬೈರೈಟ್, ಕಟ್ಟಡ ಕಲ್ಲು, ಕೋರಂಡಮ್, ಅಲಂಕಾರಿಕಾ ಶಿಲೆ ಸೇರಿ ಇತರೆ ಖನಿಜಗಳು ತೆಗೆಯಲು 157 ಉಪಖನಿಜ ಮತ್ತು 834 ನಿರ್ದಿಷ್ಟವಲ್ಲದ ಉಪಖನಿಜ ಗಣಿಗಾರಿಕೆಗೆ ಅನುಮೋದನೆ ನೀಡಲಾಗಿದೆ. ಪ್ರಸ್ತುತ ಅಂದಾಜು 13 ಸಾವಿರ ಎಕರೆ ಪ್ರದೇಶದಲ್ಲಿ ಗುತ್ತಿಗೆ ಆಧಾರದಲ್ಲಿ 2,802 ಅಧಿಕೃತ ಕಲ್ಲು ಗಣಿಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

9 ಸಾವಿರ ಕೋಟಿ ರಾಜಸ್ವದ ಗುರಿ:

ರಾಜ್ಯದಲ್ಲಿ ಗಣಿಗಾರಿಕೆಯಿಂದ ಪ್ರಸಕ್ತ ಸಾಲಿನಲ್ಲಿ ಸುಮಾರು 9 ಸಾವಿರ ಕೋಟಿ ರಾಜಸ್ವ ಸಂಗ್ರಹಿಸುವ ಗುರಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹೊಂದಿದೆ. ಕಳೆದ ಐದು ವರ್ಷಗಳಲ್ಲಿ 2020-21ರಲ್ಲಿ 3,700 ಕೋಟಿ ರು., 2022-23ರಲ್ಲಿ 6,500 ಕೋಟಿ ರು, 2023-24ರಲ್ಲಿ 7,500 ಕೋಟಿ ರು. ಮತ್ತು 2024-25ರಲ್ಲಿ 7,250 ಕೋಟಿ ರು.ರಾಜಸ್ವ ಸಂಗ್ರಹವಾಗಿತ್ತು. ಆದರೆ, 2021-22ನೇ ಸಾಲಿನಲ್ಲಿ ಕೋವಿಡ್‌ ಹಿನ್ನೆಲೆಯಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಹೀಗಾಗಿ ರಾಜಸ್ವ ಸಂಗ್ರಹದ ಮಾಹಿತಿ ಸಮರ್ಪಕವಾಗಿ ಲಭ್ಯವಾಗಿಲ್ಲ.

ಅಕ್ರಮ ತಡೆಗೆ ಡ್ರೋನ್‌ ಸರ್ವೆ:

ಅಕ್ರಮ ಗಣಿಕೆಗಾರಿಕೆ ತಡೆಗೆ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಸಹಯೋಗದಲ್ಲಿ ಗಣಿ ಮತ್ತು ಭೂವಿಜ್ಞಾನ ಡ್ರೋನ್‌ ಸರ್ವೆ ಕೈಗೊಂಡಿದೆ. ಈ ಮೂಲಕ ಸುಲಭವಾಗಿ ಅಕ್ರಮ ಗಣಿಗಾರಿಕೆ ಪತ್ತೆ ಮಾಡಬಹುದಾಗಿದೆ. ನಿಗದಿಗಿಂತ ಹೆಚ್ಚಿನ ಪ್ರದೇಶದಲ್ಲಿ ಅಥವಾ ಪ್ರಮಾಣದಲ್ಲಿ ಕಲ್ಲು, ಮರಳು ತೆಗೆದರೆ ಡ್ರೋನ್‌ನಿಂದ ಪತ್ತೆಯಾಗಲಿದೆ. ಇದರಿಂದ ಗುತ್ತಿಗೆದಾರರ ಪರವಾನಗಿ ರದ್ದುಪಡಿಸಲು ಕ್ರಮಕೈಗೊಳ್ಳಬಹುದಾಗಿದೆ. ಜೊತೆಗೆ ಒಂದು ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಕಲ್ಲು, ಮರಳು, ಅದಿರು ಸಿಗಲಿದೆ ಎಂಬ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗಲಿದೆ.

ಅನಧಿಕೃತ ಗಣಿಗಾರಿಕೆ ನಿಯಂತ್ರಣಕ್ಕೆ ಸಾಗಣೆ ಮತ್ತು ದಾಸ್ತಾನು ವಿರುದ್ಧ ಕ್ರಮವಹಿಸಲು ಹಾಗೂ ತಡೆಗಟ್ಟಲು ಕಂದಾಯ, ಅರಣ್ಯ, ಪೊಲೀಸ್‌, ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ಅಧಿಕಾರ ನೀಡಿ ಇವರ ನೇತೃತ್ವದಲ್ಲಿ ಗಸ್ತು ತಂಡಗಳನ್ನು ರಚಿಸಿದ್ದು, ಗಸ್ತು ಕಾರ್ಯವೂ ನಡೆಯುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

2140 ಪ್ರಕರಣ ದಾಖಲು

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಮರಳುಗಾರಿಕೆ ದಂಧೆ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ದಂಧೆಕೋರರು ಪ್ರಭಾವಿಗಳಾಗಿರುವುದರಿಂದ ಇದನ್ನು ನಿಯಂತ್ರಿಸಲು ಅಧಿಕಾರಿಗಳ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ. ಹೀಗಿದ್ದರೂ ಕಳೆದ ನಾಲ್ಕು ವರ್ಷಗಳಲ್ಲಿ ನಿಯಮ ಮೀರಿ ಅಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸುಮಾರು 2140 ಪ್ರಕರಣ, 26.47 ಕೋಟಿ ರು.ಗಳಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.